
ಲೋಪಾಮುದ್ರ... ಕರ್ನಾಟಕದ ಬ್ಯಾಸ್ಕೆಟ್‌ಬಾಲ್ ಪ್ರಿಯರು ಒಂದು ದಶಕದ ಈಚೆಗೆ ಈ ಹೆಸರನ್ನು ಕೇಳದೇ ಇರಲು ಸಾಧ್ಯವೇ ಇಲ್ಲ. ಕೊಡಗಿನಲ್ಲಿ ಜನಿಸಿ ಬೆಂಗಳೂರಿನ ಬಿಷಪ್ ಕಾಟನ್ ಶಾಲೆಯಲ್ಲಿ ಓದಿದ ಲೋಪಾಮುದ್ರ ಮೌಂಟ್ಸ್ ಕ್ಲಬ್‌ನಲ್ಲಿ ಬ್ಯಾಸ್ಕೆಟ್‌ಬಾಲ್ ಪ್ರತಿಭೆಯನ್ನು ಬೆಳಗಿದವರು. ಈಗ ಭಾರತ ತಂಡದ ಆಟಗಾರ್ತಿ.
ಕಳೆದ ವಾರ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಫಿಬಾ ಮಹಿಳೆಯರ ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ತಂಡದ ಪರವಾಗಿ ಪದಾರ್ಪಣೆ ಮಾಡಿದ ಲೋಪಾಮುದ್ರ ಭಾರತ ತಂಡದಲ್ಲಿ ಆಡಿದ ಕರ್ನಾಟಕದ 25ನೇ ಪ್ರತಿಭೆ.
ಅಥ್ಲೀಟ್ ಕೊಕ್ಕಲೇರ ತಿಮ್ಮಯ್ಯ ಮತ್ತು ಪೂಜಾ ಅವರ ಪುತ್ರಿ ಲೋಪಾಮುದ್ರ ಜನಿಸಿದ್ದು ಮಡಿಕೇರಿ ತಾಲ್ಲೂಕಿನ ಮುಕ್ಕೋಡ್ಲುವಿನಲ್ಲಿ. ಮಡಿಕೇರಿಯಲ್ಲಿ ಪ್ಲೇ ಸ್ಕೂಲ್‌ನಲ್ಲಿ ಕಲಿತ ನಂತರ ಬೆಂಗಳೂರೇ ಸರ್ವಸ್ವವಾಯಿತು. ಶಾಲಾ ದಿನಗಳಲ್ಲಿ 100, 200 ಮೀಟರ್ಸ್ ಓಟ, ಜಂಪ್ ಮತ್ತು ಥ್ರೋಗಳಲ್ಲಿ ಚಾಂಪಿಯನ್ ಆಗುತ್ತಿದ್ದ ಲೋಪಾಮುದ್ರ ಅವರಲ್ಲಿರುವ ಬ್ಯಾಸ್ಕೆಟ್‌ಬಾಲ್ ಆಟಗಾರ್ತಿಯನ್ನು ಗುರುತಿಸಿದ್ದು ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಆರ್ಥರ್. ಬ್ಯಾಸ್ಕೆಟ್‌ಬಾಲ್‌ನಲ್ಲಿ ಮಿಂಚಿದ ಅವರ ಪ್ರತಿಭೆಗೆ ಸಾಣೆ ಹಿಡಿದದ್ದು ಮೌಂಟ್ಸ್ ಕ್ಲಬ್‌ನ ಕೊಚ್ ಜಯವಂತಿ. ಅಂತರ ಕ್ಲಬ್ ಟೂರ್ನಿಗಳಲ್ಲಿ ಬಹಳ ಬೇಗ ಹೆಸರು ಗಳಿಸಿದ ಲೋಪಾಮುದ್ರ ರಾಜ್ಯ ತಂಡದಲ್ಲೂ ಬೆಳಗಿದರು. ಹೀಗಾಗಿ 16 ವರ್ಷದೊಳಗಿನವರ ಭಾರತ ತಂಡದಲ್ಲಿ ಸ್ಥಾನ ಗಳಿಸಲು ಕಷ್ಟವಾಗಲಿಲ್ಲ.
