ADVERTISEMENT

ಸ್ಕೇಟಿಂಗ್: ಬೆಳಗಾವಿಯ ಅಭಿಷೇಕ್ ನವಲೆ ವಿಶ್ವ ದಾಖಲೆ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2020, 13:32 IST
Last Updated 26 ಡಿಸೆಂಬರ್ 2020, 13:32 IST
ಅಭಿಷೇಕ್ ನವಲೆ
ಅಭಿಷೇಕ್ ನವಲೆ   

ಬೆಳಗಾವಿ: ಇಲ್ಲಿನ ಬೆಳಗಾವಿ ರೋಲರ್ ಸ್ಕೇಟಿಂಗ್ ಅಕಾಡೆಮಿಯ ಪ್ರತಿಭೆ ಅಭಿಷೇಕ್ ನವಲೆ ಅವರು ಅತ್ಯಂತ ವೇಗವಾಗಿ ಸ್ಕೇಟ್ ಮಾಡುವ ಮೂಲಕ ಗಿನ್ನಿಸ್ ವಿಶ್ವ ದಾಖಲೆ ಮಾಡಿದ್ದಾರೆ.

100 ಮೀ. ಅನ್ನು 12.85 ಸೆಕೆಂಡ್‌ಗಳಲ್ಲಿ ಅವರು ಕ್ರಮಿಸಿದ್ದಾರೆ. ಆಸ್ಟ್ರೇಲಿಯಾದ ಸ್ಕೇಟರ್ ಈ ದೂರವನ್ನು 13.24 ಸೆಕೆಂಡ್‌ಗಳಲ್ಲಿ ಕ್ರಮಿಸಿ ವಿಶ್ವ ದಾಖಲೆ ಮಾಡಿದ್ದರು. ಅದನ್ನು ಅಭಿಷೇಕ್ ಮುರಿದಿದ್ದಾರೆ. ತಮ್ಮ ಸಾಧನೆ ಉತ್ತಮಪಡಿಸಿಕೊಂಡಿದ್ದಲ್ಲದೇ, ಹೊಸ ದಾಖಲೆಯನ್ನೂ ಬರೆದಿದ್ದಾರೆ.

‘ಸ್ಕೇಟಿಂಗ್‌ನ ವಿಡಿಯೊ ಹಾಗೂ ಸಂಬಂಧಿಸಿದ ದಾಖಲೆಗಳನ್ನು ಸಂಸ್ಥೆಗೆ ಕಳುಹಿಸಲಾಗಿತ್ತು. ಅವರು ಅದನ್ನು ಪುರಸ್ಕರಿಸಿ ವಿಶ್ವ ದಾಖಲೆ ಪ್ರಮಾಣಪತ್ರವನ್ನು ಈಚೆಗೆ ನೀಡಿದೆ’ ಎಂದು ತರಬೇತುದಾರ ಸೂರ್ಯಕಾಂತ ಹಿಂಡಲಗೇಕರ ಶನಿವಾರ ಮಾಧ್ಯಮ ‍ಪ್ರತಿನಿಧಿಗಳಿಗೆ ತಿಳಿಸಿದರು.

‘ದ್ವಿತೀಯ ಪಿಯುಸಿ ಓದುತ್ತಿರುವ ಅಭಿಷೇಕ್, ಎನ್‌ಡಬ್ಲ್ಯುಕೆಆರ್‌ಟಿಸಿ ಬಸ್ ಚಾಲಕ ಸಂಜಯ್ ನವಲೆ ಹಾಗೂ ಗೃಹಿಣಿ ಸುಜಾತಾ ನವಲೆ ದಂಪತಿಯ ಪುತ್ರ. 14 ವರ್ಷಗಳಿಂದ ಸ್ಕೇಟಿಂಗ್ ಅಭ್ಯಾಸ ಮಾಡುತ್ತಿದ್ದಾರೆ. ಹಲವು ಸ್ಪರ್ಧೆಗಳಲ್ಲಿ ‍ಪಾಲ್ಗೊಂಡು ಬಹುಮಾನ ಪಡೆದಿದ್ದಾರೆ. ಪೋರ್ಚುಗಲ್‌ನಲ್ಲಿ ನಡೆದ 10ನೇ ಅಂತರರಾಷ್ಟ್ರೀಯ ಸ್ಪೀಡ್ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದಾರೆ. ಹಲವು ದಾಖಲೆಗಳನ್ನು ಮಾಡಿದ್ದಾರೆ’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.