ಟೋಕಿಯೊ: ವಿಶ್ವ ಚಾಂಪಿಯನ್‌ಷಿಪ್‌ನ ಪುರುಷರ ವಿಭಾಗದ ಜಾವೆಲಿನ್ ಥ್ರೊನಲ್ಲಿ ಇದುವರೆಗೆ ಇಬ್ಬರು ಮಾತ್ರ ಸತತವಾಗಿ ಎರಡು ಸಲ ಚಿನ್ನ ಗೆದ್ದುಕೊಂಡಿದ್ದಾರೆ. ಭಾರತದ ನೀರಜ್ ಚೋಪ್ರಾ, ಶನಿವಾರ ಆರಂಭವಾಗುವ ಈ ಪ್ರತಿಷ್ಠಿತ ಕೂಟದಲ್ಲಿ ಆ ಸಾಲಿಗೆ ಸೇರುವ ಗುರಿಯಲ್ಲಿದ್ದಾರೆ.
ಭಾರತದ 19 ಮಂದಿ ಇಲ್ಲಿ ಕಣಕ್ಕಿಳಿಯುತ್ತಿದ್ದಾರೆ. ಆದರೆ ಪದಕದ ಏಕೈಕ ಭರವಸೆ ಆಗಿರುವ ಕಾರಣ ನೀರಜ್ ಅವರ ಮೇಲೆ ಈ ಚಾಂಪಿಯನ್‌ಷಿಪ್‌ನಲ್ಲಿ ನಿರೀಕ್ಷೆಯ ಭಾರ ಇದೆ. 2023ರ ಬುಡಾಪೆಸ್ಟ್ ಚಾಂಪಿಯನ್‌ಷಿಪ್‌ನಲ್ಲಿ ನೀರಜ್ 88.17 ಮೀ. ಎಸೆದು ಸ್ವರ್ಣ ವಿಜೇತರಾಗಿದ್ದರು. ಪಾಕಿಸ್ತಾನದ ಅರ್ಷದ್ ನದೀಮ್ (87.62 ಮೀ.) ಮತ್ತು ಝೆಕ್ ರಿಪಬ್ಲಿಕ್‌ನ ಯಾಕೂಬ್ ವಾಡ್ಲೆಚ್ (86.67 ಮೀ.) ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ದರು.
ಈಗ ಸೆ. 18ರಂದು ನಡೆಯುವ ಜಾವೆಲಿನ್ ಥ್ರೊ ಫೈನಲ್‌ನಲ್ಲಿ ಚಿನ್ನ ಗೆದ್ದರೆ ನೀರಜ್ ಅವರು ಸತತ ಕೂಟಗಳಲ್ಲಿ ಈ ಸಾಧನೆಗೆ ಪಾತ್ರರಾದ ಮೂರನೇ ಅಥ್ಲೀಟ್ ಎನಿಸಲಿದ್ದಾರೆ. ಈಗ ಅವರ ಕೋಚ್ ಆಗಿ ಇಲ್ಲಿಗೆ ಬಂದಿರುವ ಝೆಕ್ ದಿಗ್ಗಜ ಯಾನ್ ಜೆಲ್ನೆಝ್ನಿ (1993, 1995) ಮತ್ತು ಗ್ರೆನೆಡಾದ ಆ್ಯಂಡರ್ಸನ್ ಪೀಟರ್ಸ್ (2019 ಮತ್ತು 2022) ಮಾತ್ರ ಸತತ ಕೂಟಗಳಲ್ಲಿ ಚಿನ್ನ ಗೆದ್ದಿದ್ದರು.