2013ರ ಫಿಬಾ 16 ವರ್ಷದೊಳಗಿನವರ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಅವರು ತಮ್ಮ ನೈಜ ಸಾಮರ್ಥ್ಯವನ್ನು ತೋರಿದರು. ಜಪಾನ್, ಚೀನಾ, ಮಲೇಷ್ಯಾ, ಚೀನಾ ತೈಪೆ, ದಕ್ಷಿಣ ಕೊರಿಯಾ ಮತ್ತು ಕಜಕಸ್ತಾನ ವಿರುದ್ಧದ ಪಂದ್ಯಗಳಲ್ಲಿ ಅಮೋಘ ಸಾಧನೆ ಮಾಡಿದರು. ಚಾಂಪಿಯನ್‌ಷಿಪ್‌ನಲ್ಲಿ ಭಾರತ 11ನೇ ಸ್ಥಾನ ಗಳಿಸಿತ್ತು. ಗೋಲು ಗಳಿಕೆ, ರೀಬೌಂಡ್ ಮತ್ತು ಅಸಿಸ್ಟ್‌ಗಳಲ್ಲಿ ಗಮನಾರ್ಹ ಪ್ರದರ್ಶನ ನೀಡಿದ ಲೋಪಾಮುದ್ರ ಕೆಲವು ಪಂದ್ಯಗಳಲ್ಲಿ ತಂಡದ ಸೋಲಿನ ಅಂತರವನ್ನು ಕಡಿಮೆ ಮಾಡುವಲ್ಲಿ ಯಶಸ್ವಿಯಾಗಿದ್ದರು.
ನಂತರ 18 ವರ್ಷದೊಳಗಿನವರ ವಿಭಾಗದಲ್ಲಿ ಭಾರತ ತಂಡದ ತರಬೇತಿ ಶಿಬಿರದಲ್ಲಿದ್ದರೂ ತಂಡದಲ್ಲಿ ಸ್ಥಾನ ಗಳಿಸಲು ಆಗಲಿಲ್ಲ. ಈಗ ಸೀನಿಯರ್ ತಂಡದಲ್ಲಿ ಸ್ಥಾನ ಗಳಿಸಿ ತಮ್ಮ ವೃತ್ತಿ ಜೀವನದ ಮಹತ್ವದ ಆಸೆ ಈಡೇರಿದ ಖುಷಿಯಲ್ಲಿದ್ದಾರೆ.
‘ಆಕೆಗೆ ಭಾರತ ತಂಡದಲ್ಲಿ ಆಡಬೇಕು ಎಂಬ ಕನಸು ಇತ್ತು. ಆಯ್ಕೆ ಆಗುತ್ತಾಳೆ ಎಂಬ ಭರವಸೆ ನಮಗೂ ಇತ್ತು. ವಿದೇಶದಲ್ಲಿ ನಡೆಯುವ ಟೂರ್ನಿ ಸೇರಿದಂತೆ ಎಲ್ಲಿ ಪಂದ್ಯಗಳು ಇದ್ದರೂ ನಾವು ಅಲ್ಲಿಗೆ ಹೋಗಿ ವೀಕ್ಷಿಸುತ್ತೇವೆ. ಆದ್ದರಿಂದ ಆಕೆಯ ಸಾಮರ್ಥ್ಯವನ್ನು ಚೆನ್ನಾಗಿ ಬಲ್ಲೆವು. ಹೀಗಾಗಿಯೇ ಭಾರತ ತಂಡದಲ್ಲಿ ಕಾಣಿಸಿಕೊಳ್ಳುವುದು ಖಚಿತವಾಗಿತ್ತು’ ಎಂದು ಹೇಳುತ್ತಾರೆ ತಿಮ್ಮಯ್ಯ ಮತ್ತು ಪೂಜಾ ದಂಪತಿ.
ಇದನ್ನೂ ಓದಿ: ಬ್ಯಾಸ್ಕೆಟ್‌ಬಾಲ್: ಕ್ವಾರ್ಟರ್ ಫೈನಲ್ಗೆ ಕರ್ನಾಟಕ
ಸಹಜ ಶೈಲಿ; ವೇಗದ ಆಟಗಾರ್ತಿ
ಲೋಪಾಮುದ್ರ 11ನೇ ವಯಸ್ಸಿನಿಂದ ತರಬೇತಿ ನೀಡುತ್ತಿದ್ದಾರೆ, ಬೆಂಗಳೂರು ಮೌಂಟ್ಸ್ ಕ್ಲಬ್‌ನ ಜಯವಂತಿ ಶ್ಯಾಮ್. ಭಾರತ ತಂಡಕ್ಕೆ ರಾಜ್ಯದಿಂದ ಐವರು ಆಟಗಾರ್ತಿಯರನ್ನು ಕಾಣಿಕೆಯಾಗಿ ನೀಡಿದವರು ಜಯವಂತಿ. ಲೋಪಾಮುದ್ರ ಬೆಂಗಳೂರಿನಲ್ಲೇ ಚೊಚ್ಚಲ ಪಂದ್ಯ ಆಡಿದ್ದರಿಂದ ಖುಷಿಗೊಂಡಿರುವ ಅವರು ಶಿಷ್ಯೆಯ ಸಾಮರ್ಥ್ಯದ ಬಗ್ಗೆ ಹೇಳಿದರು.
