ADVERTISEMENT

ಚೆಸ್ ಟೂರ್ನಿ: ನಿತಿನ್ ಬಾಬುಗೆ ಚಾಂಪಿಯನ್‌ ಪಟ್ಟ, ಮಂದಾರ್‌ ರನ್ನರ್ ಅಪ್

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2025, 15:39 IST
Last Updated 30 ಸೆಪ್ಟೆಂಬರ್ 2025, 15:39 IST
ಪ್ರಶಸ್ತಿ ಗೆದ್ದ ನಿತಿನ್ ಬಾಬು (ಮಧ್ಯ), ರನ್ನರ್ ಅಪ್‌ ಲಾಡ್ ಮಂದಾರ್ ಪ್ರದೀಪ್ (ಬಲ) ಮತ್ತು ಮೂರನೇ ಸ್ಥಾನ ಗಳಿಸಿದ ದಿನೇಶ್ ಕುಮಾರ್ ಜಗನ್ನಾಥನ್ 
ಪ್ರಶಸ್ತಿ ಗೆದ್ದ ನಿತಿನ್ ಬಾಬು (ಮಧ್ಯ), ರನ್ನರ್ ಅಪ್‌ ಲಾಡ್ ಮಂದಾರ್ ಪ್ರದೀಪ್ (ಬಲ) ಮತ್ತು ಮೂರನೇ ಸ್ಥಾನ ಗಳಿಸಿದ ದಿನೇಶ್ ಕುಮಾರ್ ಜಗನ್ನಾಥನ್    

ಮಂಗಳೂರು: ಕುತೂಹಲ ಕೆರಳಿಸಿದ್ದ ಕೊನೆಯ ಸುತ್ತಿನಲ್ಲಿ ಸೋತರೂ ಕೇರಳದ ನಿತಿನ್ ಬಾಬು ಇಲ್ಲಿ ಮಂಗಳವಾರ ಮುಕ್ತಾಯಗೊಂಡ ಗ್ರ್ಯಾಂಡ್‌ ಅರ್‌ಸಿಸಿ ಫಿಡೆ ರೇಟೆಡ್ ಅಂತರರಾಷ್ಟ್ರೀಯ ಕ್ಲಾಸಿಕಲ್ ಚೆಸ್ ಟೂರ್ನಿಯ ಪ್ರಶಸ್ತಿ ಗೆದ್ದುಕೊಂಡರು.

ನಗರದ ಶಾರದಾ ವಿದ್ಯಾಲಯ ಆವರಣದಲ್ಲಿ ರಾವ್ಸ್‌ ಚೆಸ್ ಕಾರ್ನರ್ ಆಯೋಜಿಸಿದ್ದ ಟೂರ್ನಿಯ 9 ಸುತ್ತುಗಳಲ್ಲಿ ನಿತಿನ್ ಬಾಬು ಮತ್ತು ಗೋವಾದ ಲಾಡ್ ಮಂದಾರ್ ಪ್ರದೀಪ್ ತಲಾ ಎಂಟು ಪಾಯಿಂಟ್‌ ಕಲೆ ಹಾಕಿದರು. ಉತ್ತಮ ಟೈ ಬ್ರೇಕ್‌ ಆಧಾರದಲ್ಲಿ ನಿತಿನ್ ಪ್ರಶಸ್ತಿ ತಮ್ಮದಾಗಿಸಿಕೊಂಡರು. ಆಕರ್ಷಕ ಟ್ರೋಫಿ ಮತ್ತು ₹50 ಸಾವಿರ ಬಹುಮಾನ ಮೊತ್ತ ಅವರ ಪಾಲಾಯಿತು. ಮಂದಾರ್‌, ಟ್ರೋಫಿ ಮತ್ತು ₹35 ಸಾವಿರ ಮೊತ್ತ ತಮ್ಮದಾಗಿಸಿಕೊಂಡರು.

