ADVERTISEMENT

ಮಯಾಮಿ ಓಪನ್: ಫೈನಲ್‌ಗೆ ಬೋಪಣ್ಣ–ಎಬ್ಡೆನ್

ಪಿಟಿಐ
Published 29 ಮಾರ್ಚ್ 2024, 15:26 IST
Last Updated 29 ಮಾರ್ಚ್ 2024, 15:26 IST
 ಭಾರತದ ರೋಹಣ್‌ ಬೋಪಣ್ಣ ಮತ್ತು ಆಸ್ಟ್ರೇಲಿಯನ್ ಜೊತೆಗಾರ ಮ್ಯಾಥ್ಯೂ ಎಬ್ಡೆನ್ ಜೋಡಿ. ಎಎಫ್‌ಪಿ ಚಿತ್ರ
 ಭಾರತದ ರೋಹಣ್‌ ಬೋಪಣ್ಣ ಮತ್ತು ಆಸ್ಟ್ರೇಲಿಯನ್ ಜೊತೆಗಾರ ಮ್ಯಾಥ್ಯೂ ಎಬ್ಡೆನ್ ಜೋಡಿ. ಎಎಫ್‌ಪಿ ಚಿತ್ರ   

ಮಯಾಮಿ ಗಾರ್ಡನ್ಸ್, ಅಮೆರಿಕ: ಭಾರತ ರೋಹನ್ ಬೋಪಣ್ಣ ಮತ್ತು ಅವರ ಆಸ್ಟ್ರೇಲಿಯನ್‌ ಜೊತೆಗಾರ ಮ್ಯಾಥ್ಯೂ ಎಬ್ಡೆನ್‌ ಅವರು ಮಯಾಮಿ ಓಪನ್ ಟೆನಿಸ್ ಟೂರ್ನಿಯ ಪುರುಷರ ಡಬಲ್ಸ್‌ನಲ್ಲಿ ಫೈನಲ್ ತಲುಪಿದ್ದಾರೆ.

ಅಗ್ರ ಶ್ರೇಯಾಂಕದ ರೋಹನ್–ಎಬ್ಡೆನ್ ಜೋಡಿ ಗುರುವಾರ ರಾತ್ರಿ ನಡೆದ ಸೆಮಿಫೈನಲ್ ಹಣಾಹಣಿಯಲ್ಲಿ 6–1, 6–4ರಿಂದ ಸ್ಪೇನ್‌ನ ಮಾರ್ಸೆಲ್ ಗ್ರಾನೊಲ್ಲರ್ಸ್‌ ಮತ್ತು ಅರ್ಜೆಂಟೀನಾದ ಹೊರಾಸಿಯೊ ಜಿಬಾಲ್ಲೋಸ್‌ ಅವರನ್ನು ನೇರ ಸೆಟ್‌ಗಳಿಂದ ಹಿಮ್ಮೆಟ್ಟಿಸಿತು.

ಫೈನಲ್‌ನಲ್ಲಿ ಬೋಪಣ್ಣ ಮತ್ತು ಎಬ್ಡೆನ್ ಜೋಡಿ ಕ್ರೊಯೇಷಿಯಾದ ಇವಾನ್ ಡೊಡಿಗ್ ಮತ್ತು ಅಮೆರಿಕದ ಆಸ್ಟಿನ್ ಕ್ರಾಜಿಕ್ ಅವರನ್ನು ಎದುರಿಸಲಿದೆ. ಅವರು ಜರ್ಮನಿಯ ಕೆವಿನ್ ಕ್ರಾವಿಯೆಟ್ಜ್ ಮತ್ತು ಟಿಮ್ ಪುಟ್ಜ್ ಅವರನ್ನು 6-4, 6-7 (7), 10-7 ಸೆಟ್‌ಗಳಿಂದ ಸೋಲಿಸಿದರು.

ADVERTISEMENT

ದುಬೈ ಚಾಂಪಿಯನ್‌ಷಿಪ್‌ ಕ್ವಾರ್ಟರ್ ಫೈನಲ್ ಸೋಲು ಮತ್ತು ಇಂಡಿಯನ್ ವೆಲ್ಸ್ ಮಾಸ್ಟರ್ಸ್‌ನಲ್ಲಿ ನಿರ್ಗಮನದ ನಂತರ ವಿಶ್ವ ಕ್ರಮಾಂಕದಲ್ಲಿ ಎರಡನೇ ಸ್ಥಾನದಲ್ಲಿರುವ ಕನ್ನಡಿಗ ಬೋಪಣ್ಣ, ಈ ಗೆಲುವಿನ ಮೂಲಕ ಅಗ್ರಸ್ಥಾನವನ್ನು ಮರಳಿ ಪಡೆಯಲಿದ್ದಾರೆ. 

