ಲವ್ಲಿನಾ ಬೊರ್ಗೊಹೈನ್
ಪ್ಯಾರಿಸ್: ಸತತ ಎರಡನೇ ಪದಕ ಗೆಲ್ಲುವ ಗುರಿಯಲ್ಲಿರುವ ಲವ್ಲಿನಾ ಬೊರ್ಗೊಹೈನ್ ಅವರು ಒಲಿಂಪಿಕ್ಸ್ ಬಾಕ್ಸಿಂಗ್ ಅಭಿಯಾನವನ್ನು ಆತ್ಮವಿಶ್ವಾಸದಿಂದ ಆರಂಭಿಸಿ ಕ್ವಾರ್ಟರ್‌ಫೈನಲ್ ತಲುಪಿದರು. ಬುಧವಾರ ನಡೆದ 75 ಕೆ.ಜಿ ವಿಭಾಗದ ಸ್ಪರ್ಧೆಯಲ್ಲಿ ಅವರು, ನಾರ್ವೆಯ ಎದುರಾಳಿ ಸುನಿವಾ ಹೊಫ್‌ಸ್ಟಾಡ್ ಅವರನ್ನು ಪಂಚ್‌ಗಳಿಂದ ಕಂಗೆಡಿಸಿದರು.
ಬೊರ್ಗೊಹೈನ್ ಈ ಸೆಣಸಾಟವನ್ನು 5–0 ಯಿಂದ ಗೆದ್ದರು. ಅವರು ಇನ್ನೊಂದು ಸೆಣಸಾಟ ಗೆದ್ದರೆ ಎರಡನೇ ಪದಕ ಗೆಲ್ಲುವುದು ಖಚಿತವಾಗಲಿದೆ. ಭಾರತದ ಬಾಕ್ಸಿಂಗ್‌ನಲ್ಲಿ ಈ ಹಿಂದೆ ಇಂಥ ಸಾಧನೆಯಾಗಿಲ್ಲ. 2020ರ ಟೋಕಿಯೊ ಕ್ರೀಡೆಗಳಲ್ಲಿ ಅಸ್ಸಾಮಿನ ಬಾಕ್ಸರ್ 69 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸಿ ಕಂಚಿನ ಪದಕ ಗೆದ್ದಿದ್ದರು.
ಆದರೆ ಲವ್ಲಿನಾ ಮುಂದಿನ ಹಾದಿ ಕಠಿಣವಾಗಿದೆ. ಅವರು ಆಗಸ್ಟ್ 4ರಂದು ನಡೆಯುವ ಎಂಟರ ಘಟ್ಟದ ಪಂದ್ಯದಲ್ಲಿ ಅಗ್ರ ಶ್ರೇಯಾಂಕದ, ಚೀನಾ ಎದುರಾಳಿ ಲಿ ಕಿಯಾನ್ ಅವರನ್ನು ಎದುರಿಸಲಿದ್ದಾರೆ. ಈ ಪಂದ್ಯ ಗೆದ್ದರೆ ಕಡೇಪಕ್ಷ ಕಂಚಿನ ಪದಕ ಗ್ಯಾರಂಟಿಯಾಗಲಿದೆ.
ಬುಧವಾರ ಅವರ ಪ್ರದರ್ಶನ ಭರವಸೆಯಿಂದ ಕೂಡಿತ್ತು. ಅವರ ಎದುರಾಳಿ ಅವರನ್ನು ಮುಂದೆ ಬರಲು ಪ್ರಚೋದಿಸಿ ಪ್ರಹಾರಕ್ಕೆ ಗುರಿಮಾಡಲು ಪ್ರಯತ್ನಿಸಿದರು. ಆದರೆ ಏಕಾಗ್ರತೆ ಉಳಿಸಿಕೊಂಡ ಬೊರ್ಗೊಹೈನ್ ಈ ಬಲೆಗೆ ಬೀಳದೇ ಸ್ವಲ್ಪ ಅಂತರವಿಟ್ಟುಕೊಂಡು ಪ್ರಹಾರಗಳಿಗೆ ಮುಂದಾದರು.
