
ಪಣಜಿ: ಗ್ರ್ಯಾಂಡ್‌ಮಾಸ್ಟರ್ ದೀಪ್ತಾಯನ್ ಘೋಷ್ ಅವರು ವಿಶ್ವಕಪ್ ಚೆಸ್‌ನಲ್ಲೇ ಅತಿದೊಡ್ಡ ಅನಿರೀಕ್ಷಿತ ಫಲಿತಾಂಶಕ್ಕೆ ಕಾರಣರಾದರು. ವಿಶ್ವಕಪ್ ಟೂರ್ನಿಯ ಎರಡನೆ ಸುತ್ತಿನ ಪಂದ್ಯದಲ್ಲಿ ಬುಧವಾರ ಮರು ಕ್ಲಾಸಿಕಲ್ ಪಂದ್ಯ ಗೆದ್ದ ಬಂಗಾಳದ ಆಟಗಾರ, ಮಾಜಿ ವಿಶ್ವ ಚಾಂಪಿಯನ್‌ಷಿಪ್ ಚಾಲೆಂಜರ್ ಇಯಾನ್ ನಿಪೊಮ್‌ನಿಷಿ ಅವರನ್ನು 1.5–0.5 ರಿಂದ ಸೋಲಿಸಿದರು.
ಪಂದ್ಯ ಏಕಪಕ್ಷೀಯವಾಗಿದ್ದು, ಬಿಳಿ ಕಾಯಿಗಳಲ್ಲಿ ಆಡಿದ ರಷ್ಯಾದ (ಇಲ್ಲಿ ಫಿಡೆ ಪ್ರತಿನಿಧಿಸಿದ) ಆಟಗಾರನಿಗೆ ಚೇತರಿಸುವ ಅವಕಾಶವನ್ನೇ ಘೋಷ್ ನೀಡಲಿಲ್ಲ.
‘ನಿಪೊ ಅವರನ್ನು ಸೋಲಿಸಿದ್ದು, ನಿಸ್ಸಂದೇಹವಾಗಿ ನನ್ನ ಚೆಸ್ ಜೀವನದ ಅತಿ ದೊಡ್ಡ ಗೆಲುವು’ ಎಂದು ವಿಜಯದ ನಂತರ ಭಾರತದ ಆಟಗಾರ ಹೇಳಿದರು.
ಅರ್ಜುನ್ ಇರಿಗೇಶಿ ಮುನ್ನಡೆ:
ಎರಡನೇ ಶ್ರೇಯಾಂಕದ ಅರ್ಜುನ್ ಇರಿಗೇಶಿ, ಬಲ್ಗೇರಿಯಾದ ಮಾರ್ಟಿನ್ ಪೆಟ್ರೋವ್ ಅವರನ್ನು ಎರಡನೇ ಪಂದ್ಯದಲ್ಲೂ ಮಣಿಸಿ (2–0) ಅಮೋಘ ರೀತಿಯಲ್ಲಿ ಮೂರನೇ ಸುತ್ತಿಗೆ ತಲುಪಿದರು.
ಅಗ್ರ ಶ್ರೇಯಾಂಕದ ಗುಕೇಶ್ ದೊಮ್ಮರಾಜು ಎರಡನೇ ಕ್ಲಾಸಿಕಲ್ ಆಟದಲ್ಲಿ, ಕಜಾಕಸ್ತಾನ ನದಿರ್ಬೆಕ್ ಕಝಿಬೆಕ್ ಅವರನ್ನು ಸೋಲಿಸಿದರು. ಆ ಮೂಲಕ 1.5–0.5 ರಿಂದ ಪಂದ್ಯ ಗೆದ್ದರು.
ಅನುಭವಿ ಪಿ.ಹರಿಕೃಷ್ಣ 1.5–0.5 ರಿಂದ ನೆಸ್ಟೆರೋವ್ ಅರ್ಸೆನಿ (ಫಿಡೆ) ವಿರುದ್ಧ ಗೆದ್ದು ಮೂರನೇ ಸುತ್ತು ತಲುಪಿದ ಮೊದಲಿಗರೆನಿಸಿದರು.