ಆಸ್ಟ್ರೇಲಿಯನ್ ಓಪನ್ ಗೆಲುವಿನ ನಂತರ, 44 ವರ್ಷದ ಬೋಪಣ್ಣ ಎಟಿಪಿ ಶ್ರೇಯಾಂಕದಲ್ಲಿ ವಿಶ್ವದ ನಂ.1 ಸ್ಥಾನಕ್ಕೆ ಏರಿದ್ದರು.

ಬೋಪಣ್ಣ ಪಾಲಿಗೆ ಇದು 14ನೇ ಎಟಿಪಿ ಮಾಸ್ಟರ್ಸ್ 1000 ಫೈನಲ್ ಹಾಗೂ ಮಯಾಮಿಯಲ್ಲಿ ನಡೆಯಲಿರುವ ಮೊದಲ ಫೈನಲ್ ಪಂದ್ಯವಾಗಿದೆ. ಒಟ್ಟಾರೆಯಾಗಿ ಇದು ಅವರ 63ನೇ ಎಟಿಪಿ ಟೂರ್ ಮಟ್ಟದ ಫೈನಲ್ ಆಗಿದೆ. ಅವರು ಈವರೆಗೆ 25 ಡಬಲ್ಸ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.

ಬೋಪಣ್ಣ ಮತ್ತು ಎಬ್ಡೆನ್ ಜೋಡಿ ಎಟಿಪಿ ಮಾಸ್ಟರ್ಸ್ 1000 ಫೈನಲ್‌ನಲ್ಲಿ ಐದನೇ ಬಾರಿಗೆ ಆಡುತ್ತಿದೆ. 

ಲಿಯಾಂಡರ್ ಪೇಸ್ ನಂತರ ಎಲ್ಲಾ 9 ಎಟಿಪಿ ಮಾಸ್ಟರ್ಸ್ ಟೂರ್ನಿಗಳಲ್ಲಿ ಫೈನಲ್ ತಲುಪಿದ ಎರಡನೇ ಭಾರತೀಯ ಎಂಬ ಹೆಗ್ಗಳಿಕೆಗೆ ಬೋಪಣ್ಣ ಪಾತ್ರರಾಗಿದ್ದಾರೆ.

ಕಾರ್ಲೋಸ್‌ ಅಲ್ಕರಾಜ್‌ಗೆ ಸೋಲು: ಸಿಂಗಲ್ಸ್‌ ಕ್ವಾರ್ಟರ್ ಫೈನಲ್‌ನಲ್ಲಿ ಹನ್ನೊಂದನೇ ಶ್ರೇಯಾಂಕದ ಗ್ರಿಗರ್‌ ಡಿಮಿಟ್ರೋವ್‌ ಅವರು ಸ್ಪೇನ್‌ನ ಕಾರ್ಲೋಸ್‌ ಅಲ್ಕರಾಜ್ ವಿರುದ್ಧ 6-2, 6-4 ಸೆಟ್‌ಗಳಿಂದ ಜಯಗಳಿಸಿದರು.

ಗುರುವಾರ ರಾತ್ರಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ನಾಲ್ಕನೇ ಶ್ರೇಯಾಂಕದ ಅಲೆಕ್ಸಾಂಡರ್ ಝ್ವೆರೆವ್ 6-3, 7-5 ಸೆಟ್ ಗಳಿಂದ ಶ್ರೇಯಾಂಕರಹಿತ ಫ್ಯಾಬಿಯನ್ ಮರೋಜ್ಸಾನ್ ಅವರನ್ನು ಸೋಲಿಸಿದರು.

ಎರಡನೇ ಶ್ರೇಯಾಂಕದ ಜಾನಿಕ್ ಸಿನ್ನರ್ ಮತ್ತೊಂದು ಸೆಮಿಫೈನಲ್‌ನಲ್ಲಿ 3ನೇ ಶ್ರೇಯಾಂಕದ ಡ್ಯಾನಿಲ್ ಮೆಡ್ವೆಡೆವ್ ಅವರನ್ನು ಎದುರಿಸಲಿದ್ದಾರೆ 

ಕಾರ್ಲೋಸ್‌ ಅಲ್ಕರಾಜ್–ಎಎಫ್‌ಪಿ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.