ADVERTISEMENT

ಆಯ್ಕೆ ಪ್ರಕ್ರಿಯೆ: ಗೌರವ್ ಬಿಧುರಿ ಆಕ್ಷೇಪ

ಪಿಟಿಐ
Published 27 ಡಿಸೆಂಬರ್ 2019, 9:54 IST
Last Updated 27 ಡಿಸೆಂಬರ್ 2019, 9:54 IST
ಗೌರವ್‌ ಬಿಧುರಿ –ಪಿಟಿಐ ಚಿತ್ರ
ಗೌರವ್‌ ಬಿಧುರಿ –ಪಿಟಿಐ ಚಿತ್ರ   

ನವದೆಹಲಿ : ಒಲಿಂಪಿಕ್ಸ್‌ಗೆ ಬಾಕ್ಸರ್‌ಗಳ ಆಯ್ಕೆಗಾಗಿ ನಡೆಯಲಿರುವ ಟ್ರಯಲ್ಸ್‌ನಿಂದ ತಮ್ಮ ಹೆಸರು ಕೈಬಿಟ್ಟದ್ದಕ್ಕೆ ಗೌರವ್ ಬಿಧುರಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗೆದ್ದಿರುವ ಬಿಧುರಿ ಕೇಂದ್ರ ಕ್ರೀಡಾ ಸಚಿವರಿಗೆ ಪತ್ರ ಬರೆದಿದಿದ್ದು ಮಧ್ಯಪ್ರವೇಶಿಸುವಂತೆ ಆಗ್ರಹಿಸಿದ್ದಾರೆ.

ಪತ್ರದ ಪ್ರತಿಯನ್ನು ಭಾರತ ಬಾಕ್ಸಿಂಗ್ ಫೆಡರೇಷನ್ ಮತ್ತು ಭಾರತ ಕ್ರೀಡಾ ಪ್ರಾಧಿಕಾರಕ್ಕೂ ಕಳುಹಿಸಿರುವ ಬಾಕ್ಸರ್‌, ಇದೇ 29 ಹಾಗೂ 30ರಂದು ನಡೆಯಲಿರುವ ಆಯ್ಕೆ ಪ್ರಕ್ರಿಯೆಯಿಂದ ಉದ್ದೇಶಪೂರ್ವಕವಾಗಿ ತನ್ನನ್ನು ದೂರ ಇರಿಸಲಾಗಿದೆ ಎಂದು ದೂರಿದ್ದಾರೆ. ಆಯ್ಕೆ ಪ್ರಕ್ರಿಯೆ ಬಳ್ಳಾರಿಯಲ್ಲಿ ನಡೆಯಲಿದೆ.

‘ನಮ್ಮಲ್ಲಿ ಆಯ್ಕೆ ಪ್ರಕ್ರಿಯೆ ಸಮರ್ಪಕವಾಗಿ ನಡೆಯುವುದೇ ಇಲ್ಲ. ಈ ಬಾರಿಯ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಪದಕಗಳನ್ನು ಗೆದ್ದವರಿಗೆ ನೇರ ಪ್ರವೇಶಾವಕಾಶ ನೀಡಲಾಗಿದೆ. ಆದರೆ 2017ರ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಪದಕ ಗೆದ್ದ ನನಗೆ ಕಾಮನ್‌ವೆಲ್ತ್ ಗೇಮ್ಸ್ ಮತ್ತು ಏಷ್ಯನ್ ಗೇಮ್ಸ್‌ನ ಟ್ರಯಲ್ಸ್‌ನಲ್ಲಿ ಪಾಲ್ಗೊಳ್ಳುವುದಕ್ಕೂ ಅವಕಾಶ ಸಿಗಲಿಲ್ಲ’ ಎಂದು ಬಿಧುರಿ ಬೇಸರ ವ್ಯಕ್ತಪಡಿಸಿದ್ದಾರೆ.

ADVERTISEMENT

‘ಆಗ ಪ್ರಶ್ನಿಸಿದ ನನಗೆ ಹೆಚ್ಚು ಸ್ಪರ್ಧೆಗಳಲ್ಲಿ ಪಾಲ್ಗೊಳ್ಳದೇ ಇರುವುದರಿಂದ ಅವಕಾಶ ಕೊಡಲಾಗುವುದಿಲ್ಲ ಎಂದು ಹೇಳಿದರು. ಈ ವರ್ಷ ಕೇಳಿದಾಗ ಬಲಿಷ್ಠ ಎದುರಾಳಿಗಳ ವಿರುದ್ಧ ಸ್ಪರ್ಧಿಸದ ಕಾರಣ ಅವಕಾಶ ಇಲ್ಲ ಎನ್ನುತ್ತಿದ್ದಾರೆ. ಹಾಗಿದ್ದರೆ ನಿಜವಾಗಿ ಆಯ್ಕೆಯ ಮಾನದಂಡವಾದರೂ ಏನು’ ಎಂದು ಅವರು ಕೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.