ಚೆನ್ನೈ: ಗ್ರ್ಯಾಂಡ್‌ಮಾಸ್ಟರ್ ಎಂ. ಪ್ರಾಣೇಶ್ ಅಂತಿಮ ಸುತ್ತಿನಲ್ಲಿ ಹರ್ಷವರ್ಧನ್ ಜಿ.ಬಿ. ಎದುರು ಸೋತು ಹಿನ್ನಡೆ ಅನುಭವಿಸಿದರೂ ಚಾಲೆಂಜರ್ಸ್ ವಿಭಾಗದ ಪ್ರಶಸ್ತಿ ಗೆಲ್ಲುವಲ್ಲಿ ಸಮಸ್ಯೆಯಾಗಲಿಲ್ಲ. ಶುಕ್ರವಾರ ಮುಕ್ತಾಯಗೊಂಡ ಈ ಟೂರ್ನಿಯ ಮಾಸ್ಟರ್ಸ್ ವಿಭಾಗದಲ್ಲಿ ಅಗ್ರ ಶ್ರೇಯಾಂಕದ ಆಟಗಾರ ಅರ್ಜುನ್ ಇರಿಗೇಶಿ ಜಂಟಿ ಎರಡನೇ ಸ್ಥಾನ ಪಡೆದರು.
ಮಾಸ್ಟರ್ಸ್ ವಿಭಾಗದಲ್ಲಿ ಒಂದು ಸುತ್ತು ಮೊದಲೇ ಪ್ರಶಸ್ತಿ ಖಾತರಿಪಡಿಸಿಕೊಂಡಿದ್ದ ಜರ್ಮನಿಯ ವಿನ್ಸೆಂಟ್ ಕೀಮರ್ ಒಂಬತ್ತನೇ ಹಾಗೂ ಅಂತಿಮ ಸುತ್ತಿನಲ್ಲೂ ಜಯಗಳಿಸಿ ಒಟ್ಟು 7 ಅಂಕ ಸಂಗ್ರಹಿಸಿದರು. ನೆದರ್ಲೆಂಡ್ಸ್‌ನ ಅನಿಶ್ ಗಿರಿ, ಅರ್ಜುನ್ ಮತ್ತು ಕಾರ್ತಿಕೇಯನ್ ಮುರಳಿ ತಲಾ ಐದು ಅಂಕ ಗಳಿಸಿದರು.
ಭಾರತೀಯ ಆಟಗಾರರ ಪೈಕಿ ನಿಹಾಲ್ ಸರಿನ್ ಐದನೇ, ವಿದಿತ್ ಗುಜರಾತಿ ಏಳನೇ ಮತ್ತು ಪ್ರಣವ್ ಒಂಬತ್ತನೇ ಸ್ಥಾನ ಗಳಿಸಿದರು.
ಅರ್ಜುನ್ ಅಂತಿಮ ಸುತ್ತಿನಲ್ಲಿ ಕಾರ್ತಿಕೇಯನ್ ಮುರಳಿ ಜೊತೆ ಡ್ರಾ ಮಾಡಿಕೊಂಡರೆ, ಅವಾಂಡರ್ ಲಿಯಾಂಗ್ (4.5), ವಿದಿತ್ ಗುಜರಾತಿ (4) ಜೊತೆ ಡ್ರಾ ಮಾಡಿಕೊಂಡರು.
ಜೋರ್ಡನ್ ಫೋರೀಸ್ಟ್ (4), ಅನಿಸ್ ಗಿರಿ ಅವರಿಗೆ ಸೋತರೆ, ರೇ ರಾಬ್ಸನ್ (3), ವಿನ್ಸೆಂಟ್ ಕೀಮರ್ ಅವರಿಗೆ ಶರಣಾದರು. ನಿಹಾಲ್ ಸರಿನ್ (4.5), ಸ್ವದೇಶದ ಪ್ರಣವ್ (3) ಅವರನ್ನು ಮಣಿಸಿದರು.
ಪ್ರಾಣೇಶ್ ಚಾಂಪಿಯನ್:
ತಮಿಳುನಾಡಿನ ಪ್ರಾಣೇಶ್ ಅವರು ಚಾಲೆಂಜರ್ ವಿಭಾಗದ ಒಟ್ಟು 6.5 ಅಂಕಗಳೊಡನೆ ಅಗ್ರಸ್ಥಾನ ಉಳಿಸಿಕೊಂಡರು. ಅವರು ಟ್ರೋಫಿ ಜೊತೆ ₹5 ಲಕ್ಷ ಬಹುಮಾನ ಪಡೆದರು. ಜೊತೆಗೆ ಮುಂದಿನ ವರ್ಷ ಮಾಸ್ಟರ್ಸ್ ವಿಭಾಗದಲ್ಲಿ ಆಡುವ ಅವಕಾಶ ಸಂಪಾದಿಸಿದರು.
ಚಾಲೆಂಜರ್ ವಿಭಾಗದಲ್ಲಿ ಭಾರತದ ಆಟಗಾರರಷ್ಟೇ ಇದ್ದರು. ಅಧಿಬನ್ ಭಾಸ್ಕರನ್, ಅಭಿಮನ್ಯು ಪುರಾಣಿಕ್ ಮತ್ತು ಲಿಯಾನ್ ಲ್ಯೂಕ್ ಮೆಂಡೋನ್ಸಾ ತಲಾ ಆರು ಪಾಯಿಂಟ್ಸ್ ಸಂಗ್ರಹಿಸಿದರು. ಪಿ.ಇನಿಯನ್ (5.5) ಐದನೇ ಸ್ಥಾನ ಪಡೆದರೆ, ದೀಪ್ತಾಯನ ಘೋಷ್ (4.5) ಆರನೇ ಸ್ಥಾನ ಗಳಿಸಿದರು.
ಹರ್ಷವರ್ಧನ್ (4) ಮತ್ತು ಆರ್ಯನ್ ಚೋಪ್ರಾ (4) ಜಂಟಿ ಏಳನೇ ಸ್ಥಾನ ಪಡೆದರು. ಹಾರಿಕಾ (1.5) ಒಂಬತ್ತನೇ ಹಾಗೂ ವೈಶಾಲಿ (1) ಅಂತಿಮ ಸ್ಥಾನ ಪಡೆದರು.
ಒಂಬತ್ತನೇ ಸುತ್ತಿನಲ್ಲಿ ಆರ್ಯನ್, ಹಾರಿಕಾ ವಿರುದ್ಧ; ದೀಪ್ತಾಯನ್, ವೈಶಾಲಿ ವಿರುದ್ಧ; ಇನಿಯನ್, ಅಭಿಮನ್ಯು ಪುರಾಣಿಕ್ ವಿರುದ್ಧ, ಅಧಿಬನ್, ಲಿಯಾನ್ ಮೆಂಡೋನ್ಸಾ ವಿರುದ್ಧ ಜಯಗಳಿಸಿದರು. ಆ ಮೂಲಕ ಎಲ್ಲ ಬೋರ್ಡ್‌ಗಳಲ್ಲಿ ನಿರ್ಣಾಯಕ ಫಲಿತಾಂಶ ಬಂದಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.