ADVERTISEMENT

ವಿಶ್ವಕಪ್ ಚೆಸ್‌: 3ನೇ ಸುತ್ತಿಗೆ ಪ್ರಜ್ಞಾನಂದ, ವಿದಿತ್‌

ಸಾಧ್ವಾನಿ, ನಿಹಾಲ್‌ಗೆ ನಿರಾಸೆ,

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2025, 18:37 IST
Last Updated 6 ನವೆಂಬರ್ 2025, 18:37 IST
ಪ್ರಜ್ಞಾನಂದ
ಫಿಡೆ ವೆಬ್‌ಸೈಟ್ ಚಿತ್ರ
ಪ್ರಜ್ಞಾನಂದ ಫಿಡೆ ವೆಬ್‌ಸೈಟ್ ಚಿತ್ರ   

ಪಣಜಿ (ಪಿಟಿಐ): ಆಸ್ಟ್ರೇಲಿಯಾದ ತೆಮೂರ್‌ ಕುಯ್ಬೊಕರೋವ್ ಅವರನ್ನು ಟೈಬ್ರೇಕರ್‌ನಲ್ಲಿ 5–3 ರಲ್ಲಿ ಪ್ರಯಾಸದಿಂದ ಸೋಲಿಸಿದ ಭಾರತದ ಗ್ರ್ಯಾಂಡ್‌ಮಾಸ್ಟರ್ ಪ್ರಜ್ಞಾನಂದ ಆರ್. ಅವರು ವಿಶ್ವಕಪ್ ಚೆಸ್‌ ಟೂರ್ನಿಯ ಮೂರನೇ ಸುತ್ತಿಗೆ ಪ್ರವೇಶಿಸಿದರು. ವಿದಿತ್‌ ಗುಜರಾತಿ ಅವರು ಅರ್ಜೆಂಟೀನಾದ ಪ್ರತಿಭಾನ್ವಿತ ಫೌಸ್ಟಿನೊ ಓರೊ ವಿರುದ್ಧ ಟೈಬ್ರೇಕರ್‌ನಲ್ಲಿ ಗೆದ್ದು ಮುನ್ನಡೆದರು.

ಆದರೆ ಭಾರತದ ಗ್ರ್ಯಾಂಡ್‌ಮಾಸ್ಟರ್‌ಗಳಾದ ನಿಹಾಲ್ ಸರಿನ್ ಮತ್ತು ರೋನಕ್‌ ಸಾಧ್ವಾನಿ ನಿರಾಶೆ ಅನುಭವಿಸಬೇಕಾಯಿತು. ಗ್ರೀಸ್‌ನ ಗ್ರ್ಯಾಂಡ್‌ಮಾಸ್ಟರ್ ಕೌರ್ಕೊಲೊಸ್‌ ಅರ್ಡಿಟಿಸ್‌ ಸ್ಟಮಾಟಿಸ್‌ ಅವರು ಟೈಬ್ರೇಕರ್‌ನ ಮೊದಲ ಸೆಟ್‌ನಲ್ಲಿ ಕೇರಳದ ಸರಿನ್ ಅವರಿಗೆ ಆಘಾತ ನೀಡಿದರು. ಸಾಧ್ವಾನಿ ಅವರು 1–3 ರಿಂದ ಅರ್ಮೆನಿಯಾದ ರಾಬರ್ಟ್‌ ಹೊವನೀಸಿಯನ್ ಅವರಿಗೆ ಸೋತರು.

ಭಾರತದ ಆಟಗಾರರ ವ್ಯವಹಾರವಾಗಿದ್ದ ಇನ್ನೊಂದು ಪಂದ್ಯದಲ್ಲಿ ಅರವಿಂದ ಚಿದಂಬರಮ್ ಅವರು ತಮಗಿಂತ ಕೆಳ ಕ್ರಮಾಂಕದ ಕಾರ್ತಿಕ್ ವೆಂಕಟರಮಣನ್ ಅವರಿಗೆ ಎರಡನೇ ಸೆಟ್‌ ಟೈಬ್ರೇಕರಿನಲ್ಲಿ ಮಣಿದರು.

ADVERTISEMENT

ವಿಶ್ವ ಜೂನಿಯರ್ ಚಾಂಪಿಯನ್ ವಿ. ಪ್ರಣವ್ ಕೂಡ ಸಂಯಮ ತೋರಿ, ನಾರ್ವೆಯ ಆರ್ಯನ್ ತರಿ ಅವರನ್ನು ಮಣಿಸಿ ಮೂರನೇ ಸುತ್ತನ್ನು ಪ್ರವೇಶಿಸಿದರು. ಗ್ರ್ಯಾಂಡ್‌ಮಾಸ್ಟರ್‌ ಎಂ.ಪ್ರಾಣೇಶ್‌ ಅವರು ಜರ್ಮನಿಯ ಡಿಮಿಟ್ರಿ ಕೊಲ್ಲರ್ಸ್‌ ಅವರನ್ನು ಪರಾಭವಗೊಳಿಸಿದರು. ಎಸ್‌.ಎಲ್‌.ನಾರಾಯಣನ್‌ ಅವರು ಇಂಗ್ಲೆಂಡ್‌ನ ನಿಕಿಟಾ ವಿಟಿಯುಗೊವ್ ಅವರನ್ನು ಸೋಲಿಸಿದರು.

ಒಟ್ಟಾರೆ ಭಾರತದ 10 ಮಂದಿ ಮೂರನೇ ಸುತ್ತಿಗೆ ಮುನ್ನಡೆದಂತಾಗಿದೆ. ಅಗ್ರ ಶ್ರೇಯಾಂಕದ ಗುಕೇಶ್‌ ದೊಮ್ಮರಾಜು, ಎರಡನೇ ಶ್ರೇಯಾಂಕದ ಅರ್ಜುನ್‌ ಇರಿಗೇಶಿ, ದೀಪ್ತಾಯನ ಘೋಷ್‌, ಕಾರ್ತಿಕ್‌ ವೆಂಕಟರಾಮನ್, ಪೆಂಟಾಲ ಹರಿಕೃಷ್ಣ ಅವರು ಎರಡನೇ ದಿನವೇ ತಮ್ಮ ಎದುರಾಳಿಗಳ ವಿರುದ್ಧ ಜಯಗಳಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.