ADVERTISEMENT

ಬಿಟಿಸಿ | ಸಾವರಿನ್‌ ಕಿಂಗ್‌, ಫಿನ್‌ಬಾಸ್‌ ನಡುವೆ ಪೈಪೋಟಿ

ಜವಾರಿಯಾ ಎಸ್‌.ಪೂನಾವಾಲಾ ಬೆಂಗಳೂರು ಬೇಸಿಗೆ ಡರ್ಬಿಗೆ ಬಿಟಿಸಿ ಸಜ್ಜು

​ಪ್ರಜಾವಾಣಿ ವಾರ್ತೆ
Published 12 ಜುಲೈ 2025, 15:31 IST
Last Updated 12 ಜುಲೈ 2025, 15:31 IST
   

ಬೆಂಗಳೂರು: ರೇಸ್‌ಪ್ರಿಯರು ಕಾತುರದಿಂದ ಎದುರುನೋಡುತ್ತಿರುವ ವರ್ಣರಂಜಿತ ‘ಬೆಂಗಳೂರು ಬೇಸಿಗೆ ಡರ್ಬಿ’ಗೆ ಬೆಂಗಳೂರು ಟರ್ಫ್‌ ಕ್ಲಬ್‌ (ಬಿಟಿಸಿ) ಸಜ್ಜಾಗಿದೆ. ಜವಾರಿಯಾ ಎಸ್‌. ಪೂನಾವಾಲಾ ಪ್ರಾಯೋಜಕತ್ವದಲ್ಲಿ ಏರ್ಪಡಿಸಿರುವ ಡರ್ಬಿ ಸುಮಾರು ₹2.5 ಕೋಟಿ ಬಹುಮಾನದ ಮೊತ್ತ ಹೊಂದಿದೆ.

ಡರ್ಬಿ ವಿಜೇತ ಕುದುರೆಗೆ ಸುಮಾರು ₹ 1.22 ಕೋಟಿ ಮತ್ತು ₹ 3.00 ಲಕ್ಷ ಮೌಲ್ಯದ ಆಕರ್ಷಕ ಟ್ರೋಫಿ ದೊರಕಲಿದೆ. ಕಣದಲ್ಲಿ ಆರು ಹೆಣ್ಣು ಕುದುರೆಗಳು ಸೇರಿದಂತೆ ಒಟ್ಟು 16 ಕುದುರೆಗಳು ಸೆಣಸಲಿದ್ದು, ರೋಚಕ ಫಲಿತಾಂಶ ನಿರೀಕ್ಷಿಸಲಾಗಿದೆ. ಇವುಗಳಲ್ಲಿ, ಫಿನ್‌ಬಾಸ್‌ ಮತ್ತು ಸಾವರಿನ್‌ ಕಿಂಗ್‌ ಪ್ರಮುಖ ಸ್ಪರ್ಧಿಗಳು.

ಜುವೆನೈಲ್‌ ಮಿಲಿಯನ್‌ ರೇಸ್‌ನಲ್ಲಿ ಸಾವರಿನ್‌ ಕಿಂಗ್‌ ಗೆದ್ದಾಗ, ಫಿನ್‌ಬಾಸ್‌ ತೀವ್ರ ಅಡಚಣೆಯಿಂದಾಗಿ ಎರಡನೇ ಸ್ಥಾನ ಪಡೆದಿತ್ತು. ಆದರೆ, ನಂತರದ ಫಿಲ್ಲೀಸ್‌ ಚಾಂಪಿಯನ್‌ಷಿಪ್‌ ಸ್ಟೇಕ್ಸ್‌ನಲ್ಲಿ ನಿರಾಯಾಸ ಗೆಲುವು ಸಾಧಿಸಿದೆ. ತೀವ್ರ ಪೈಪೋಟಿಯಿದ್ದ ಕೋಲ್ಟ್ಸ್‌ ಚಾಂಪಿಯನ್‌ಷಿಪ್‌ ಸ್ಟೇಕ್ಸ್‌ ರೇಸ್‌ನಲ್ಲಿ ನಂತರ ಸಾವರಿನ್‌ ಕಿಂಗ್‌ ರೋಚಕ ಗೆಲುವು ಪಡೆದಿದೆ. 

