ADVERTISEMENT

ಚಾಂಪಿಯನ್‌ ದಿನಾಗೆ ಸೋಲುಣಿಸಿದ ಮನೀಷಾ

ಮಹಿಳೆಯರ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಷಿಪ್‌: ಮೇರಿ ಕೋಮ್‌ ಕ್ವಾರ್ಟರ್‌ ಫೈನಲ್‌ಗೆ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2018, 20:00 IST
Last Updated 18 ನವೆಂಬರ್ 2018, 20:00 IST
ಐಜೆರಿಮ್‌ ವಿರುದ್ಧ ಗೆದ್ದ ನಂತರ ಭಾರತದ ಮೇರಿ ಕೋಮ್ ಸಂಭ್ರಮಿಸಿದ ರೀತಿ –ಪಿಟಿಐ ಚಿತ್ರ
ಐಜೆರಿಮ್‌ ವಿರುದ್ಧ ಗೆದ್ದ ನಂತರ ಭಾರತದ ಮೇರಿ ಕೋಮ್ ಸಂಭ್ರಮಿಸಿದ ರೀತಿ –ಪಿಟಿಐ ಚಿತ್ರ   

ನವದೆಹಲಿ: ಹಾಲಿ ಚಾಂಪಿಯನ್‌, ಕಜಕಸ್ತಾನದ ದಿನಾ ಜಲ್ಮನ್‌ ಅವರನ್ನು ಬಲಶಾಲಿ ಪಂಚ್‌ಗಳ ಮೂಲಕ ಕಂಗೆಡಿಸಿದ ಭಾರತದ ಮೋನಿಷಾ ಮೌನ್‌ ಮಹಿಳೆಯರ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನ ಕ್ವಾರ್ಟರ್‌ ಫೈನಲ್‌ಗೆ ಲಗ್ಗೆ ಇರಿಸಿದರು.

ಇಲ್ಲಿನ ಇಂದಿರಾಗಾಂಧಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ 54 ಕೆಜಿ ವಿಭಾಗದ ಪ್ರೀ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ದಿನಾ ಅವರ ಕನಸನ್ನು ಮೋನಿಷಾ ನುಚ್ಚು ನೂರು ಮಾಡಿದರು. ಈ ಮೂಲಕ ಚೊಚ್ಚಲ ಪದಕ ಗೆಲ್ಲುವ ಭರವಸೆ ಮೂಡಿಸಿದರು.

ಅನುಭವಿ ಎದುರಾಳಿಯ ವಿರುದ್ಧ ಹರಿಯಾಣದ 20 ವರ್ಷದ ಮನಿಷಾ ಆಕ್ರಮಣಕಾರಿ ಆಟಕ್ಕೆ ಮೊರೆ ಹೋದರು. ಹೀಗಾಗಿ ಏಕಪಕ್ಷೀಯವಾದ (5–0) ಗೆಲುವು ತಮ್ಮದಾಗಿಸಿಕೊಂಡರು. ಮುಂದಿನ ಹಂತದಲ್ಲಿ ಅವರು 2016ರ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಗೆದ್ದಿದ್ದ ಬಲ್ಗೇರಿಯಾದ ಸ್ಟೊಯ್ಕಾ ಪೆಟ್ರೋವ ಅವರನ್ನು ಎದುರಿಸುವರು.

ADVERTISEMENT

69 ಕೆಜಿ ವಿಭಾಗದಲ್ಲಿ ಭಾರತದ ಲಾವ್ಲಿನಾ ಬೋರ್ಗೇನ್‌ ಮತ್ತು 81 ಕೆಜಿ ವಿಭಾಗದಲ್ಲಿ ಕಚಾರಿ ಭಾಗ್ಯವತಿ ಕ್ವಾರ್ಟರ್ ಫೈನಲ್‌ಗೆ ಏರಿದರು. ಲಾವ್ಲಿನಾ 5–0ಯಿಂದ ಪನಾಮದ ಅಥೇನಾ ಬಯ್ಲಾನ್‌ ಅವರನ್ನು ಮತ್ತು ಕಚಾರಿ 4–1ರಿಂದ ಜರ್ಮನಿಯ ಐರಿನಾ ನಿಕೊಲೆಟಾ ಅವರನ್ನು ಸೋಲಿಸಿದರು.

ಐಜೆರಿಮ್ ಎದುರು ಗೆದ್ದ ಮೇರಿ ಕೋಮ್‌
ಭಾರತದ ಮೇರಿ ಕೋಮ್‌ 48 ಕೆಜಿ ವಿಭಾಗದ ಪ್ರೀ ಕ್ವಾರ್ಟರ್ ಫೈನಲ್‌ನಲ್ಲಿ ಕಜಕಸ್ತಾನದ ಐಜೆರಿಮ್‌ ಕೆಸನಯೆವ ಅವರನ್ನು 5–0ಯಿಂದ ಮಣಿಸಿದರು. ಈ ವರೆಗೆ ಐದು ಚಿನ್ನ ಗೆದ್ದಿರುವ ಮೇರಿ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಅತಿ ಹೆಚ್ಚು ಪ್ರಶಸ್ತಿ ಗೆದ್ದ ದಾಖಲೆಯನ್ನು ಸಮಗಟ್ಟಿದ್ದಾರೆ. ಐರ್ಲೆಂಡ್‌ನ ಕೆತೀ ಟೇಲರ್‌ ಕೂಡ ಐದು ಪ್ರಶಸ್ತಿ ಗಳಿಸಿದ್ದಾರೆ.

‘ಬಾಕ್ಸಿಂಗ್‌ನಲ್ಲಿ ಏನೂ ಸಂಭವಿಸಬಹುದು. ಆದರೂ ನಾನು ಚಿನ್ನದ ಮೇಲೆ ಕಣ್ಣಿಟ್ಟು ಇಲ್ಲಿಗೆ ಬಂದಿದ್ದೇನೆ. ದೇಶದ ಸಮಸ್ತ ಬಾಕ್ಸಿಂಗ್ ಅಭಿಮಾನಿಗಳು ನನ್ನ ಗೆಲುವಿಗಾಗಿ ಹಾರೈಸುತ್ತಿದ್ದು ಅವರನ್ನು ನಿರಾಸೆಗೆ ಒಳಪಡಿಸಲಾರೆ’ ಎಂದು ಮೇರಿ ಕೋಮ್ ಹೇಳಿದರು.

*
ಎದುರಾಳಿ ವಿಶ್ವ ಚಾಂಪಿಯನ್‌ ಆಗಿರಲಿ, ಇನ್ಯಾರೇ ಆಗಿರಲಿ ಬಾಕ್ಸಿಂಗ್‌ ರಿಂಗ್ ಒಳಗೆ ಹೋದ ನಂತರ ನನಗೆ ಅದು ಲೆಕ್ಕಕ್ಕಿಲ್ಲ. ಗೆಲ್ಲುವುದೊಂದೇ ಗುರಿಯಾಗಿರುತ್ತದೆ.
-ಮನೀಷಾ ಮೌನ್‌, ಭಾರತದ ಬಾಕ್ಸರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.