ADVERTISEMENT

ಗಾಯದಿಂದ ಚೇತರಿಸಿಕೊಂಡ ಮರಿನ್‌ಗೆ ಮೊದಲ ಪ್ರಶಸ್ತಿ

ರಾಯಿಟರ್ಸ್
Published 22 ಸೆಪ್ಟೆಂಬರ್ 2019, 15:49 IST
Last Updated 22 ಸೆಪ್ಟೆಂಬರ್ 2019, 15:49 IST
ಟ್ರೋಫಿ ಗೆದ್ದ ಕರೋಲಿನಾ ಮರೀನ್‌ ಸಂಭ್ರಮ
ಟ್ರೋಫಿ ಗೆದ್ದ ಕರೋಲಿನಾ ಮರೀನ್‌ ಸಂಭ್ರಮ   

ಬೀಜಿಂಗ್‌:ಎಂಟು ತಿಂಗಳ ಹಿಂದೆ ಮೊಣಕಾಲಿನ ನೋವು ತೀವ್ರಗೊಂಡಿದ್ದಾಗ ಒಲಿಂಪಿಕ್‌ ಚಾಂಪಿಯನ್‌ ಕರೋಲಿನಾ ಮರಿನ್‌ ಅವರ ವೃತ್ತಿ ಜೀವನದ ಮೇಲೆ ಪ್ರಶ್ನಾರ್ಥಕ ಚಿಹ್ನೆ ಮೂಡಿತ್ತು. ಆದರೆ ಯಶಸ್ವಿಯಾಗಿ ಪುನರಾಗಮನ ಮಾಡಿದ ಅವರುಭಾನುವಾರ ಚೀನಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಹೋರಾಡಿ ಪ್ರಶಸ್ತಿ ಗೆದ್ದುಕೊಂಡರು.

ಜನವರಿಯಲ್ಲಿ ಇಂಡೊನೇಷ್ಯಾ ಮಾಸ್ಟರ್ಸ್‌ ಟೂರ್ನಿಯ ವೇಳೆ ಬಲ ಮೊಣಕಾಲಿನ ಸ್ನಾಯುರಜ್ಜು ನೋವಿನಿಂದ ನರಳಿದ್ದ ಅವರು ತುರ್ತಾಗಿ ಶಸ್ತ್ರ ಚಿಕಿತ್ಸೆಗೆ ಒಳಗಾಗಬೇಕಾಯಿತು. ಬೇಗನೇ ಅಂಕಣಕ್ಕೆ ಹಿಂತಿರುಗಲು ಸಾಕಷ್ಟು ಶ್ರಮ ಹಾಕಿದ್ದರು.

ಫೈನಲ್‌ನಲ್ಲಿ ಆರಂಭದ ಹಿನ್ನಡೆಯಿಂದ ಚೇತರಿಸಿಕೊಂಡ ಮರಿನ್‌, ವಿಶ್ವದ ಮಾಜಿ ಅಗ್ರಮಾನ್ಯ ಆಟಗಾರ್ತಿ ತೈ ತ್ಸು ಯಿಂಗ್ ಅವರನ್ನು 14–21, 21–17, 21–18 ರಿಂದ ಪರಾಭವಗೊಳಿಸಿದರು. ವಿಶ್ವ ನಾಲ್ಕನೇ ಕ್ರಮಾಂಕದಲ್ಲಿರುವ ತೈವಾನಿನ ಯಿಂಗ್ ಅವರುಈ ಹಿಂದಿನ ಆರು ಮುಖಾಮುಖಿಗಳಲ್ಲಿ ಮರಿನ್‌ ಮೇಲೆ ಜಯಗಳಿಸಿದ್ದರು.

ADVERTISEMENT

ಮೂರು ಬಾರಿ ವಿಶ್ವ ಚಾಂಪಿಯನ್‌ ಆಗಿರುವ ಮರಿನ್‌ ಅವರಿಗೆ ಇದು ಪುನರಾಗಮನದ ಹಾದಿಯಲ್ಲಿ ಎರಡನೇ ಟೂರ್ನಿ ಆಗಿತ್ತು. ಕಳೆದ ವಾರ ವಿಯೆಟ್ನಾಂ ಓಪನ್‌ ಟೂರ್ನಿಯಲ್ಲಿ ಮೊದಲ ಸುತ್ತಿನಲ್ಲೇ ನಿರ್ಗಮಿಸಿದ್ದರು.

‘ಮೊದಲ ಗೇಮ್‌ ನಂತರ ನನ್ನಲ್ಲಿ ಸ್ವಲ್ಪ ಮಟ್ಟಿಗೆ ಹತಾಶೆ ಆವರಿಸಿತ್ತು. ಸಂಯಮ ಕಾಪಾಡಿಕೊಳ್ಳಲು ಯತ್ನಿಸಿದೆ. ಸಹನೆಯಿಂದ ಆಟಕ್ಕೆ ಹೊಂದಿಕೊಂಡೆ. ಮಹತ್ವದ ವಿಷಯವೆಂದರೆ ನಾನು ಕೊನೆಯ ತನಕ ಹೊರಾಡಿದ್ದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.