‘ಲೋಪಾಮುದ್ರ ಸಹಜ ಶೈಲಿಯ ಆಟಗಾರ್ತಿ. ವೇಗವೇ ಆಕೆಯ ಅಸ್ತ್ರ. ಒಳ್ಳೆಯ ಡಿಫೆಂಡರ್ ಆಗಿರುವ ಆಕೆಗೆ ಇನ್ನಷ್ಟು ಪ್ರೋತ್ಸಾಹ ಲಭಿಸಿದರೆ ದೇಶಕ್ಕೆ ಹೆಸರು ತರುವಲ್ಲಿ ಸಂದೇಹವೇ ಇಲ್ಲ’ ಎಂದು ಜಯವಂತಿ ಹೇಳಿದರು.
‘13 ವರ್ಷದೊಳಗಿನವರ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಮೂರು ಬಾರಿ ರಾಜ್ಯ ತಂಡ ರನ್ನರ್ ಅಪ್ ಆಗುವಂತೆ ಮಾಡಿದ್ದರು. 18 ವರ್ಷದೊಳಗಿನವರ ವಿಭಾಗದಲ್ಲಿ ರಾಜ್ಯ ತಂಡಕ್ಕೆ ಪ್ರಶಸ್ತಿಯನ್ನೂ ಗಳಿಸಿಕೊಟ್ಟಿದ್ದರು. ಶಾಲೆ ಮತ್ತು ಕಾಲೇಜು ಓದಿನ ಒತ್ತಡದಿಂದ ಸ್ವಲ್ಪ ಹೊರಗೆ ಬಂದಿರುವ ಲೋಪಾಗೆ ಈಗ ಹೆಚ್ಚು ಸಮಯವನ್ನು ಆಟಕ್ಕೆ ಮೀಸಲಿಡಲು ಸಾಧ್ಯವಾಗಿದೆ. ಆದ್ದರಿಂದ ಇನ್ನು ಮುಂದೆ ಆಕೆಗೆ ಸತ್ವಪರೀಕ್ಷೆಯ ಕಾಲ. ಅದರಲ್ಲಿ ಖಂಡಿತಾ ಯಶಸ್ವಿಯಾಗುತ್ತಾಳೆ’ ಎಂಬುದು ಜಯವಂತಿ ಅವರ ಭರವಸೆಯ ನುಡಿ.
ಭಾರತ ತಂಡದಲ್ಲಿ ಸ್ಥಾನ ಭದ್ರಪಡಿಸಬೇಕು
ಆಟದ ಅಂಗಳದಲ್ಲಿ ಪಾದರಸದಂತೆ ಓಡಾಡುವ ಲೋಪಾ ಮುದ್ರ ಮಾತಿನಲ್ಲೂ ಚುರುಕು; ಪ್ರಬುದ್ಧೆ. ಏಷ್ಯಾಕಪ್ ಟೂರ್ನಿಯ ನಡುವೆ ಅವಸರದಲ್ಲಿ ಮಾತಿಗೆ ಸಿಕ್ಕ ಅವರು ಹೇಳಿದ್ದು ಇಷ್ಟು:
ತವರಿನ ಅಂಗಳದಲ್ಲಿ ಆಡಲು ಇಳಿದಾಗ ಅತ್ಯಂತ ಖುಷಿಯಾಗಿತ್ತು. ಗ್ಯಾಲರಿಯಲ್ಲಿ ಪಾಲಕರು ಮತ್ತು ಸಂಬಂಧಿಕರು ಇದ್ದರು. ಗೆಳೆಯರನ್ನೂ ಬರಹೇಳಿದ್ದೆ. ಅವರೆಲ್ಲರೂ ನಾನು ಆಡುವಾಗ ಚಪ್ಪಾಳೆ ತಟ್ಟುತ್ತಿದ್ದರು. ನನ್ನ ಸಾಮರ್ಥ್ಯದ ಮೇಲೆ ನನಗೆ ವಿಶ್ವಾಸವಿತ್ತು. ಭರವಸೆಯಿಂದಲೇ ಆಡುವಂತೆ ಎಲ್ಲರೂ ಹೇಳಿಯೂ ಇದ್ದರು.
