ADVERTISEMENT

Tokyo Olympics: ಶೂಟ್ ಆಫ್‌ ಪೈಪೋಟಿ; ವಿಟಾಲಿನ ದಾಖಲೆಯ ಸಂಭ್ರಮ

ರಾಯಿಟರ್ಸ್
Published 30 ಜುಲೈ 2021, 19:45 IST
Last Updated 30 ಜುಲೈ 2021, 19:45 IST
ವಿಟಾಲಿನ ಪದಕದ ಸಂಭ್ರಮ –ರಾಯಿಟರ್ಸ್ ಚಿತ್ರ
ವಿಟಾಲಿನ ಪದಕದ ಸಂಭ್ರಮ –ರಾಯಿಟರ್ಸ್ ಚಿತ್ರ   

ಟೋಕಿಯೊ: ರೋಚಕ ಹಣಾಹಣಿಯಲ್ಲಿ ಶೂಟ್‌ಆಫ್‌ ಮೂಲಕ ಕೊರಿಯಾದ ಎದುರಾಳಿಯನ್ನು ಹಿಂದಿಕ್ಕಿದ ರಷ್ಯಾದ ವಿಟಾಲಿನ ಬಟ್ಸರಸ್ಕಿನ ಅವರು ಒಲಿಂಪಿಕ್ಸ್ ಶೂಟಿಂಗ್‌ನ ಎರಡನೇ ಚಿನ್ನದ ಪದಕ ತಮ್ಮದಾಗಿಸಿಕೊಂಡರು.

ಶುಕ್ರವಾರ ನಡೆದ ಮಹಿಳೆಯರ 25 ಮೀಟರ್ಸ್ ಪಿಸ್ತೂಲು ಸ್ಪರ್ಧೆಯ ಫೈನಲ್‌ನಲ್ಲಿ ಕಿಮ್ ಮಿನ್ ಜಂಗ್ ಅವರನ್ನು ವಿಟಾಲಿನಾ ಮಣಿಸಿದರು. ಒಲಿಂಪಿಕ್ಸ್‌ನ ಒಂದೇ ಆವೃತ್ತಿಯ ಶೂಟಿಂಗ್‌ನಲ್ಲಿ ಮೂರು ಪದಕ ಗೆದ್ದ ಮೊದಲ ಮಹಿಳೆ ಎಂಬ ದಾಖಲೆಯನ್ನೂ ಬರೆದರು.

ಇಬ್ಬರೂ ಶೂಟರ್‌ಗಳು ಒಲಿಂಪಿಕ್ ದಾಖಲೆಯ 38 ಸ್ಕೋರು ಸಂಪಾದಿಸಿದರು. ಹೀಗಾಗಿ ಶೂಟ್ ಆಫ್ ಮೊರೆಹೋಗಲಾಯಿತು. ಈ ಹಂತದಲ್ಲೂ ಜಿದ್ದಾಜಿದ್ದಿಯ ಹೋರಾಟ ಕಂಡುಬಂತು. ಆದರೆ ರಷ್ಯಾ ಶೂಟರ್ ಪದಕ ಗೆದ್ದು ಸಂಭ್ರಮಿಸಿದರು. ಚೀನಾದ ಕ್ಸಿಯಾವೊ ಜಿಯಾರುಕ್ಸುವಾನ್ ಕಂಚಿನ ಪದಕಕ್ಕೆ ಸಮಾಧಾನಪಟ್ಟುಕೊಂಡರು. ವಿಟಾಲಿನ 10 ಮೀಟರ್ಸ್‌ ಪಿಸ್ತೂಲು ವಿಭಾಗದಲ್ಲೂ ಚಿನ್ನ ಗಳಿಸಿದ್ದ ಅವರು 10 ಮೀಟರ್ಸ್ ಏರ್ ಪಿಸ್ತೂಲು ವಿಭಾಗದಲ್ಲಿ ಬೆಳ್ಳಿ ಪದಕವನ್ನೂ ಗೆದ್ದಿದ್ದರು.

ADVERTISEMENT

10 ಮೀಟರ್ಸ್ ಪಿಸ್ತೂಲು ವಿಭಾಗದಲ್ಲಿ ಬೆಳ್ಳಿ ಗೆದ್ದಿದ್ದ ಬಲ್ಗೇರಿಯಾದ ಅಂಟೋನೆಟಾ ಕೊಸ್ತದಿನೊವ ಅರ್ಹತಾ ಸುತ್ತಿನಲ್ಲಿ ಅಗ್ರಸ್ಥಾನ ಗಳಿಸಿದ್ದರು. ಆದರೆ ಫೈನಲ್‌ನಲ್ಲಿ ನಾಲ್ಕನೇ ಸ್ಥಾನಕ್ಕೆ ಕುಸಿದರು. ರಿಯೊ ಒಲಿಂಪಿಕ್ಸ್‌ನಲ್ಲಿ ಚಾಂಪಿಯನ್ ಆಗಿದ್ದ ಗ್ರೀಸ್‌ನ ಅನಾ ಕೊರಾಕಕಿ ಆರನೇ ಸ್ಥಾನ ಗಳಿಸಿದರು. ಎರಡು ಬಾರಿಯ ಒಲಿಂಪಿಕ್‌ ಚಾಂಪಿಯನ್ ಬಲ್ಗೇರಿಯಾದ ಮರಿಯಾ ಗೊಸ್ಡೇವ ಫೈನಲ್ ಪ್ರವೇಶಿಸಲು ಸಾಧ್ಯವಾಗದೆ ಮರಳಿದರು. ವಿಶ್ವ ಚಾಂಪಿಯನ್ ಉಕ್ರೇನ್‌ನ ಒಲೆನಾ ಕೊಸ್ಟೆವಿಚ್ ಕೂಡ ನಿರಾಸೆ ಅನುಭವಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.