ADVERTISEMENT

ನನಸಾಗದ ಬಲ್ಬಿರ್ ಸಿಂಗ್ ಅವರ ಆ ಕನಸು...

ಪಿಟಿಐ
Published 25 ಮೇ 2020, 17:22 IST
Last Updated 25 ಮೇ 2020, 17:22 IST
ಧ್ಯಾನ್‌ಚಂದ್‌ ಅವರು ಬಳಸುತ್ತಿದ್ದ ಹಾಕಿ ಸ್ಟಿಕ್‌ ಜೊತೆ ಬಲ್ಬೀರ್‌ ಸಿಂಗ್‌ –ಎಎಫ್‌ಪಿ ಚಿತ್ರ 
ಧ್ಯಾನ್‌ಚಂದ್‌ ಅವರು ಬಳಸುತ್ತಿದ್ದ ಹಾಕಿ ಸ್ಟಿಕ್‌ ಜೊತೆ ಬಲ್ಬೀರ್‌ ಸಿಂಗ್‌ –ಎಎಫ್‌ಪಿ ಚಿತ್ರ    

ನವದೆಹಲಿ:ದಶಕಗಳ ಕಾಲ ದೇಶಕ್ಕಾಗಿ ಆಡಿ, ಅನೇಕ ಮೈಲುಗಲ್ಲುಗಳನ್ನು ಸ್ಥಾಪಿಸಿದ್ದ ಬಲ್ಬೀರ್‌ ಅವರಿಗೆ ಅಂತಿಮ ಬಯಕೆಯೊಂದಿತ್ತು. ಅದನ್ನು ಸಾಕಾರಗೊಳಿಸಿಕೊಳ್ಳಲು ಅವರು ಎಂಟು ವರ್ಷಗಳಿಂದಲೂ ಪ್ರಯತ್ನಿಸುತ್ತಲೇ ಇದ್ದರು. ಅಷ್ಟಾದರೂ ಅವರ ಆಸೆ ಈಡೇರಲೇ ಇಲ್ಲ.

1985ರ ಆಗಸ್ಟ್‌ನಲ್ಲಿ ಭಾರತೀಯ ಕ್ರೀಡಾ ಪ್ರಾಧಿಕಾರದ (ಸಾಯ್‌) ಕಾರ್ಯದರ್ಶಿ, ಬಲ್ಬೀರ್‌ ಅವರನ್ನು ಭೇಟಿಯಾಗಿದ್ದರು.ನಿಮ್ಮಲ್ಲಿರುವ ಸ್ಮರಣಿಕೆಗಳನ್ನು ನೀಡಿದರೆ ಅವುಗಳನ್ನು ನವದೆಹಲಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಜವಾಹರಲಾಲ್‌ ನೆಹರೂ ಕ್ರೀಡಾ ವಸ್ತು ಸಂಗ್ರಹಾಲಯದಲ್ಲಿ ಸಂರಕ್ಷಿಸಿ ಇಡುವುದಾಗಿ ಅವರು ಮನವಿ ಮಾಡಿದ್ದರು.

ಅದಕ್ಕೆ ಒಪ್ಪಿದ್ದ ಬಲ್ಬೀರ್‌ ಅವರು ಪದ್ಮಶ್ರೀ ಪುರಸ್ಕಾರ, ಒಲಿಂಪಿಕ್ಸ್‌ ಸೇರಿದಂತೆ ಇತರ ಕೂಟಗಳಲ್ಲಿ ಗೆದ್ದ ಒಟ್ಟು 36 ಪದಕಗಳು, ಮೆಲ್ಬರ್ನ್‌ ಒಲಿಂಪಿಕ್ಸ್‌ ವೇಳೆ ಧರಿಸಿದ್ದ ಬ್ಲೇಜರ್‌ ಹಾಗೂ 100ಕ್ಕೂ ಅಧಿಕ ಅಪರೂಪದ ಫೋಟೊಗಳನ್ನು ನೀಡಿದ್ದರು.

ADVERTISEMENT

ಆ ಸ್ಮರಣಿಕೆಗಳು ಕಾಣೆಯಾಗಿರುವ ವಿಷಯ ಕೆಲ ವರ್ಷಗಳ ಹಿಂದೆ ಬಹಿರಂಗಗೊಂಡಿತ್ತು. ಅದು ಗೊತ್ತಾದ ಕೂಡಲೇ ಅವುಗಳನ್ನು ಮರಳಿ ಪಡೆಯಲು ಬಲ್ಬೀರ್‌ ಅವರು ಸಾಕಷ್ಟು ಪ್ರಯತ್ನಿಸಿದ್ದರು.

ಇಳಿ ವಯಸ್ಸಿನಲ್ಲೂ ಅವರು ಮೊಮ್ಮಗ ಕಬೀರ್‌ ಜೊತೆ ಅನೇಕ ಬಾರಿ ಮೊಹಾಲಿಯಿಂದ ದೆಹಲಿಗೆ ಬಂದು ಕ್ರೀಡಾ ಸಚಿವರು, ಸಾಯ್‌ ಕಾರ್ಯದರ್ಶಿಗಳು ಮತ್ತು ಸಂಬಂಧಪಟ್ಟ ಅಧಿಕಾರಿಗಳನ್ನು ಭೇಟಿ ಮಾಡಿ ಮನವಿ ಮಾಡಿದ್ದರು.ಹೀಗಿದ್ದರೂ ಪ್ರಯೋಜನವಾಗಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.