ADVERTISEMENT

ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌: ಗಾಯದ ‘ನೋವು’ ಮರೆಸಿದ ಖುಷಿ

ಜಪಾನ್‌ಗೆ ಎರಡು ಚಿನ್ನ, ಒಂದು ಬೆಳ್ಳಿ ಪದಕ

ಪಿಟಿಐ
Published 19 ಡಿಸೆಂಬರ್ 2021, 17:45 IST
Last Updated 19 ಡಿಸೆಂಬರ್ 2021, 17:45 IST
ಕಿದಂಬಿ ಶ್ರೀಕಾಂತ್‌
ಕಿದಂಬಿ ಶ್ರೀಕಾಂತ್‌   

ಯುವೆಲಾ, ಸ್ಪೇನ್: ಹೋರಾಡಿ ಸೋತ ಭಾರತದ ಕಿದಂಬಿ ಶ್ರೀಕಾಂತ್ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಗೆಲ್ಲುವ ಅವಕಾಶ ಕಳೆದುಕೊಂಡರು. ಆದರೆ ಬ್ಯಾಡ್ಮಿಂಟನ್ ಪ್ರಿಯರ ಮನ ಗೆಲ್ಲುವಲ್ಲಿ ಯಶಸ್ವಿಯಾದರು. ವರ್ಷಗಳಿಂದ ಕಾಡುತ್ತಿದ್ದ ಗಾಯದ ಸಮಸ್ಯೆಯಿಂದ ನೊಂದಿದ್ದ ಅವರಿಗೆ ಈ ಬೆಳ್ಳಿ ಪದಕ ತಂಪೆರೆಯಿತು.

ಭಾನುವಾರ ನಡೆದ ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ ಶ್ರೀಕಾಂತ್ ಸಿಂಗಪುರದ ಲೋಹ್ ಕೀನ್ ಯೂ ಎದುರು ನೇರ ಗೇಮ್‌ಗಳಿಂದ ಸೋತರು. ಆದರೆ ಚಾಂಪಿಯನ್‌ಷಿಪ್‌ನಲ್ಲಿ ದೇಶಕ್ಕೆ ಮೊತ್ತಮೊದಲ ಬೆಳ್ಳಿ ಪದಕ ಗಳಿಸಿಕೊಟ್ಟರು. 28 ವರ್ಷದ ಶ್ರೀಕಾಂತ್ 43 ನಿಮಿಷಗಳಲ್ಲಿ 15-21, 20-22ರಲ್ಲಿ ಎದುರಾಳಿಗೆ ಮಣಿದರು. ಪುರುಷರ ವಿಭಾಗದಲ್ಲಿ ಈ ಸಾಧನೆ ಮಾಡಿದ ದೇಶದ ಮೊದಲ ಆಟಗಾರ ಅವರು. ಮಹಿಳೆಯರ ವಿಭಾಗದಲ್ಲಿ ಪಿ.ವಿ.ಸಿಂಧು 2019ರಲ್ಲಿ ಚಾಂಪಿಯನ್ ಆಗಿದ್ದರು. ತಲಾ ಎರಡು ಬೆಳ್ಳಿ ಮತ್ತು ಕಂಚಿನ ಪದಕವೂ ಅವರಿಗೆ ಒಲಿದಿತ್ತು. ಸೈನಾ ನೆಹ್ವಾಲ್ 2015ರಲ್ಲಿ ಬೆಳ್ಳಿ ಹಾಗೂ 2017ರಲ್ಲಿ ಕಂಚಿನ ಪದಕ ಕೊರಳಿಗೆ ಹಾಕಿಕೊಂಡಿದ್ದರು.

