ADVERTISEMENT

Doha Diamond League 2025 | ನೀರಜ್‌ಗೆ ಪ್ರಶಸ್ತಿ ಗೆಲ್ಲುವ ಸವಾಲು

ದೋಹಾ ಡೈಮಂಡ್‌ ಲೀಗ್‌ ಇಂದು

ಪಿಟಿಐ
Published 16 ಮೇ 2025, 0:30 IST
Last Updated 16 ಮೇ 2025, 0:30 IST
<div class="paragraphs"><p>ನೀರಜ್ ಚೋಪ್ರಾ</p></div>

ನೀರಜ್ ಚೋಪ್ರಾ

   

ದೋಹಾ: ಜಾವೆಲಿನ್ ತಾರೆ ನೀರಜ್ ಚೋಪ್ರಾ ಅವರು ಶುಕ್ರವಾರ ಇಲ್ಲಿ ನಡೆಯುವ ಡೈಮಂಡ್‌ ಲೀಗ್‌ ಕೂಟದಲ್ಲಿ ಉತ್ತಮ ಆರಂಭ ಪಡೆಯುವ ನಿರೀಕ್ಷೆಯಲ್ಲಿದ್ದಾರೆ. ಇಲ್ಲಿ ಅವರಿಗೆ ಪರಿಚಿತರಾಗಿರುವ ಪ್ರಬಲ ಎದುರಾಳಿಗಳ ಕಣವಿದೆ.

ಚೋಪ್ರಾ ಅವರಿಗೆ ಇಲ್ಲಿ ಎರಡು ಬಾರಿಯ ವಿಶ್ವ ಚಾಂಪಿಯನ್‌, ಗ್ರೆನೆಡಾದ ಆ್ಯಂಡರ್ಸನ್‌ ಪೀಟರ್ಸ್‌, 2024ರ ವಿಜೇತರಾದ ಝೆಕ್‌ ಗಣರಾಜ್ಯದ ಯಾಕುಬ್ ವಾಡ್ಲೆಚ್‌, ಜರ್ಮನಿಯ ಜೂಲಿಯನ್ ವೇಬರ್ ಮತ್ತು ಮ್ಯಾಕ್ಸ್‌ ದೆಹ್ನಿಂಗ್, ಕೆನ್ಯಾದ ಜೂಲಿಯಸ್‌ ಯೆಗೊ ಮತ್ತು ಜಪಾನ್‌ನ ಗೆಂಕಿ ಡೀನ್ ಅವರಿಂದ ಸವಾಲು ಎದುರಾಗಲಿದೆ. 2024ರ ಪ್ಯಾರಿಸ್ ಒಲಿಂಪಿಕ್ ಚಾಂಪಿಯನ್ ಅರ್ಷದ್ ನದೀಮ್ ಇಲ್ಲಿ ಭಾಗವಹಿಸುತ್ತಿಲ್ಲ.

ADVERTISEMENT

ಭಾರತದ ಇನ್ನೊಬ್ಬ ಸ್ಪರ್ಧಿ ಕಿಶೋರ್ ಜೇನಾ ಅವರೂ 11 ಮಂದಿಯ ಕಣದಲ್ಲಿದ್ದಾರೆ. ಆದರೆ ಇತ್ತೀಚಿನ ತಿಂಗಳಲ್ಲಿ ಅವರು ಉತ್ತಮ ಲಯದಲ್ಲಿಲ್ಲ. ಹೋದ ವರ್ಷ ಜೇನಾ ಇಲ್ಲಿ 76.31 ಮೀ. ಥ್ರೊದೊಡನೆ 9ನೇ ಸ್ಥಾನ ಪಡೆದಿದ್ದರು. ಅವರ ವೈಯಕ್ತಿಕ ಶ್ರೇಷ್ಠ ಸಾಧನೆ 87.54 ಮೀ. ಕಳೆದ ವರ್ಷ ವಿಜೇತರಾದ ವಾಡ್ಲೆಚ್‌ ಈಟಿಯನ್ನು 88.38 ಮೀ. ದೂರ ಎಸೆದಿದ್ದರು.

2023ರ ಆವೃತ್ತಿಯಲ್ಲಿ 88.67 ಮೀ. ಥ್ರೊ ಮೂಲಕ ಇಲ್ಲಿ ಚಾಂಪಿಯನ್ ಆಗಿದ್ದ ನೀರಜ್ ಚೋಪ್ರಾ, ಕಳೆದ ವರ್ಷ 88.36 ಮೀ. ದಾಖಲಿಸಿ ಎರಡನೇ ಸ್ಥಾನ ಪಡೆದಿದ್ದರು. ಚೋಪ್ರಾ ಅವರಿಗೆ ಈಗ ಹಲವು ಬಾರಿಯ ಒಲಿಂಪಿಕ್ ಚಾಂಪಿಯನ್ ಯಾನ್ ಝೆಲೆಜ್ನಿ ಕೋಚ್‌ ಆಗಿದ್ದಾರೆ.

