ADVERTISEMENT

ಕುಸ್ತಿ: ಏಷ್ಯನ್ ಚಾಂಪಿಯನ್‌ಷಿಪ್‌ಗೆ ಭಜರಂಗ್ ಪೂನಿಯಾ

ಪಿಟಿಐ
Published 24 ಮಾರ್ಚ್ 2022, 19:31 IST
Last Updated 24 ಮಾರ್ಚ್ 2022, 19:31 IST
ಭಜರಂಗ್ ಪೂನಿಯಾ
ಭಜರಂಗ್ ಪೂನಿಯಾ   

ನವದೆಹಲಿ: ಟೋಕಿಯೊ ಒಲಿಂಪಿಕ್ ಪದಕವಿಜೇತ ಕುಸ್ತಿಪಟು ಭಜರಂಗ್ ಪೂನಿಯಾ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಸ್ಪರ್ಧಿಸಲಿರುವ ಭಾರತ ತಂಡದಲ್ಲಿ ಸ್ಥಾನ ಗಳಿಸಿದ್ದಾರೆ.

ಒಲಿಂಪಿಕ್ಸ್‌ ನಂತರ ಇದೇ ಮೊದಲ ಬಾರಿಗೆ ಕುಸ್ತಿಕಣಕ್ಕೆ ಮರಳಿದ ಭಜರಂಗ್ ಗುರುವಾರ ನಡೆದ ಟ್ರಯಲ್ಸ್‌ನಲ್ಲಿ 4–2ರಿಂದ ರೋಹಿತ್ ವಿರುದ್ಧ ಗೆದ್ದು 65 ಕೆ.ಜಿ ವಿಭಾಗದಲ್ಲಿ ಸ್ಥಾನ ಪಡೆದರು.

ಭಜರಂಗ್, ರವಿ ದಹಿಯಾ ಮತ್ತು ದೀಪಕ್ ಪೂನಿಯಾ ಅವರಿಗೆ ಟ್ರಯಲ್ಸ್‌ನಲ್ಲಿ ನೇರ ಫೈನಲ್‌ನಲ್ಲಿ ಆಡಲು ರಾಷ್ಟ್ರೀಯ ಕುಸ್ತಿ ಫೆಡರೇಷನ್ ಅವಕಾಶ ನೀಡಿತು. 57 ಕೆ.ಜಿ ವಿಭಾಗದಲ್ಲಿ ರವಿಗೆ ಅಮನ್ ಅವರಿಂದ ವಾಕ್‌ಓವರ್ ಲಭಿಸಿತು. ಅದರಿಂದಾಗಿ ಅವರೂ ತಂಡಕ್ಕೆ ಆಯ್ಕೆಯಾದರು. 86 ಕೆ.ಜಿ ವಿಭಾಗದಲ್ಲಿ ದೀಪಕ್ ಕೂಡ ಸ್ಥಾನ ಗಳಿಸಿದರು. ಅವರು 6–0ಯಿಂದ ವಿನೋದ್ ಎದುರು ಜಯಿಸಿದರು.

ADVERTISEMENT

ಛತ್ರಸಾಲಾ ಒಳಾಂಗಣದಲ್ಲಿ ನಡೆದ ಟ್ರಯಲ್ಸ್‌ನ 74 ಕೆ.ಜಿ. ವಿಭಾಗದಲ್ಲಿ ಯಶ್ ತುಷೀರ್ ಕೂಡ ಗೆದ್ದರು. ಮಂಗಲ್ (61ಕೆಜಿ), ನವೀನ್ (70ಕೆಜಿ), ಗೌರವ್ ಬಲಿಯಾನ್ (79ಕೆಜಿ), ಸತ್ಯವ್ರತ್ ಕಡಿಯಾನ್ (97 ಕೆಜಿ) ಫ್ರೀಸ್ಟೈಲ್ ಕುಸ್ತಿಯಲ್ಲಿ ಗೆದ್ದು ತಂಡದಲ್ಲಿ ಸ್ಥಾನ ಗಳಿಸಿದರು.

ಅಶಿಸ್ತು; ನಿಶಾಗೆ ಶಿಕ್ಷೆ
23 ವರ್ಷದೊಳಗಿನವರ ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಪದಕ ಜಯಿಸಿರುವ ನಿಶಾ ದಹಿಯಾ ಮತ್ತು ಇನ್ನೂ ಕೆಲವು ಮಹಿಳಾ ಕುಸ್ತಿಪಟುಗಳನ್ನು ಅಶಿಸ್ತಿನ ನಡವಳಿಕೆ ತೋರಿದ್ದ ರಾಷ್ಟ್ರೀಯ ಶಿಬಿರದಿಂದ ಹೊರಹಾಕಲಾಯಿತು. ಅಲ್ಲದೇ ಅವರು ಏಷ್ಯನ್ ಚಾಂಪಿಯನ್‌ಷಿಪ್ ಟ್ರಯಲ್ಸ್‌ನಲ್ಲಿ ಭಾಗವಹಿಸುವದನ್ನು ನಿರ್ಬಂಧಿಸಲಾಯಿತು.

ಲಖನೌನದ ಸಾಯ್ ಸೆಂಟರ್‌ನಲ್ಲಿ ನಡೆದ ಟ್ರಯಲ್ಸ್‌ನಲ್ಲಿ 65 ಕೆಜಿ ವಿಭಾಗದಲ್ಲಿ ನಿಶಾ ಭಾಗವಹಿಸಬೇಕಿತ್ತು. ಅವರಲ್ಲದೇ ಹನಿ ಕುಮಾರಿ (50ಕೆಜಿ), ಅಂಕುಶಾ (53ಕೆಜಿ), ಅಂಜು (55ಕೆಜಿ), ರಾಮನ್ (55ಕೆಜಿ), ಗೀತಾ (59ಕೆಜಿ), ಭತೇರಿ (65ಕೆಜಿ), ಪ್ರಿಯಾಂಕಾ (65ಕೆಜಿ), ನೈನಾ (68ಕೆಜಿ) ಮತ್ತು ಪೂಜಾ (76ಕೆಜಿ) ಅವರು ಕೂಡ ಅಶಿಸ್ತಿನ ನಡವಳಿಕೆಯಿಂದಾಗಿ ಸ್ಥಾನ ಕಳೆದುಕೊಂಡಿದ್ದಾರೆ.ಅನುಭವಿ ಕುಸ್ತಿಪಟು ಗೀತಾ ಪೋಗಟ್ ಗಾಯದಿಂದಾಗಿ ಶಿಬಿರದಿಂದ ಹೊರಬಿದ್ದಿದ್ದಾರೆ.

‘ಯಾವುದೇ ರೀತಿಯ ಅಶಿಸ್ತನ್ನು ಸಹಿಸುವುದಿಲ್ಲ. ಅದಕ್ಕಾಗಿ ಕಠಿಣ ಕ್ರಮ ಕೈಗೊಳ್ಳುವುದರಿಂದ ಹಿಂಜರಿಯುವುದಿಲ್ಲ’ ಎಂದು ಭಾರತ ಕುಸ್ತಿ ಫೆಡರೇಷನ್ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.