ಆರಂಭದಲ್ಲಿ ಸುನಿವಾ ಅವರೇ ದಾಳಿಗೆ ಹೆಚ್ಚು ಒಲವು ತೋರಿದಂತೆ ಕಂಡುಬಂತು. ಆದರೆ ಅಸ್ಸಾಮಿನ ಬಾಕ್ಸರ್ ಸಾವರಿಸಿಕೊಂಡು ಎದುರಾಳಿಯ ಮೇಲೆ ಕರಾರುವಾಕ್ ಪಂಚ್‌ಗಳನ್ನು ಮಾಡಿ ಮೇಲುಗೈ ಸಾಧಿಸಿದರು.
ಬೊರ್ಗೊಹೈನ್ ಅವರಿಗೆ ಇಲ್ಲೂ ಕಠಿಣ ಮುಖಾಮುಖಿ ‘ಡ್ರಾ’ ಎದುರಾಗಿದೆ. ಆದರೆ ಈ ಹಿಂದೆ ಇಂಥ ಪ್ರಬಲ ಸ್ಪರ್ಧಿಗಳನ್ನು ಅವರು ಯಶಸ್ವಿ ಆಗಿ ಎದುರಿಸಿದ್ದಾರೆ. ಟೋಕಿಯೊ ಕ್ರೀಡೆಗಳ ಕ್ವಾರ್ಟರ್‌ಫೈನಲ್‌ನಲ್ಲಿ ವಿಶ್ವ ಚಾಂಪಿಯನ್ ಚೆನ್ ನೀನ್–ಚಿನ್ ಅವರನ್ನು ಮಣಿಸಿದ್ದು ಅವರಿಗೆ ಕಂಚಿನ ಪದಕ ತಂದುಕೊಟ್ಟಿತ್ತು.
ಮುಂದಿನ ಭಾನುವಾರ ಅವರ ಎದುರಾಳಿ ಆಗಿರುವ ಕಿಯಾನ್ ಅವರು ಮಿಡ್ಲ್ ವೇಟ್ (75 ಕೆ.ಜಿ.) ವಿಭಾಗದಲ್ಲಿ ಬೆಳ್ಳಿ ಗೆದ್ದಿದ್ದರು. 2016ರ ರಿಯೊ ಕ್ರೀಡೆಗಳಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದರು. ಜೊತೆಗೆ 2022ರ ಹಾಂಗ್‌ಝೌ ಏಷ್ಯನ್ ಗೇಮ್ಸ್‌ನಲ್ಲಿ ಸ್ವರ್ಣ ಕೊರಳಿಗೇರಿಸಿಕೊಂಡಿದ್ದರು.
ಬಾಕ್ಸಿಂಗ್‌ನಲ್ಲಿ ಭಾರತ ಈ ಬಾರಿಯ ಕ್ರೀಡೆಗಳಲ್ಲಿ ಮಿಶ್ರಫಲ ಕಂಡಿದೆ. ಆರರಲ್ಲಿ ಮೂವರು ಬಾಕ್ಸರ್‌ಗಳು ಈಗಾಗಲೇ ಹೊರಬಿದ್ದಿದ್ದಾರೆ. ಏಷ್ಯನ್ ಗೇಮ್ಸ್ ಮಾಜಿ ಚಾಂಪಿಯನ್ ಅಮಿತ್ ಪಂಘಲ್ (51 ಕೆ.ಜಿ), ಪ್ರೀತಿ ಪವಾರ್ (54 ಕೆ.ಜಿ) ಮತ್ತು ಜೈಸ್ಮಿನ್ ಲಂಬೋರಿಯಾ (57 ಕೆ.ಜಿ)– ಬೇಗನೇ ಹೊರಬಿದ್ದವರು.
ಬೊರ್ಗೊಹೈನ್ ಜೊತೆ ಮೊದಲ ಒಲಿಂಪಿಕ್ಸ್ ಕಾಣುತ್ತಿರುವ ನಿಖತ್ ಝರೀನ್ (ಮಹಿಳೆಯರ 50 ಕೆ.ಜಿ) ಮತ್ತು ನಿಶಾಂತ್ ದೇವ್ (ಪುರುಷರ 71 ಕೆ.ಜಿ) ಸವಾಲು ಉಳಿಸಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.