ಚೋಪ್ರಾ ಅವರ ವೈಯಕ್ತಿಕ ಶ್ರೇಷ್ಠ ಸಾಧನೆ 89.94 ಮೀ. ಆಗಿದ್ದು, 90 ಮೀ. ಮೈಲಿಗಲ್ಲು ತಲುಪಲು ಪ್ರಯತ್ನದಲ್ಲಿದ್ದಾರೆ. ಝೆಲೆಜ್ನಿ ತಮ್ಮ ಕ್ರೀಡಾಜೀವನದ ಉತ್ತುಂಗದಲ್ಲಿದ್ದಾಗ ಈ ದೂರವನ್ನು ಸಲೀಸಾಗಿ ಸಾಧಿಸುತ್ತಿದ್ದರು. ಝೆಲೆಜ್ನಿ ಅವರ ಶ್ರೇಷ್ಠ ಸಾಧನೆ 98.48 ಮೀ. ಆಗಿದೆ.

ಇತರ ಸ್ಪರ್ಧಿಗಳು:

ಭಾರತದ ಗುಲ್ವೀರ್ ಸಿಂಗ್ ಮತ್ತು ಪಾರುಲ್ ಚೌಧರಿ ಅವರು ಕ್ರಮವಾಗಿ ಪುರುಷರ 5,000 ಮೀ. ಓಟ ಮತ್ತು ಮಹಿಳೆಯರ 3000 ಮೀ. ಸ್ಟೀಪಲ್‌ಚೇಸ್‌ನಲ್ಲಿ ಅದೃಷ್ಟ ಪರೀಕ್ಷಿಸಲಿದ್ದಾರೆ. ಸಿಂಗ್ 5,000 ಮತ್ತು 10,000 ಮೀ. ಓಟದಲ್ಲಿ ರಾಷ್ಟ್ರೀಯ ದಾಖಲೆ ಹೊಂದಿದ್ದಾರೆ. ಅವರಿಗೆ ಇದು ಮೊದಲ ಡೈಮಂಡ್ ಲೀಗ್ ಕೂಟವಾಗಿದೆ.

ಚೌಧರಿ ಅವರು 2024ರ ಯುಜೆನ್‌ ಡೈಮಂಡ್‌ ಲೀಗ್‌ನಲ್ಲಿ 16ನೇ ಸ್ಥಾನ ಪಡೆದಿದ್ದರು.

ಅರ್ಷದ್‌ ಆತ್ಮೀಯನಾಗಿರಲಿಲ್ಲ’

‘ನದೀಮ್ ಮತ್ತು ನಾನು ಎಂದೂ ಆತ್ಮೀಯ ಸ್ನೇಹಿತ ರಾಗಿಲಿಲ್ಲ. ಈಗ ಭಾರತ– ಪಾಕಿಸ್ತಾನ ಸಂಘರ್ಷದ ಬಳಿಕ ಪರಿಸ್ಥಿತಿ ಮೊದಲಿನಂತೆ ಇರುವುದೂ ಇಲ್ಲ’ ಎಂದು ನೀರಜ್ ಚೋಪ್ರಾ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ಪಹಲ್ಗಾಮ್‌ನಲ್ಲಿ ಭಯೋತ್ಪಾದಕರ ದಾಳಿಯ ನಂತರ ಭಾರತದ ಅಥ್ಲೀಟ್ ಮತ್ತು ಅವರ ಕುಟುಂಬದವರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ನಿಂದನಾತ್ಮಕ ಪೋಸ್ಟ್‌ಗಳ ಸುರಿಮಳೆಯಾಗಿದೆ. ಈಗ ಮುಂದಕ್ಕೆ ಹೋಗಿರುವ ಎನ್‌ಸಿ ಕ್ಲಾಸಿಕ್ ಸ್ಪರ್ಧೆಗೆ ಆಯೋಜಕ
ನೀರಜ್‌ ಅವರು ನದೀಮ್ ಅವರನ್ನು ಆಹ್ವಾನಿಸಿದ್ದು ಟೀಕೆಗಳಿಗೆ ಗುರಿಯಾಗಿತ್ತು.

‘ನಮ್ಮಿಬ್ಬರ ಮಧ್ಯೆ (ನದೀಮ್) ಆತ್ಮೀಯತೆ ಇರಲಿಲ್ಲ. ನಾವೆಂದೂ ಆಪ್ತಮಿತ್ರರಾಗಿರಲಿಲ್ಲ. ಈಗ ಗಡಿ ಸಂಘರ್ಷದಿಂದ ಮೊದಲಿನಂತೆ ಇರುವುದೂ ಇಲ್ಲ. ಆದರೆ ನನ್ನ ಜೊತೆ ಗೌರವದಿಂದ ಯಾರಾದರೂ ಮಾತನಾಡಿದರೆ ನಾನು ಸ್ಪಂದಿಸುತ್ತೇನೆ’ ಎಂದು ಚೋಪ್ರಾ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.