ADVERTISEMENT

ನಾಮಧಾರಿ ಕಪ್‌ ಹಾಕಿ: ಕೆನರಾ ಬ್ಯಾಂಕ್‌ ತಂಡಕ್ಕೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2025, 15:51 IST
Last Updated 14 ಡಿಸೆಂಬರ್ 2025, 15:51 IST
ಕೆನರಾ ಬ್ಯಾಂಕ್‌ ತಂಡದ ಆಟಗಾರರು ಟ್ರೋಫಿಯೊಂದಿಗೆ ಸಂಭ್ರಮಿಸಿದರು
ಕೆನರಾ ಬ್ಯಾಂಕ್‌ ತಂಡದ ಆಟಗಾರರು ಟ್ರೋಫಿಯೊಂದಿಗೆ ಸಂಭ್ರಮಿಸಿದರು   

ಬೆಂಗಳೂರು: ಶೂಟೌಟ್‌ವರೆಗೆ ತಲುಪಿದ್ದ ಫೈನಲ್ ಪಂದ್ಯದಲ್ಲಿ ಕೆನರಾ ಬ್ಯಾಂಕ್ ತಂಡವು ಡಿವೈಇಎಸ್‌ ‘ಎ’ ತಂಡವನ್ನು ಮಣಿಸಿ ಹಾಕಿ ಕರ್ನಾಟಕ ಆಯೋಜಿಸಿದ್ದ  ನಾಮಧಾರಿ ಕಪ್‌ ಹಾಕಿ ಟೂರ್ನಿಯ ಚಾಂಪಿಯನ್‌ ಆಗಿ ಹೊರಹೊಮ್ಮಿತು.

ಭಾನುವಾರ ನಡೆದ ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ಡಿವೈಇಎಸ್‌ ತಂಡದ ಹರೀಶ್ ಎಂ. 12ನೇ ನಿಮಿಷದಲ್ಲಿ ಗೋಲು ಗಳಿಸಿ ತಮ್ಮ ತಂಡಕ್ಕೆ ಆರಂಭಿಕ ಮುನ್ನಡೆ ತಂದುಕೊಟ್ಟರು. ಒಂದೇ ನಿಮಿಷದ ಅಂತರದಲ್ಲಿ ಗೋಲು ಹೊಡೆದ ಕೆನರಾ ಬ್ಯಾಂಕ್‌ ತಂಡದ ವಿನಯ್ ವಿ.ಎಸ್‌. (13ನೇ ನಿ.) ಸಮಬಲ ಸಾಧಿಸಿಕೊಟ್ಟರು.

ಎರಡನೇ ಕ್ವಾರ್ಟರ್‌ನಲ್ಲಿ ಡಿವೈಇಎಸ್‌ ತಂಡದ ದೇಶ್‌ ಪೂವಯ್ಯ ಎ.ಎ. (26ನೇ ನಿ.) ಅವರು ಗೋಲು ಗಳಿಸಿ, 2–1 ಮುನ್ನಡೆಗೆ ಕಾರಣರಾದರು. ಕೆನರಾ ಬ್ಯಾಂಕ್‌ ತಂಡದ ಹಿತೇಶ್ ಶರ್ಮಾ (55ನೇ ನಿ.) ಅವರು ಅಂತಿಮ ಕ್ಷಣದಲ್ಲಿ ಗೋಲು ಹೊಡೆದ ಪರಿಣಾಮ ಪಂದ್ಯ ಡ್ರಾ ಆಯಿತು.

ADVERTISEMENT

ನಂತರ ನಡೆದ ಶೂಟೌಟ್‌ನಲ್ಲಿ ಕೆನರಾ ಬ್ಯಾಂಕ್‌ ತಂಡವು 5–4ರಿಂದ ಗೆಲುವು ಸಾಧಿಸಿ, ಪ್ರಶಸ್ತಿ ಎತ್ತಿಹಿಡಿಯಿತು. ವಿಜೇತ ತಂಡಕ್ಕೆ ₹50 ಸಾವಿರ ನಗದು ಹಾಗೂ ಟ್ರೋಫಿ ನೀಡಲಾಯಿತು. ರನ್ನರ್‌ಅಪ್‌ ತಂಡಕ್ಕೆ ₹30 ಸಾವಿರ ನಗದು ಹಾಗೂ ಟ್ರೋಫಿ ದೊರೆಯಿತು.

ಜೂನಿಯರ್‌ ಪುರುಷರ ಹಾಕಿ ವಿಶ್ವಕಪ್‌ ಟೂರ್ನಿಯಲ್ಲಿ ಕಂಚು ಗೆದ್ದ ಭಾರತ ತಂಡದಲ್ಲಿ ಆಡಿದ್ದ ಸುನಿಲ್‌ ಪಿ.ಬಿ. ಅವರಿಗೆ ₹1 ಲಕ್ಷ ನಗದು ಬಹುಮಾನ ನೀಡಿ ಗೌರವಿಸಲಾಯಿತು. ಇದೇ ತಂಡದ ಕೋಚ್‌ ಆಗಿದ್ದ ಜನಾರ್ಧನ್‌ ಸಿ.ಬಿ. ಹಾಗೂ ‘ಎಫ್‌ಐಎಚ್‌ ವರ್ಷದ ಅಂಪೈರ್‌’ ಪ್ರಶಸ್ತಿ ಗೆದ್ದ ರಘುಪ್ರಸಾದ್‌ ಆರ್.ವಿ. ಅವರಿಗೆ ತಲಾ ₹50 ಸಾವಿರ ನೀಡಿ ಸನ್ಮಾನ ಮಾಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.