19 ಮಂದಿ ಅಥ್ಲೀಟುಗಳಿರುವ ಭಾರತ ತಂಡದ ನೇತೃತ್ವ ವಹಿಸಿರುವ ನೀರಜ್ ಅವರು ಸುಮಾರು ಒಂದು ವರ್ಷದ ನಂತರ ನದೀಮ್ ಅವರನ್ನು ಮೊದಲ ಬಾರಿ ಎದುರಿಸುತ್ತಿದ್ದಾರೆ. 2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ತಮ್ಮನ್ನು ಎರಡನೇ ಸ್ಥಾನಕ್ಕೆ ತಳ್ಳಿದ ನದೀಮ್ ವಿರುದ್ಧ ಪ್ರತಿಕಾರ ತೀರಿಸಲು ಅವರಿಗೆ ಇದು ಅವಕಾಶ ಸಹ.
ಇಲ್ಲಿಯೇ 20201ರಲ್ಲಿ ಒಲಿಂಪಿಕ್ ಚಿನ್ನ ಗೆದ್ದು ಇತಿಹಾಸ ನಿರ್ಮಿಸಿದ ನೀರಜ್ ಅವರಿಗೆ ಇಲ್ಲಿ ಪದಕದ ಹಾದಿ ದುರ್ಗಮವಾಗಿಯೇ ಇದೆ. ನದೀಮ್, ಪೀಟರ್ಸ್ ಜೊತೆಗೆ ಡೈಮಂಡ್ ಲೀಗ್ ನೂತನ ಚಾಂಪಿಯನ್ ಆಗಿರುವ ಜರ್ಮನಿಯ ಜೂಲಿಯನ್ ವೆಬರ್ ಸೇರಿದಂತೆ ವಿಶ್ವದ ದಿಗ್ಗಜ ಥ್ರೋವರ್‌ಗಳು ಕಣದಲ್ಲಿದ್ದಾರೆ. 2015ರ ವಿಶ್ವ ಚಾಂಪಿಯನ್, ಕೆನ್ಯಾದ ಜೂಲಿಯಸ್ ಯೆಗೊ, 2012ರ ಒಲಿಂಪಿಕ್ ಚಾಂಪಿಯನ್ ಕಿಸೋರ್ನ್ ವಾಲ್ಕಾಟ್ (ಟ್ರಿನಿಡಾಡ್ ಮತ್ತು ಟೊಬ್ಯಾಗೊ), ಅನುಭವಿ ವಾಡ್ಲೆಚ್, ಬ್ರೆಜಿಲ್‌ನ ಲೂಯಿಸ್ ಡಸಿಲ್ವ ಅವರೂ ನೀರಜ್‌ಗೆ ಪರಿಚಿತ ಎದುರಾಳಿಗಳು.
17ರಂದು ಅರ್ಹತಾ ಸುತ್ತು ನಡೆಯಲಿದೆ. ಈಗಿನ ಫಾರ್ಮ್ ಪ್ರಕಾರ ಜರ್ಮನಿಯ ವೆಬರ್ ಫೇವರಿಟ್ ಆಗಿದ್ದಾರೆ. ಈ ಋತುವಿನಲ್ಲಿ ಅವರು ಮೂರು ಬಾರಿ 90 ಮೀ.ಗಿಂತ ದೂರ ಎಸೆದು ಪರಾಕ್ರಮ ಮೆರೆದಿದ್ದಾರೆ. ಡೈಮಂಡ್ ಲೀಗ್ ಕಿರೀಟ ಧರಿಸಿದ ಕಾರಣ ಅವರ ವಿಶ್ವಾಸದ ಮಟ್ಟವೂ ಅಧಿಕವಾಗಿದೆ. ನೀರಜ್ ಈ ಋತುವಿನಲ್ಲಿ ಮೊದಲ ಬಾರಿ (ದೋಹಾ ಡೈಮಂಡ್ ಲೀಗ್‌ನಲ್ಲಿ) 90+ ದೂರ ಸಾಧಿಸಿದ್ದಾರೆ. ಅವರ ಎರಡನೇ ಉತ್ತಮ ಥ್ರೊ 88.16 ಮೀ.
