ಬಜರಂಗ್ ಪೂನಿಯಾ
(ಪಿಟಿಐ ಚಿತ್ರ)
ನವದೆಹಲಿ: ಉದ್ದೀಪನ ಮದ್ದು ಪರೀಕ್ಷೆಗೆ ಮಾದರಿ ನೀಡಲು ನಿರಾಕರಿಸಿದ ಕಾರಣಕ್ಕೆ ನಾಲ್ಕು ವರ್ಷಗಳಿಗೆ ಅಮಾನತುಗೊಂಡಿರುವ ಒಲಿಂಪಿಕ್ ಪದಕ ವಿಜೇತ ಭಾರತೀಯ ಕುಸ್ತಿಪಟು ಬಜರಂಗ್ ಪೂನಿಯಾ, 'ಒಂದು ವೇಳೆ ಬಿಜೆಪಿಗೆ ಸೇರಿದರೆ ನನ್ನ ಮೇಲಿನ ಅಮಾನತು ತೆರವುಗೊಳಿಸಲಿದೆ' ಎಂದು ಪ್ರತಿಕ್ರಿಯಿಸಿದ್ದಾರೆ.
ಮಾರ್ಚ್ 10ರಂದು ರಾಷ್ಟ್ರೀಯ ತಂಡಕ್ಕೆ ಆಯ್ಕೆ ಟ್ರಯಲ್ಸ್‌ನಲ್ಲಿ ಮಾದರಿ ನೀಡಲು ನಿರಾಕರಿಸುವ ಮೂಲಕ ಬಜರಂಗ್ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಘಟಕ (ಎನ್‌ಎಡಿಎ–ನಾಡಾ) ಹೇಳಿದೆ.
ಇದೇ ಆರೋಪದಲ್ಲಿ ಏಪ್ರಿಲ್ 23ರಂದು ಬಜರಂಗ್ ಅವರನ್ನು ನಾಡಾ ಅಮಾನತು ಮಾಡಿತ್ತು. ಅದರಂತೆ ವಿಶ್ವ ಕುಸ್ತಿ ಒಕ್ಕೂಟವೂ (ಯುಡಬ್ಲ್ಯುಡಬ್ಲ್ಯು) ಅಮಾನತು ಮಾಡಿತ್ತು.
'ನನಗೆ ಆಘಾತವಾಗಿಲ್ಲ. ಕಳೆದೊಂದು ವರ್ಷದಿಂದ ವಿವಾದದ ಕುರಿತು ಚರ್ಚೆ ನಡೆಯುತ್ತಿದೆ. ನಾಡಾಗೆ ಮಾದರಿ ನೀಡಲು ನಾನು ನಿರಾಕರಿಸಿಲ್ಲ ಎಂದು ಹಿಂದೆಯೂ ಸ್ಪಷ್ಟಪಡಿಸಿದ್ದೇನೆ. ಉದ್ದೀಪನ ಮದ್ದು ಪರೀಕ್ಷೆ ನಡೆಸಲು ವಾಯಿದೆ ಮುಗಿದ ಕಿಟ್‌ನೊಂದಿಗೆ (2023, ಡಿಸೆಂಬರ್) ನನ್ನ ಮನೆಗೆ ಭೇಟಿ ನೀಡಿದ್ದರು. ಈ ಕುರಿತು ಸಾಮಾಜಿಕ ಮಾಧ್ಯಮದಲ್ಲೂ ನಾನು ಪೋಸ್ಟ್ ಹಂಚಿದ್ದೇನೆ' ಎಂದು ಅವರು ತಿಳಿಸಿದ್ದಾರೆ.
