ಸಾತ್ವಿಕ್, ಚಿರಾಗ್
ಶೆಂಜೆನ್ (ಚೀನಾ): ಸಾತ್ವಿಕ್‌ಸಾಯಿರಾಜ್ ರಣಕಿರೆಡ್ಡಿ– ಚಿರಾಗ್ ಶೆಟ್ಟಿ ಜೋಡಿ, ಚೀನಾ ಮಾಸ್ಟರ್ಸ್ ಸೂಪರ್ 750 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಬುಧವಾರ ಅಂತಿಮ 16ರ ಸುತ್ತನ್ನು ತಲುಪಿತು. ಆದರೆ ಪುರುಷರ ಸಿಂಗಲ್ಸ್‌ನಲ್ಲಿ ಭಾರತದ ಅಗ್ರ ಆಟಗಾರ ಲಕ್ಷ್ಯ ಸೇನ್ ಮೊದಲ ಸುತ್ತನ್ನು ದಾಟಲು ಸಾಧ್ಯವಾಗಲಿಲ್ಲ.
ಹೋದ ವಾರವಷ್ಟೇ ಹಾಂಗ್‌ಕಾಂಗ್ ಓಪನ್‌ನಲ್ಲಿ ರನ್ನರ್ ಅಪ್ ಆಗಿದ್ದ ಸಾತ್ವಿಕ್– ಚಿರಾಗ್ ಅವರು ಡಬಲ್ಸ್ ಮೊದಲ ಸುತ್ತಿನಲ್ಲಿ ಮಲೇಷ್ಯಾದ ಜುನೈದಿ ಅರಿಫ್– ರಾಯ್ ಕಿಂಗ್ ಯಾಪ್ ಅವರನ್ನು 24–22, 21–13 ರಿಂದ ಸೋಲಿಸಿದರು. ಗೆಲ್ಲಲು ಭಾರತದ ಜೋಡಿ 42 ನಿಮಿಷ ತೆಗೆದುಕೊಂಡಿತು.
ಹಾಂಗ್‌ಕಾಂಗ್‌ನಲ್ಲಿ ಸಿಂಗಲ್ಸ್ ಫೈನಲ್ ತಲುಪಿದ್ದ ಲಕ್ಷ್ಯ ಸೇನ್ 11–21, 10–21 ರಲ್ಲಿ ಫ್ರಾನ್ಸ್‌ನ ಟೋಮಾ ಜೂನಿಯರ್ ಪೊಪೊವ್ ಅವರಿಗೆ ಮಣಿದರು. ಇದರೊಂದಿಗೆ ಸಿಂಗಲ್ಸ್‌ನಲ್ಲಿ ಭಾರತದ ಸವಾಲು ಅಂತ್ಯಗೊಂಡಿತು. ಭಾರತದ ಆಯುಷ್ ಶೆಟ್ಟಿ ಮಂಗಳವಾರವೇ ಮೊದಲ ಸುತ್ತಿನ ಪಂದ್ಯದಲ್ಲಿ ಸೋಲನುಭವಿಸಿದ್ದರು.
ಮಿಶ್ರ ಡಬಲ್ಸ್ ವಿಭಾಗದಲ್ಲಿ ಧ್ರುವ್ ಕಪಿಲ ಮತ್ತು ತನಿಶಾ ಕ್ರಾಸ್ಟೊ ಜೋಡಿಯೂ ಬೇಗ ನಿರ್ಗಮಿಸಿತು. ಎರಡನೇ ಶ್ರೇಯಾಂಕದ ಸ್ಥಳೀಯ ಜೋಡಿ ಫೆಂಗ್ ಯಾನ್ ಝೆ– ಹುವಾಂಗ್ ಡಾಂಗ್ ಪಿಂಗ್ 21–19, 21–13 ರಿಂದ ಕಪಿಲ– ತನಿಶಾ ಜೋಡಿಯನ್ನು ಹಿಮ್ಮೆಟ್ಟಿಸಿ 16ರ ಸುತ್ತನ್ನು ತಲುಪಿತು.
ಮಹಿಳೆಯರ ಸಿಂಗಲ್ಸ್‌ನಲ್ಲಿ ಮಂಗಳವಾರ ಮೊದಲ ಸುತ್ತಿನ ಪಂದ್ಯ ಗೆದ್ದಿದ್ದ ಪಿ.ವಿ.ಸಿಂಧು ಅವರು ಪ್ರಿಕ್ವಾರ್ಟರ್‌ಫೈನಲ್‌ನಲ್ಲಿ ಆರನೇ ಶ್ರೇಯಾಂಕದ ಪೊರ್ನ್‌ಪವಿ ಚೊಚುವಾಂಗ್ (ಥಾಯ್ಲೆಂಡ್) ಅವರನ್ನು ಎದುರಿಸಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.