ADVERTISEMENT

ಫಿನ್‌ಬಾಸ್‌ ನಿರಾಯಾಸವಾಗಿ ಗೆದ್ದಿದ್ದರೂ, ತನ್ನ ಎರಡೂ ಗೆಲುವಿನಲ್ಲಿ ಕೊನೆಯ 400 ಮೀಟರ್ಸ್‌ನಲ್ಲಿ ಸಾವರಿನ್‌ ಕಿಂಗ್‌ ತೋರಿರುವ ವೇಗವರ್ಧನೆ ಗಮನಿಸಿದಲ್ಲಿ, ಸಾವರಿನ್‌ ಕಿಂಗ್‌ ತುಸು ಮೇಲುಗೈ ಹೊಂದಿದೆ. ಕೋಲ್ಟ್ಸ್‌ ಚಾಂಪಿಯನ್‌ಷಿಪ್‌ ಸ್ಟೇಕ್ಸ್‌ನಲ್ಲಿ ಇದೇ ಕುದುರೆಗೆ ಅತ್ಯಂತ ನಿಕಟ ಅಂತರದಲ್ಲಿ ಸ್ಟಾರ್ಮಿ ಸೀ, ರೆಡ್‌ ಬಿಷಪ್‌ ಮತ್ತು ಪ್ರೊಕೊಫಿವ್‌ ಸೋತಿವೆ. ಈ ಕುದುರೆಗಳ ಗೆಲುವಿನ ಅವಕಾಶವನ್ನು ತಳ್ಳಿಹಾಕುವಂತಿಲ್ಲ.  

ಭಾನುವಾರ ಎಂಟು ರೇಸ್‌ಗಳನ್ನು ಏರ್ಪಡಿಸಲಾಗಿದೆ. ಮೊದಲನೇ ರೇಸ್‌ ಮಧ್ಯಾಹ್ನ 1:15ಕ್ಕೆ ಪ್ರಾರಂಭವಾಗಲಿದೆ. ಜವಾರಿಯಾ ಎಸ್‌.ಪೂನಾವಾಲಾ ಬೆಂಗಳೂರು ಬೇಸಿಗೆ ಡರ್ಬಿಯನ್ನು ಸಂಜೆ 4ಕ್ಕೆ ಏರ್ಪಡಿಸಲಾಗಿದೆ.  

ಉಚಿತ ಬುದ್ಧಿಕೌಶಲ ಸ್ಪರ್ಧೆ: ರೇಸ್‌ ಪ್ರಿಯರಿಗಾಗಿ ಉಚಿತ ಬುದ್ಧಿಕೌಶಲ ಸ್ಪರ್ಧೆ ಏರ್ಪಡಿಸಲಾಗಿದೆ. ಜವಾರಿಯಾ ಎಸ್‌.ಪೂನಾವಾಲಾ ಬೆಂಗಳೂರು ಬೇಸಿಗೆ ಡರ್ಬಿ ರೇಸ್‌ನಲ್ಲಿ ಕ್ರಮವಾಗಿ ಮೊದಲ ನಾಲ್ಕು ಸ್ಥಾನ ಪಡೆಯುವ ಕುದುರೆಗಳನ್ನು ನಾಮನಿರ್ದೇಶನ ಮಾಡಿ ವಿಜೇತರಾದವರಿಗೆ ನಾಲ್ಕು ಬಹುಮಾನ ವಿತರಿಸಲಿದೆ. 

ಡರ್ಬಿ ನಡೆಯುವ ಸಮಯ: ಸಂಜೆ 4

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.