ವಿಶ್ವ ಚಾಂಪಿಯನ್‌ಷಿಪ್‌ನ ಪುರುಷರ ವಿಭಾಗದಲ್ಲಿ ಇದೇ ಮೊದಲ ಬಾರಿ ಭಾರತ ಎರಡು ಪದಕ ಗೆದ್ದುಕೊಂಡಿದೆ. ಶನಿವಾರ ನಡೆದ ಸೆಮಿಫೈನಲ್‌ನಲ್ಲಿ ಶ್ರೀಕಾಂತ್ 17-21, 21-14, 21-17ರಲ್ಲಿ ಭಾರತದವರೇ ಆದ ಲಕ್ಷ್ಯ ಸೇನ್ ವಿರುದ್ಧ ಗೆದ್ದಿದ್ದರು. ಲಕ್ಷ್ಯ ಕಂಚಿನ ಪದಕ ಗಳಿಸಿದರು. ಪುರುಷರ ವಿಭಾಗದಲ್ಲಿ ಈ ಹಿಂದೆ ಪ್ರಕಾಶ್ ಪಡುಕೋಣೆ ಮತ್ತು ಬಿ.ಸಾಯಿ ಪ್ರಣೀತ್ ಕಂಚಿನ ಪದಕದ ಸಾಧನೆ ಮಾಡಿದ್ದಾರೆ.

ADVERTISEMENT

ಎರಡು ವರ್ಷಗಳಲ್ಲಿ ಮೊದಲ ಫೈನಲ್
2017ರಲ್ಲಿ ನಾಲ್ಕು ಸೂಪರ್ ಸೀರಿಸ್ ಟೂರ್ನಿಗಳಲ್ಲಿ ಪ್ರಶಸ್ತಿ ಗೆದ್ದಿದ್ದ ಕಿದಂಬಿ ಶ್ರೀಕಾಂತ್‌ ಆ ವರ್ಷದ ಫ್ರೆಂಚ್ ಓಪನ್ ಟೂರ್ನಿಯ ನಂತರ ಮೊಣಕಾಲಿನ ಗಾಯದ ಸಮಸ್ಯೆಯಿಂದ ಬಳಲಿದ್ದರು. 2019ರ ಇಂಡಿಯಾ ಓಪನ್ ನಂತರ ಅವರು ಯಾವ ಟೂರ್ನಿಯಲ್ಲೂ ಫೈನಲ್ ಪ್ರವೇಶಿಸಲಿಲ್ಲ.

12ನೇ ಶ್ರೇಯಾಂಕದ ಶ್ರೀಕಾಂತ್ ಅವರನ್ನು 24 ವರ್ಷದ ಲೋಹ್‌ ಪ್ರಬಲ ಆಕ್ರಮಣಕಾರಿ ಆಟದ ಮೂಲಕ ಕಾಡಿದರು. ನೆಟ್‌ ಬಳಿ ಅಮೋಘ ಡ್ರಾಪ್ ಮೂಲಕ ಪಾಯಿಂಟ್‌ ಗಳಿಸಿದ ಲೋಹ್ ಆರಂಭದ ಗೇಮ್‌ನಲ್ಲಿ 3–1ರ ಮುನ್ನಡೆ ಸಾಧಿಸಿದರು. ಚೇತರಿಸಿಕೊಂಡಶ್ರೀಕಾಂತ್ 9–3ರ ಮುನ್ನಡೆಯೊಂದಿಗೆ ಭರವಸೆ ಮೂಡಿಸಿದರು. ಲೋಹ್ ಪ್ರತಿದಾಳಿ ನಡೆಸಿದರೂ ಶ್ರೀಕಾಂತ್ ಮುನ್ನಡೆ ಮುಂದುವರಿಯಿತು.

ವಿರಾಮದ ನಂತರ ಲೋಹ್ ಸತತ ನಾಲ್ಕು ಪಾಯಿಂಟ್ ಗಳಿಸಿ ಸಮಬಲ ಸಾಧಿಸಿದರು. ನಂತರ ಭರ್ಜರಿ ಸ್ಮ್ಯಾಷ್ ಮೂಲಕ ಮುನ್ನಡೆ ಸಾಧಿಸಿದರು. ತಪ್ಪುಗಳನ್ನು ಎಸಗಿದ ಶ್ರೀಕಾಂತ್ 13–17ರ ಹಿನ್ನಡೆ ಅನುಭವಿಸಿದರು. ಐದು ಗೇಮ್ ಪಾಯಿಂಟ್‌ಗಳೊಂದಿಗೆ ಲೋಹ್ ಮೊದಲ ಗೇಮ್‌ನಲ್ಲಿ ಪಾರಮ್ಯ ಮೆರೆದರು.