ತಮಿಳುನಾಡಿನ ದಿನೇಶ್ ಕುಮಾರ್ ಜಗನ್ನಾಥನ್‌, ಕರ್ನಾಟಕದ ಪ್ರಣವ್ ಎ.ಜೆ, ಮಣಿಪುರದ ವಿಕ್ರಂ ಜೀತ್ ಸಿಂಗ್‌, ಕೇರಳದ ಸಾವಂತ್ ಕೃಷ್ಣ, ತಮಿಳುನಾಡಿನ ಆದಿತ್ಯ ಎಸ್‌, ಕೇರಳದ ರಜತ್ ರಂಜಿತ್ ಮತ್ತು ತಮಿಳುನಾಡಿನ ಮೈತ್ರೇಯನ್ ತಲಾ 7.5 ಪಾಯಿಂಟ್ ಗಳಿಸಿದರು. ಇವರು ಕ್ರಮವಾಗಿ 3ರಿಂದ 9ರ ವರೆಗಿನ ಸ್ಥಾನ ಹಂಚಿಕೊಂಡರು. ದಿನೇಶ್ ಕುಮಾರ್ ಜಗನ್ನಾಥನ್‌ ಟ್ರೋಫಿ ಮತ್ತು ₹ 25 ಸಾವಿರ ಗಳಿಸಿದರು. ವಿವಿಧ ವಿಭಾಗಗಳಲ್ಲಿ ಒಟ್ಟು ₹ 8 ಲಕ್ಷ ಬಹುಮಾನ ಮೊತ್ತ ಹಂಚಲಾಯಿತು.

ADVERTISEMENT

ಮೊದಲ ಶ್ರೇಯಾಂಕದ ಆಟಗಾರ ಇಂಟರ್‌ನ್ಯಾಷನಲ್ ಮಾಸ್ಟರ್‌ (ಐಎಂ) ಆಂಧ್ರಪ್ರದೇಶದ ಎಂ.ಡಿ ಇಮ್ರಾನ್‌ ನಾಲ್ಕನೇ ಸುತ್ತು ನಂತರ ವಾಪಸ್ ತೆರಳಿದ್ದರು. ಕಣದಲ್ಲಿ ಉಳಿದಿದ್ದ ಇಬ್ಬರು ಐಎಂಗಳಾದ ಸರವಣ ಕೃಷ್ಣನ್ ಮತ್ತು ಮುರಳಿ ಕೃಷ್ಣನ್ ಕ್ರಮವಾಗಿ 21 ಮತ್ತು 22ನೇ ಸ್ಥಾನಕ್ಕೆ ಕುಸಿದರು.

ದಕ್ಷಿಣ ಕನ್ನಡ ಪಂಕಜ್ ಭಟ್‌, ಧನುಷ್‌ ರಾಮ್‌ ಮತ್ತು ಲಕ್ಷಿತ್ ಸಾಲಿಯಾನ್ 11 ಮಂದಿಯ ಜೊತೆ 7 ಪಾಯಿಂಟ್‌ಗಳನ್ನು ಹಂಚಿಕೊಂಡರು. ಇವರಿಗೆ ಕ್ರಮವಾಗಿ 14, 16 ಮತ್ತು 18ನೇ ಸ್ಥಾನ ಲಭಿಸಿತು.

ಕೊನೆಯ ಸುತ್ತಿನಲ್ಲಿ ಟಾಪ್ ಬೋರ್ಡ್‌ನಲ್ಲಿ ಲಾಡ್ ಮಂದಾರ್ ಪ್ರದೀಪ್ (ರೇಟಿಂಗ್‌: 2392) ನಿತಿನ್ (2297) ವಿರುದ್ಧ ಜಯ ಗಳಿಸಿದರು. ಎರಡನೇ ಬೋರ್ಡ್‌ನಲ್ಲಿ ವಿಕ್ರಂ ಜೀತ್ ಸಿಂಗ್ ಮತ್ತು ದಿನೇಶ್ ಜಗನ್ನಾಥನ್ ಡ್ರಾ ಮಾಡಿಕೊಂಡರು. ಸಾವಂತ್ ಕೃಷ್ಣ ಮತ್ತು ಪ್ರಣವ್ ನಡುವಿನ ಪಂದ್ಯವೂ ಡ್ರಾ ಆಯಿತು. ಆದಿತ್ಯ ಸಾವಳ್ಕರ್ ವಿರುದ್ಧ ಆದಿತ್ಯ ಎಸ್‌, ಸರವಣ ಕೃಷ್ಣನ್ ವಿರುದ್ಧ ರಜತ್ ರಂಜಿತ್ ಜಯ ಗಳಿಸಿದರು. ಮೈತ್ರೇಯನ್ ಪಿ ಮತ್ತು ಪಂಕಜ್ ಭಟ್ ಡ್ರಾ ಮಾಡಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.