ADVERTISEMENT

ಬಾಕ್ಸಿಂಗ್‌ನ ಸ್ಫೂರ್ತಿಯ ಸೆಲೆ

ಕೆ.ಓಂಕಾರ ಮೂರ್ತಿ
Published 31 ಡಿಸೆಂಬರ್ 2018, 19:30 IST
Last Updated 31 ಡಿಸೆಂಬರ್ 2018, 19:30 IST
ಸಿ.ಎ.ಕುಟ್ಟಪ್ಪ
ಸಿ.ಎ.ಕುಟ್ಟಪ್ಪ   

‘ಸಿನಿಮಾವೊಂದರಿಂದ ಸ್ಫೂರ್ತಿ ಪಡೆದು ದೇಶ ಸೇವೆಯಲ್ಲಿ ತೊಡಗಬೇಕೆಂದು 17ನೇ ವಯಸ್ಸಿಗೆ ಸೇನಾಪಡೆ ಸೇರಿದೆ. ಜೀವನ ತಿರುವು ಪಡೆದು ಬಾಕ್ಸಿಂಗ್‌ನಲ್ಲಿ ನೆಲೆ ಕಂಡುಕೊಂಡೆ. ಕೋಚ್‌ ಆಗುವ ಹಂತಕ್ಕೆ ಬೆಳೆದೆ. ದ್ರೋಣಾಚಾರ್ಯ ಪ್ರಶಸ್ತಿಯೂ ಲಭಿಸಿತು. ಈ ಎಲ್ಲಾ ಸಾಧನೆಗೆ ಕಾರಣ ಸೇನಾಪಡೆ’

–ಭಾರತ ಬಾಕ್ಸಿಂಗ್‌ ತಂಡದ ಮುಖ್ಯ ಕೋಚ್‌ ಆಗಿರುವ ಕೊಡಗು ಜಿಲ್ಲೆ ವಿರಾಜಪೇಟೆಯ ಚೇನಂಡ ಅಚ್ಚಯ್ಯ ಕುಟ್ಟಪ್ಪ ಅವರ ಮನದಾಳದ ಮಾತಿದು.

ಪುಣೆಯಲ್ಲಿ ಸುಬೇದಾರ್‌ ಆಗಿ ಸೇವೆ ಸಲ್ಲಿಸುತ್ತಿರುವ ಅವರಿಗೆ 39 ವರ್ಷ ವಯಸ್ಸು. ಅಷ್ಟರಲ್ಲೇ ಬಹುದೊಡ್ಡ ಸಾಧನೆ ಮೂಲಕ ಯುವಕರ ಪಾಲಿಗೆ ಸ್ಫೂರ್ತಿಯ ಸೆಲೆಯಾಗಿದ್ದಾರೆ. ಮುಖ್ಯ ಕೋಚ್‌ ಆಗಿ ನೇಮಕವಾದ ದಕ್ಷಿಣ ಭಾರತದ ಮೊದಲ ವ್ಯಕ್ತಿ. ರಾಷ್ಟ್ರದ ಹಲವಾರು ಬಾಕ್ಸರ್‌ಗಳು ವಿಶ್ವಮಟ್ಟದಲ್ಲಿ ಪದಕ ಗೆಲ್ಲಲು ಕಾರಣವಾಗಿರುವ ಅವರಿಗೆ ದ್ರೋಣಾಚಾರ್ಯ ಪುರಸ್ಕಾರ ಕೂಡ ಒಲಿದಿದೆ. ಹೀಗಾಗಿ, 2018ನೇ ಸಂವತ್ಸರ ಕುಟ್ಟಪ್ಪ ಪಾಲಿಗೆ ಮರೆಯಲಾಗದ ವರ್ಷ.

ಪಟಿಯಾಲದ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಸ್ಪೋರ್ಟ್ಸ್‌ನಲ್ಲಿ (ಎನ್‌ಐಎಸ್‌) ಕೋಚಿಂಗ್‌ ಡಿಪ್ಲೊಮಾ ಪಡೆದಿದ್ದು, 2007ರಿಂದ ರಾಷ್ಟ್ರೀಯ ತಂಡದ ಜೊತೆ ಇದ್ದಾರೆ. ಬ್ರೆಜಿಲ್‌ನ ರಿಯೊದಲ್ಲಿ 2016ರಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಸಹಾಯಕ ಕೋಚ್ ಆಗಿ ಭಾಗವಹಿಸಿ
ದ್ದರು. 2008ರ ಬೀಜಿಂಗ್‌ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದ ವಿಜೇಂದರ್‌ ಸಿಂಗ್‌ ಅವರಿಗೂ ಮಾರ್ಗದರ್ಶನ ನೀಡಿದ್ದಾರೆ. 2018ರ ಏಷ್ಯನ್‌ ಕ್ರೀಡಾಕೂಟದಲ್ಲಿ ಭಾರತದ ಬಾಕ್ಸರ್‌ಗಳು ಒಂದು ಚಿನ್ನ, ಒಂದು ಕಂಚಿನ ಪದಕ ಗೆಲ್ಲುವಲ್ಲಿ ಪ್ರಮುಖ ಪಾತ್ರ ನಿಭಾಯಿಸಿದ್ದಾರೆ. 2020ರ ಒಲಿಂಪಿಕ್ಸ್‌ನತ್ತ ಕಣ್ಣು ನೆಟ್ಟಿದ್ದಾರೆ.

ADVERTISEMENT

‘ಬಾಲ್ಯದಿಂದಲೇ ಬಾಕ್ಸಿಂಗ್‌ ಪ್ರೀತಿ. 1996ರಲ್ಲಿ ಸೇನೆ ಸೇರಿದ ಮೇಲೂ ಬಾಕ್ಸಿಂಗ್‌ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದೆ. 1997ರಲ್ಲಿ ಹೈದರಾಬಾದ್‌ನಲ್ಲಿ ನಡೆದ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಚಿನ್ನ ಜಯಿಸಿದ್ದೆ. ಈಗ ಕೋಚ್‌ ಹುದ್ದೆಗೇರಿದ್ದೇನೆ. ಇದೊಂದು ಸವಾಲಿನ ಹಾದಿ. ಆರೇಳು ತಿಂಗಳು ಕುಟುಂಬ ಭೇಟಿ ಸಾಧ್ಯವಾಗುವುದಿಲ್ಲ. ಟೂರ್ನಿಗಳ ಕಾರಣ ಸದಾ ದೂರವಿರಬೇಕು. ಆದರೆ, ದೇಶ ಸೇವೆಯೂ ಮುಖ್ಯವಲ್ಲವೇ’ ಎಂದು ಭಾವುಕರಾಗುತ್ತಾರೆ.

ಬಾಕ್ಸರ್‌ಗೆ ತರಬೇತಿ ನೀಡುತ್ತಿರುವ ಸಿ.ಎ.ಕುಟ್ಟಪ್ಪ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.