
ನವದೆಹಲಿ: ಮಹಿಳಾ ಏಕದಿನ ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಮತ್ತು ಉಪನಾಯಕಿ ಸ್ಮೃತಿ ಮಂದಾನ ಅವರು ಬಿಬಿಸಿ ನೀಡುವ ‘ಭಾರತದ ವರ್ಷದ ಮಹಿಳಾ ಕ್ರೀಡಾಪಟು’ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ.
ಮಹಿಳಾ ಚೆಸ್ ವಿಶ್ವಕಪ್ ವಿಜೇತೆ ದಿವ್ಯಾ ದೇಶಮುಖ್, ಪಿಸ್ತೂಲ್ ಶೂಟರ್ ಸುರುಚಿ ಸಿಂಗ್, ಟ್ರ್ಯಾಕ್ ಮತ್ತು ಫೀಲ್ಡ್ ಅಥ್ಲೀಟ್ ಜ್ಯೋತಿ ಯರ್ರಾಜಿ ಅವರೂ 2025ರ ಪ್ರತಿಷ್ಠಿತ ವಾರ್ಷಿಕ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿರುವ ಇತರ ಮೂವರು.
36 ವರ್ಷದ ಕೌರ್ ನೇತೃತ್ವದಲ್ಲಿ ಭಾರತ ಮಹಿಳಾ ತಂಡವು ಕಳೆದ ನವೆಂಬರ್‌ನಲ್ಲಿ ಮೊದಲ ಬಾರಿ ಐಸಿಸಿ ಟ್ರೋಫಿಯನ್ನು ಗೆದ್ದುಕೊಂಡಿತು. ಆಸ್ಟ್ರೇಲಿಯಾ ವಿರುದ್ಧದ ಸೆಮಿಫೈನಲ್‌ನಲ್ಲಿ 339 ರನ್‌ಗಳ ಕಠಿಣ ಗುರಿಯನ್ನು ಬೆನ್ನಟ್ಟುವ ವೇಳೆ ಹರ್ಮನ್ 88 ಎಸೆತಗಳಲ್ಲಿ 89 ರನ್ ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.
29 ವರ್ಷದ ಎಡಗೈ ಬ್ಯಾಟರ್ ಮಂದಾನ ಅವರು ಏಕದಿನ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಎರಡನೇ ಅತಿ ಹೆಚ್ಚು ಶತಕಗಳನ್ನು ಗಳಿಸಿದ್ದಾರೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಅವರು ಆಸ್ಟ್ರೇಲಿಯಾ ವಿರುದ್ಧ 50 ಎಸೆತಗಳಲ್ಲಿ ಶತಕ ಗಳಿಸಿದ್ದರು. ಇದು ಈ ಮಾದರಿಯಲ್ಲಿ ಭಾರತದ ಆಟಗಾರನೊಬ್ಬನ ವೇಗದ ಶತಕವಾಗಿದ್ದು, ವಿರಾಟ್ ಕೊಹ್ಲಿ ಅವರ ದಾಖಲೆಯನ್ನು ಮುರಿದರು.
20 ವರ್ಷದ ಚೆಸ್ ಪ್ರತಿಭೆ ದೇಶಮುಖ್ ಅವರು ಕಳೆದ ಜುಲೈನಲ್ಲಿ ಫಿಡೆ ಮಹಿಳಾ ವಿಶ್ವಕಪ್ ಗೆದ್ದ ಭಾರತದ ಮೊದಲ ಆಟಗಾರ್ತಿ ಎಂಬ ಹಿರಿಮೆಗೆ ಪಾತ್ರರಾದರು. ಈ ಸಾಧನೆ ಮಾಡಿದ ವಿಶ್ವದ ಅತ್ಯಂತ ಕಿರಿಯ ಆಟಗಾರ್ತಿ ಅವರಾಗಿದ್ದಾರೆ. ಜೊತೆಗೆ ಗ್ರ್ಯಾಂಡ್‌ಮಾಸ್ಟರ್ ಪಟ್ಟವನ್ನು ಅಲಂಕರಿಸಿದರು.
ಹರಿಯಾಣದ ಶೂಟಿಂಗ್ ತಾರೆ ಸುರುಚಿ ಅವರು ಐಎಸ್‌ಎಸ್‌ಎಫ್ ವಿಶ್ವಕಪ್‌ಗಳು ಮತ್ತು ವಿಶ್ವ ಚಾಂಪಿಯನ್‌ಷಿಪ್‌ಗಳು ಸೇರಿದಂತೆ ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿ ನಿರಂತರವಾಗಿ ಮಿಂಚುತ್ತಿದ್ದಾರೆ. 26 ವರ್ಷದ ಯರ್ರಾಜಿ ಅವರು 2025ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತನಿಧಿಸಿದ್ದರು. ಒಲಿಂಪಿಕ್ಸ್ 100 ಮೀ ಹರ್ಡಲ್ಸ್‌ನಲ್ಲಿ ಅರ್ಹತೆ ಪಡೆದ ಭಾರತದ ಮೊದಲ ಮಹಿಳೆ ಅಥ್ಲೀಟ್ ಅವರಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.