ಜಾವೆಲಿನ್‌ನಲ್ಲಿ ಭಾರತದ ನಾಲ್ವರು ಕಣದಲ್ಲಿರುವುದು ವಿಶೇಷ. ಚೋಪ್ರಾ ಬಿಟ್ಟರೆ ಸಚಿನ್ ಯಾದವ್, ಯಶವೀರ್ ಸಿಂಗ್ ಮತ್ತು ರೋಹಿತ್ ಯಾದವ್ ಅವರೂ ತಮ್ಮ ಸಾಮರ್ಥ್ಯ ಪ್ರದರ್ಶನಕ್ಕೆ ಸಜ್ಜಾಗಿದ್ದಾರೆ. ಚೋಪ್ರಾ ಅವರು ಹಾಲಿ ಚಾಂಪಿಯನ್ ಆಗಿ ವೈಲ್ಡ್ ಕಾರ್ಡ್ ಪಡೆದಿದ್ದಾರೆ. ಉಳಿದ ಮೂವರು ರ್‍ಯಾಂಕಿಂಗ್ ಆಧಾರದಲ್ಲಿ ಅರ್ಹತೆ ಸಂಪಾದಿಸಿದ್ದಾರೆ.
ಬುಡಾಪೆಸ್ಟ್‌ನಲ್ಲಿ ಚೋಪ್ರಾ ಚಿನ್ನ ಗೆದ್ದಾಗ, ಭಾರತದ ಕಿಶೋರ್ ಜೇನಾ ಮತ್ತು ಡಿ.ಪಿ.ಮನು ಕ್ರಮವಾಗಿ ಐದು ಮತ್ತು ಆರನೇ ಸ್ಥಾನ ಗಳಿಸಿದ್ದರು.
ಅನ್ನು ರಾಣಿ (ಮಹಿಳೆಯರ ಜಾವೆಲಿನ್ ಥ್ರೊ), ಪಾರುಲ್ ಚೌಧರಿ (ಮಹಿಳೆಯರ 3000 ಮೀ. ಸ್ಟೀಪಲ್ ಚೇಸ್), ಮುರಳಿ ಶ್ರೀಶಂಖರ್ (ಪುರುಷರ ಲಾಂಗ್‌ಜಂಪ್), ಗುಲ್ವೀರ್ ಸಿಂಗ್ (ಪುರುಷರ 5000 ಮೀ) ಮತ್ತು ಪ್ರವೀಣ್ ಚಿತ್ರವೇಲ್ (ಪುರುಷರ ಟ್ರಿಪಲ್ ಜಂಪ್) ಅವರು ಅಂತಿಮ ಸುತ್ತಿಗೆ ತಲುಪುವ ನಿರೀಕ್ಷೆ ಹೊಂದಿದ್ದಾರೆ. ಅನ್ನು ರಾಣಿ ಅವರಿಗೆ ಇದು ಸತತ ಐದನೇ ವಿಶ್ವ ಚಾಂಪಿಯನ್‌ಷಿಪ್. 2019 ಮತ್ತು 2022ರಲ್ಲಿ ಅವರು ಅಂತಿಮ ಸುತ್ತಿಗೆ ತಲುಪಿದ್ದರು. ಇನ್ನೆರಡಲ್ಲಿ ಅರ್ಹತಾ ಸುತ್ತಿನಲ್ಲೇ ಎಡವಿದ್ದರು. ಈ ವರ್ಷ ಅವರ ಉತ್ತಮ ಥ್ರೊ 62.59 ಮೀ.ಗಳಾಗಿವೆ. ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಅವರ ಉತ್ತಮ ಸಾಧನೆ ಏಳನೇ ಸ್ಥಾನ (2022ರಲ್ಲಿ)
ಗಾಯಾಳಾಗಿದ್ದ ಮುರಳಿ ಶ್ರೀಶಂಕರ್ ಕೊನೆಯ ಗಳಿಗೆಯಲ್ಲಿ ಅರ್ಹತೆ ಪಡೆದಿದ್ದಾರೆ. ಈ ಋತುವಿನಲ್ಲಿ 8.05 ಮೀ. ಅವರ ಉತ್ತಮ ಸಾಧನೆ ಎನಿಸಿದೆ.
