ಚೆನ್ನೈ: ಚೆನ್ನೈ ಗ್ರ್ಯಾಂಡ್‌ಮಾಸ್ಟರ್ಸ್ ಚೆಸ್ ಟೂರ್ನಿಯು ನಡೆಯಬೇಕಿರುವ ಹಯಾತ್ ರೀಜೆನ್ಸಿ ಹೋಟೆಲ್‌ನಲ್ಲಿ ಮಂಗಳವಾರ ತಡ ರಾತ್ರಿ ಬೆಂಕಿ ಕಾಣಿಸಿಕೊಂಡಿದೆ. ದೇಶದ ಮತ್ತು ವಿಶ್ವದ ಕೆಲವು ಪ್ರಮುಖ ಆಟಗಾರರು ಪಾಲ್ಗೊಳ್ಳಲಿರುವ ಈ ಟೂರ್ನಿಯನ್ನು ಗುರುವಾರಕ್ಕೆ ಮುಂದೂಡಲಾಗಿದೆ.
ಈ ಟೂರ್ನಿಯ ಮೂರನೇ ಆವೃತ್ತಿ ಬುಧವಾರ ಆರಂಭವಾಗಬೇಕಾಗಿತ್ತು. ‘ಚೆನ್ನೈ ಜಿಎಂ ಟೂರ್ನಿ ನಡೆಯಬೇಕಾದ ಹಯಾತ್ ರೀಜೆನ್ಸಿ ಹೋಟೆಲ್‌ನಲ್ಲಿ ಮಂಗಳವಾರ ರಾತ್ರಿ ಬೆಂಕಿ ಕಾಣಿಸಿಕೊಂಡಿದೆ. ಎಲ್ಲ ಆಟಗಾರರು ಸುರಕ್ಷಿತವಾಗಿದ್ದು ಅವರಿಗೆ ಸಮೀಪದ ಇನ್ನೊಂದು ಹೋಟೆಲ್‌ನಲ್ಲಿ ವಾಸ್ತವ್ಯ ಕಲ್ಪಿಸಲಾಯಿತು. ಟೂರ್ನಿಯನ್ನು ಒಂದು ದಿನ ಮುಂದೂಡಲಾಗಿದೆ’ ಎಂದು ಭಾರತದ ಗ್ರ್ಯಾಂಡ್‌ಮಾಸ್ಟರ್ ಹಾಗೂ ಟೂರ್ನಿಯ ನಿರ್ದೇಶಕ ಶ್ರೀನಾಥ್ ನಾರಾಯಣನ್ ‘ಎಕ್ಸ್’ನಲ್ಲಿ ತಿಳಿಸಿದ್ದಾರೆ.
ಆಟಗಾರರನ್ನು ಮತ್ತೆ ಟೂರ್ನಿ ನಡೆಯುವ ಹೋಟೆಲ್‌ಗೆ ಕರೆತರಲಾಗಿದೆ. ಸುರಕ್ಷತಾ ಕ್ರಮಗಳಿಗೆ ಸಂಬಂಧಿಸಿ ತಪಾಸಣೆಗಳ ನಂತರ ಟೂರ್ನಿಯನ್ನು ಒಂದು ದಿನ ನಂತರ ಆರಂಭಿಸಲಾಗುತ್ತಿದೆ.
ಹೋಟೆಲ್‌ನ 9ನೇ ಮಹಡಿಯಲ್ಲಿ ವಿದ್ಯುತ್ ಅವಘಡದಿಂದ ಮಧ್ಯರಾತ್ರಿ ಬೆಂಕಿ ಕಾಣಿಸಿಕೊಂಡು ಇಡಿ ಹೋಟೆಲ್‌ನಲ್ಲಿ ಹೊಗೆ ಆವರಿಸಿತ್ತು. ಹೀಗಾಗಿ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದ ಅತಿಥಿಗಳನ್ನು ತೆರವು ಮಾಡಲಾಯಿತು ಎಂದು ಚೆಸ್‌ಬೇಸ್ ಇಂಡಿಯಾ ವರದಿ ಮಾಡಿದೆ.
‘ಟೂರ್ನಿಯ ಅವಧಿ ಬದಲಾಗುವುದಿಲ್ಲ. ಆದರೆ ವಿಶ್ರಾಂತಿ ದಿನವನ್ನು ತೆಗೆದುಹಾಕಲಾಗಿದೆ’ ಎಂದು ಆಯೋಜಕರು ಪಿಟಿಐಗೆ ತಿಳಿಸಿದ್ದಾರೆ. ಟೂರ್ನಿಯು ನಿಗದಿಯಂತೆ ಆಗಸ್ಟ್ 15ರಮದು ಮುಕ್ತಾಯಗೊಳ್ಳಲಿದೆ.
ಈ ಟೂರ್ನಿಯು ಒಂದು ಕೋಟಿ ರೂಪಾಯಿ ಬಹುಮಾನ ಮೊತ್ತ ಹೊಂದಿದೆ. ಭಾರತದ ಅಗ್ರಮಾನ್ಯ ಆಟಗಾರ ಅರ್ಜುನ್ ಇರಿಗೇಶಿ, ಅನುಭವಿ ವಿದಿತ್ ಗುಜರಾತಿ, ನೆದರ್ಲೆಂಡ್ಸ್‌ನ ಅನಿಶ್ ಗಿರಿ ಮತ್ತಿತರ ಖ್ಯಾತನಾಮರು ಭಾಗವಹಿಸಲಿದ್ದಾರೆ. 19 ಗ್ರ್ಯಾಂಡ್‌ಮಾಸ್ಟರ್‌ಗಳು (ಮಾಸ್ಟರ್ಸ್ ಮತ್ತು ಚಾಲೆಂಜರ್ ವಿಭಾಗಗಳಲ್ಲಿ ಸೇರಿ) ಕಣದಲ್ಲಿದ್ದಾರೆ.
ವಿಶ್ವದ ಐದನೇ ಕ್ರಮಾಂಕದ ಆಟಗಾರ ಇರಿಗೇಶಿ ಅವರು ಅಮೆರಿಕದ ಪ್ರತಿಭಾನ್ವಿತ ಅವಾಂಡರ್ ಲಿಯಾಂಗ್ ಅವರನ್ನು ಎದುರಿಸುವ ಮೂಲಕ ಅಭಿಯಾನ ಆರಂಭಿಸಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.