ಮಿಯಾಮಿ: ಭಾರತದ ಗ್ರ್ಯಾಂಡ್‌ಮಾಸ್ಟರ್ ಆರ್.ಪ್ರಗ್ನಾನಂದ ಅವರು ಎಫ್‌ಟಿಎಕ್ಸ್ ಕ್ರಿಪ್ಟೊ ಕಪ್ ಚೆಸ್ ಟೂರ್ನಿಯಲ್ಲಿ ಗೆಲುವಿನ ಓಟ ಮುಂದುವರಿಸಿದ್ದಾರೆ.
ಶುಕ್ರವಾರ ನಡೆದ ನಾಲ್ಕನೇ ಸುತ್ತಿನಲ್ಲಿ ಅವರು 3–1 ಪಾಯಿಂಟ್‌ಗಳಿಂದ ಅಮೆರಿಕದ ಲೆವೊನ್ ಅರೊನಿಯನ್ ಎದುರು ಗೆದ್ದರು.
ನಾಲ್ಕು ಸುತ್ತುಗಳ ಬಳಿಕ 12 ಮ್ಯಾಚ್ ಪಾಯಿಂಟ್‌ಗಳನ್ನು ಹೊಂದಿರುವ ಪ್ರಗ್ನಾನಂದ ಅವರು ನಾರ್ವೆಯ ಮ್ಯಾಗ್ನಸ್ ಕಾರ್ಲ್‌ಸನ್ ಜತೆ ಜಂಟಿ ಅಗ್ರಸ್ಥಾನದಲ್ಲಿದ್ದಾರೆ. ಎಂಟು ಆಟಗಾರರು ಪಾಲ್ಗೊಂಡಿರುವ ಟೂರ್ನಿಯಲ್ಲಿ ಇನ್ನು ಮೂರು ಸುತ್ತುಗಳು ಬಾಕಿಯಿವೆ.
17 ವರ್ಷದ ಪ್ರಗ್ನಾನಂದ, ಅರೋನಿಯನ್ ಎದುರಿನ ಮೊದಲ ಎರಡು ಗೇಮ್‌ಗಳನ್ನು ಡ್ರಾ ಮಾಡಿಕೊಂಡರು. ಮೂರನೇ ಗೇಮ್‌ನಲ್ಲಿ ಚಾಣಾಕ್ಷ ಆಟವಾಡಿ ಗೆಲುವು ಪಡೆದು 2–1 ರಲ್ಲಿ ಮುನ್ನಡೆ ಪಡೆದರು. ನಾಲ್ಕನೇ ಗೇಮ್‌ನಲ್ಲೂ ಚತುರ ಆಟವಾಡಿ 44 ನಡೆಗಳಲ್ಲಿ ಗೆಲುವು ಒಲಿಸಿಕೊಂಡರು.
ಕಾರ್ಲ್‌ಸನ್ ಅವರು ನಾಲ್ಕನೇ ಸುತ್ತಿನಲ್ಲಿ 3–1 ಪಾಯಿಂಟ್‌ಗಳಿಂದ ಚೀನಾದ ಕುವಾಂಗ್ ಲಿಯೆಮ್ ಲಿ ಅವರನ್ನು ಪರಾಭವಗೊಳಿಸಿದರು. ಮೊದಲ ಎರಡು ಗೇಮ್‌ಗಳಲ್ಲಿ ಡ್ರಾ ಸಾಧಿಸಿದ ನಾರ್ವೆಯ ಆಟಗಾರ, ಕೊನೆಯ ಎರಡು ಗೇಮ್‌ಗಳನ್ನು ಗೆದ್ದರು.
ಪ್ರಗ್ನಾನಂದ ಅವರು ಮೊದಲ ಮೂರು ಸುತ್ತುಗಳಲ್ಲಿ ಕ್ರಮವಾಗಿ ಅಲಿರೆಜಾ ಫಿರೊಜಾ, ಅನೀಶ್ ಗಿರಿ ಮತ್ತು ಹ್ಯಾನ್ಸ್ ನೀಮನ್ ಎದುರು ಗೆಲುವು ಪಡೆದಿದ್ದರು.
ಪ್ರಗ್ನಾನಂದ ಮತ್ತು ಕಾರ್ಲ್‌ಸನ್ ಅವರು ಜೂನಿಯರ್ ವಿಭಾಗದಲ್ಲಿ ವಿಶ್ವದ ಅಗ್ರ ರ‍್ಯಾಂಕ್‌ನ ಆಟಗಾರನಾಗಿರುವ ಅಲಿರೆಜಾ ಅವರಿಗಿಂತ ನಾಲ್ಕು ಪಾಯಿಂಟ್‌ಗಳಿಂದ ಮುಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.