ಟೋಕಿಯೊ: ಪೋಲ್‌ವಾಲ್ಟ್ ದಿಗ್ಗಜ ಮೊಂಡೊ ಡುಪ್ಲಾಂಟಿಸ್ ಟೋಕಿಯೊದಲ್ಲೇ ತಮ್ಮ ಮೊದಲ ಪ್ರಮುಖ ಜಾಗತಿಕ ಪ್ರಶಸ್ತಿ ಗೆದ್ದುಕೊಂಡಿದ್ದರು. ಅದು 2021ರ ಒಲಿಂಪಿಕ್ಸ್‌ನಲ್ಲಿ. ಈಗ ಸ್ವೀಡನ್‌ನ ಈ ವಿಶ್ವದಾಖಲೆ ವೀರ ಐದು ವರ್ಷಗಳಲ್ಲಿ ಐದನೇ ಪ್ರಮುಖ ಪ್ರಶಸ್ತಿಗಾಗಿ– 20ನೇ ವಿಶ್ವ ಅಥ್ಲೆಟಿಕ್ಸ್
ಚಾಂಪಿಯನ್‌ಷಿಪ್‌ನಲ್ಲಿ ಕಣಕ್ಕೆ ಇಳಿಯಲಿದ್ದಾರೆ.
ಶನಿವಾರ ಆರಂಭವಾಗುವ ವಿಶ್ವ ಚಾಂಪಿಯನ್‌ಷಿಪ್ 9 ದಿನಗಳ ಕಾಲ ನಡೆಯಲಿದೆ. ನಾಲ್ಕು ವರ್ಷಗಳ ಹಿಂದೆ ಜಪಾನ್ ರಾಜಧಾನಿಯಲ್ಲಿ ನಡೆದ ಒಲಿಂಪಿಕ್ಸ್– ಕೋವಿಡ್ ಪಿಡುಗಿನ ಕಾರಣ ವೈಭವ ಕಂಡಿರಲಿಲ್ಲ. ಅಥ್ಲೀಟುಗಳಿಗೆ ಕಟ್ಟುನಿಟ್ಟು ವಿಧಿಸಲಾಗಿತ್ತು. ಈಗ ಇಲ್ಲಿ ಲವಲವಿಕೆ ಮೂಡಿದೆ.
ಮಧ್ಯಮ ದೂರದ ಓಟಗಾರ್ತಿ ಫೇತ್ ಕಿಪ್ಯೆಗಾನ್, ಅಮೆರಿಕದ ಷಾಟ್ ಪುಟ್ ಸ್ಪರ್ಧಿ ರಯಾನ್ ಕ್ರೌಸರ್ ಮತ್ತು ಮೊರಾಕೊದ ಸ್ಟೀಪಲ್‌ಚೇಸರ್ ಸೌಫಿ ಯಾನ್ ಎಲ್ ಬಕ್ಕಲಿ ಅವರು ಸತತ ಐದನೇ ಬಾರಿ ಕಣಕ್ಕಿಳಿದಿದ್ದಾರೆ. ಕಿಪ್ಯೆಗಾನ್ 1,500 ಮೀ. ಓಟದಲ್ಲಿ ಬಲವಾದ ಹಿಡಿತ ಸಾಧಿಸಿದ್ದಾರೆ. ಬುಡಾಪೆಸ್ಟ್‌ನಲ್ಲಿ ಅವರು 1500 ಮತ್ತು 5000 ಮೀ. ಓಟದಲ್ಲಿ ಚಾಂಪಿಯನ್ ಆಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.