ಆದರೆ ವಿಶ್ವ ಜೂನಿಯರ್ ಚಾಂಪಿಯನ್ ವಿ. ಪ್ರಣವ್, ನಾರ್ವೆಯ ಆರ್ಯನ್ ತರಿ ಎದುರು ಎರಡನೇ ಪಂದ್ಯದಲ್ಲಿ ಸೋತಿದ್ದು, ಈ ಸೆಣಸಾಟ ಟೈಬ್ರೇಕರ್‌ಗೆ ವಿಸ್ತರಿಸಿತು.
ನೆದರ್ಲೆಂಡ್ಸ್‌ನ ಅನಿಶ್ ಗಿರಿ ಅವರು ಬೋಸ್ನಿಯಾದ ಮಕ್ಸಿಮೋವಿಚ್ ಬೊಯಾನ್ ಅವರನ್ನು 1.5–0.5 ರಿಂದ ಮಣಿಸಿ ಮೂರನೇ ಸುತ್ತಿಗೆ ಮುನ್ನಡೆದರು.
ಹೊರಬಿದ್ದ ವೆಸ್ಲಿ ಸೊ:
ಐದನೇ ಶ್ರೇಯಾಂಕದ ಅಮೆರಿಕದ ಆಟಗಾರ ವೆಸ್ಲಿ ಸೊ ಅನಿರೀಕ್ಷಿತವಾಗಿ ಎರಡನೇ ಸುತ್ತಿನಲ್ಲೇ ಹೊರಬಿದ್ದರು. ಅವರು ಲಿಥುವೇನಿಯಾದ 27 ವರ್ಷ ವಯಸ್ಸಿನ ಆಟಗಾರ ತಿತಾಸ್ ಸ್ಟ್ರೆಮೆವಿಸಿಯಸ್ ಅವರಿಗೆ 0.5–1.5ರಲ್ಲಿ ಮಣಿದರು.
ಜರ್ಮನಿಯ ವಿನ್ಸೆಂಟ್ ಕೀಮರ್, ಚೀನಾದ ವೀ ಯಿ, ಹಂಗೆರಿಯ ರಿಚರ್ಡ್ ರ್‍ಯಾಪೋರ್ಟ್ ಅವರೂ 2–0 ಅಂತರದಿಂದ ಎದುರಾಳಿಗಳನ್ನು ಬಗ್ಗುಬಡಿದರು.
ಅಮೆರಿಕದ ಲೆವೋನ್ ಅರೋನಿಯನ್ 1.5–0.5 ರಿಂದ ಅರಣ್ಯಕ್ ಘೋಷ್ ಅವರನ್ನು ಮಣಿಸಿದರು. ಮೊದಲ ಆಟ ಜಯಿಸಿದ್ದ ಅರೋನಿಯನ್, ಎರಡನೇ ಆಟವನ್ನು ಸುರಕ್ಷಿತವಾಗಿ ಡ್ರಾ ಮಾಡಿಕೊಂಡರು.
ಫ್ರಾನ್ಸ್‌ನ ಮ್ಯಾಕ್ಸಿಂ ವೇಷಿಯರ್ ಲಗ್ರಾವ್ ಇನ್ನೊಂದು ಪಂದ್ಯದಲ್ಲಿ ಭಾರತದ ಅನುಭವಿ ಸೂರ್ಯಶೇಖರ ಗಂಗೂಲಿ ಅವರನ್ನು 1.5–0.5ರಿಂದ ಸೋಲಿಸಿ ಮೂರನೇ ಸುತ್ತಿಗೆ ಕಾಲಿಟ್ಟರು. ಉಜ್ಬೇಕಿಸ್ತಾನದ ಜಾವೊಕಿರ್ ಸಿಂಧರೋವ್, ಸ್ಲೊವೇನಿಯಾದ ವ್ಲಾದಿಮಿರ್ ಫೆಡೊಸೀವ್ ಸಹ ಮುಂದಿನ ಸುತ್ತಿಗೆ ಮುನ್ನಡೆದರು.