ಭಾರತಕ್ಕಾಗಿ ಆಡಬೇಕೆಂಬುದು ಬ್ಯಾಸ್ಕೆಟ್ ಬಾಲ್ ಕ್ರೀಡೆಯಲ್ಲಿ ಆಡಲು ಆರಂಭಿಸಿದಾಗಲೇ ಕಂಡ ಕನಸಾಗಿತ್ತು. 16 ವರ್ಷದೊಳಗಿನವರ ವಿಭಾಗದಲ್ಲಿ ಮೊದಲ ಬಾರಿ ದೇಶಕ್ಕಾಗಿ ಆಡಿದ್ದೆ. 18 ವರ್ಷದೊಳಗಿನವರ ವಿಭಾಗದಲ್ಲೂ ತಂಡಕ್ಕೆ ಆಯ್ಕೆಯಾಗಿದ್ದೆ. ಈಗ ಸೀನಿಯರ್ ತಂಡದಲ್ಲಿ ಸ್ಥಾನ ಗಳಿಸಿಕೊಂಡಿರುವುದರಿಂದ ನನ್ನ ಮಹದಾಸೆ ಈಡೇರಿದಂತಾಗಿದೆ.
ಮೊದಲ ಪಂದ್ಯದಲ್ಲಿ ಸ್ಕೋರ್ ಮಾಡಲು ಆಗಲಿಲ್ಲ. ಒಂದು ಪಂದ್ಯದಲ್ಲಿ ಎಲ್ಲರಿಗೂ ಸ್ಕೋರ್ ಮಾಡಲು ಅವಕಾಶ ಸಿಗುವುದು ಕಡಿಮೆ. ಆದರೆ ಎದುರಾಳಿಗಳನ್ನು ಸೋಲಿಸಲು ತಂಡಕ್ಕೆ ನೆರವಾಗುವುದು ಮುಖ್ಯ. ಸಿಕ್ಕಿದ ಅವಕಾಶವನ್ನು ಸದುಪಯೋಗ ಮಾಡಿಕೊಂಡು ನಾನದನ್ನು ಮಾಡಿದ್ದೇನೆ.
ಭಾರತ ತಂಡದಲ್ಲಿ ಮುಂದುವರಿಯಬೇಕು ಎಂಬುದು ನನ್ನ ಬಯಕೆ. ಅಭ್ಯಾಸ ಮಾಡುತ್ತಲೇ ಇರುತ್ತೇನೆ; ಆಡುತ್ತಲೇ ಇರುತ್ತೇನೆ. ಅದಕ್ಕೆ ತಕ್ಕ ಫಲ ಸಿಕ್ಕೇ ಸಿಗುತ್ತದೆ ಎಂಬ ವಿಶ್ವಾಸವಿದೆ.
ಏಷ್ಯಾಕಪ್ ಟೂರ್ನಿಯಲ್ಲಿ ಸಾಧನೆ
ಪಂದ್ಯ: 2, ಅವಧಿ: 11.4 ನಿ,ರೀಬೌಂಡ್:2,ಅಸಿಸ್ಟ್- 1
13 ವರ್ಷದೊಳಗಿನವರ ವಿಭಾಗದಲ್ಲಿ ಸಾಧನೆ
6 ಪಂದ್ಯ,46 ಪ್ರಯತ್ನ, 14 ಗೋಲು ಗಳಿಕೆ,6/20, 3 ಪಾಯಿಂಟ್ ಗಳಿಕೆ/ ಪ್ರಯತ್ನ,8/26,2 ಪಾಯಿಂಟ್ ಗಳಿಕೆ/ಪ್ರಯತ್ನ,5/10 ಡಿಫೆನ್ಸಿವ್/ ಒಫೆನ್ಸಿವ್ ರೀಬೌಂಡ್,8 ಅಸಿಸ್ಟ್ಸ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.