'ವಾಯಿದೆ ಮುಗಿದ ಕಿಟ್ ಆಟಗಾರನಿಗೆ ನೀಡುವಂತಿಲ್ಲ. ನನ್ನ ತಂಡದ ಗಮನಕ್ಕೂ ಬಂದಿದೆ. 2020, 2021, 2022ರ ವಾಯಿದೆ ಮುಗಿದ ಕಿಟ್ ನೀಡಲಾಗಿತ್ತು. ನಾನು ಪರೀಕ್ಷೆಗೆ ಮೂತ್ರದ ಮಾದರಿಯನ್ನು ನೀಡಿದ್ದೇನೆ. ಆದರೆ ನನ್ನ ತಂಡವು ಕಿಟ್ ಪರಿಶೀಲಿಸಿದಾಗ ವಾಯಿದೆ ಮುಗಿದಿದೆ ಎಂದು ವಿಚಾರ ತಿಳಿದು ಬಂದಿದೆ. ಆದ್ದರಿಂದ ಕಿಟ್‌ನ ವಿಡಿಯೊ ಮಾಡಿ ನಾಡಾಗೆ ಮೇಲ್ ಮಾಡಿದ್ದೇವೆ. ಅವರ ತಪ್ಪಿನ ಬಗ್ಗೆ ಮಾಹಿತಿ ನೀಡಿದ್ದೇವೆ. ಆದರೆ ತಪ್ಪು ಒಪ್ಪಿಕೊಳ್ಳಲು ಅವರು ಸಿದ್ಧರಿರಲಿಲ್ಲ' ಎಂದು ಹೇಳಿದ್ದಾರೆ.
ಮಹಿಳಾ ಕುಸ್ತಿಪಟುಗಳ ಪ್ರತಿಭಟನೆಗೆ ನಾವು ಬೆಂಬಲ ನೀಡಿದ್ದರಿಂದ ಸರ್ಕಾರವು ನನ್ನ ಮೇಲೆ ಸೇಡು ತೀರಿಸಲು ಯತ್ನಿಸುತ್ತಿದೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.
'ನಾನು ಕಳೆದ 10-12 ವರ್ಷಗಳಿಂದ ಅಖಾಡದಲ್ಲಿದ್ದೇನೆ. ಎಲ್ಲ ಪಂದ್ಯಾವಳಿಗೂ ಮುನ್ನ ಮಾದರಿ ನೀಡುತ್ತಿದ್ದೇನೆ. ಆದರೆ ನಮ್ಮನ್ನು ಒಡೆದು, ಅವರಿಗೆ ತಲೆಬಾಗುವಂತೆ ಮಾಡುವುದು ಸರ್ಕಾರದ ಉದ್ದೇಶವಾಗಿದೆ. ಒಂದು ವೇಳೆ ಬಿಜೆಪಿಗೆ ಸೇರಿದರೆ ನನ್ನ ಮೇಲಿನ ಅಮಾನತು ತೆರವುಗೊಳಿಸಬಹುದು' ಎಂದು ಅವರು ಹೇಳಿದರು.
ಬಜರಂಗ್ ಮೇಲಿನ ಶಿಕ್ಷೆಯ ಪ್ರಕಾರ, 2028ರ ಏಪ್ರಿಲ್ ವರೆಗೆ ಸ್ಪರ್ಧಾತ್ಮಕ ಕುಸ್ತಿಗೆ ಮರಳುವಂತಿಲ್ಲ. ಅಲ್ಲದೆ ವಿದೇಶದಲ್ಲಿ ತರಬೇತುದಾರ ಕೆಲಸ ವಹಿಸಲು ಸಾಧ್ಯವಿಲ್ಲ. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಬಜರಂಗ್ ಕಂಚಿನ ಪದಕ ಗೆದ್ದಿದ್ದರು.
ಪ್ರಸಕ್ತ ಸಾಲಿನಲ್ಲೇ ಬಜರಂಗ್ ಪೂನಿಯಾ ಹಾಗೂ ವಿನೇಶ್ ಪೋಗಟ್ ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದರು. ಅಲ್ಲದೆ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದಂತೆ ಭಾರತ ಕುಸ್ತಿ ಫೆಡರೇಷನ್‌ನ (ಡಬ್ಲ್ಯುಎಫ್‌ಐ) ಮಾಜಿ ಅಧ್ಯಕ್ಷ ಬ್ರಿಜ್ ಭೂಷನ್ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.