ಎರಡನೇ ಗೇಮ್‌ನಲ್ಲಿ ಇಬ್ಬರೂ ಜಿದ್ದಾಜಿದ್ದಿಯ ಹೋರಾಟ ನಡೆಸಿ 4–4ರ ಸಮಬಲ ಸಾಧಿಸಿದರು. ನಂತರ ಶ್ರೀಕಾಂತ್, ತಮ್ಮ ಸಹಜ ಆಟದ ಮೂಲಕ 7–4ರಲ್ಲಿ ಮುನ್ನಡೆದರು. ಆದರೆ ಮತ್ತೆ ತಪ್ಪುಗಳನ್ನು ಎಸಗಿ 9–9ರ ಸಮಬಲ ಸಾಧಿಸಲು ಎದುರಾಳಿಗೆ ಅವಕಾಶ ಮಾಡಿಕೊಟ್ಟರು. ನಂತರ ಲೋಹ್ ಮುನ್ನಡೆ 11–9ಕ್ಕೆ ಏರಿತು. ಕ್ರಾಸ್ ಕೋರ್ಟ್ ಫ್ಲಿಕ್ ಮತ್ತು ಸೊಗಸಾದ ರಿಟರ್ನ್‌ಗಳ ಮೂಲಕ ಕಿದಂಬಿ 16–14ರ ಮುನ್ನಡೆ ಸಾಧಿಸಿ ನಿರೀಕ್ಷೆ ಮೂಡಿಸಿದರು. 18–16ರ ಮುನ್ನಡೆಯಲ್ಲಿದ್ದಾಗ ಷಟಲ್‌ ಅನ್ನು ನೆಟ್ ಮೇಲೆ ಹಾಕಿ ಪಾಯಿಂಟ್ ಕಳೆದುಕೊಂಡರು. ಮತ್ತೊಮ್ಮೆ ಸ್ಮ್ಯಾಷ್‌ಗಳ ಮೂಲಕ ಮಿಂಚಿದ ಲೋಹ್ 19–18ರಲ್ಲಿ ಮುನ್ನಡೆದರು. ನಂತರ ಶ್ರೀಕಾಂತ್ ಅವರಿಗೆ ಸಿಡಿದೇಳಲು ಆಗಲಿಲ್ಲ.

ಇತರ ಪಂದ್ಯಗಳ ಫಲಿತಾಂಶಗಳು

ಮಹಿಳೆಯರ ಸಿಂಗಲ್ಸ್‌

ಜಪಾನ್‌ನ ಅಕಾನೆ ಯಾಮಗುಚಿಗೆ 21–14, 21–11ರಲ್ಲಿ ಥೈಪೆಯ ಥಾಯ್ ಜು ಯಿಂಗ್ ವಿರುದ್ಧ ಜಯ

ಪುರುಷರ ಡಬಲ್ಸ್‌ನಲ್ಲಿ ಜಪಾನ್‌ನ ಟಕುರೊ–ಯುಗೊಗೆ 21–12, 21–18ರಲ್ಲಿ ಚೀನಾದ ಹೇ ಜಿ–ಟಾನ್ ವಿರುದ್ಧ ಜಯ

ಮಹಿಳೆಯರ ಡಬಲ್ಸ್‌ನಲ್ಲಿ ಚೀನಾದ ಚೆನ್‌–ಜಿಯಾಗೆ 21–16, 21–17ರಲ್ಲಿ ಕೊರಿಯಾದ ಲೀ–ಶಿನ್ ವಿರುದ್ಧ ಗೆಲುವು

ಮಿಶ್ರ ಡಬಲ್ಸ್‌ನಲ್ಲಿ ಥಾಯ್ಲೆಂಡ್‌ನ ದೆಚಾಪೋಲ್–ಸಪ್ಸಿರಿಗೆ ಜಪಾನ್‌ನ ಯೂಟಾ–ಅರಿಸಾ ವಿರುದ್ಧ 21–13, 21–14ಲ್ಲಿ ಜಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.