ಎರಡನೇ ಸುತ್ತಿನಲ್ಲಿ ಕರ್ನಾಟಕದ ಶ್ರದ್ಧಾ ಎಸ್ ರೈ ವಿರುದ್ಧ ಸೆಣಸಿದ ಅಗ್ರ ಶ್ರೇಯಾಂಕಿತ ಎಂ.ಡಿ ಇಮ್ರಾನ್
ಪ್ರಜಾವಾಣಿ ಚಿತ್ರ : ಫಕ್ರುದ್ದೀನ್ ಎಚ್
ಮಂಗಳೂರು: ಇಂಟರ್‌ನ್ಯಾಷನಲ್ ಮಾಸ್ಟರ್‌ಗಳಾದ ಭಾರತದ ಎಂ.ಡಿ ಇಮ್ರಾನ್, ಸರವಣ ಕೃಷ್ಣ ಪಿ ಮತ್ತು ಮುರಳಿಕೃಷ್ಣ ಬಿ.ಟಿ ಅವರು ಇಲ್ಲಿ ನಡೆಯುತ್ತಿರುವ ಗ್ರ್ಯಾಂಡ್ ಆರ್‌ಸಿಸಿ ಫಿಡೆ ರೇಟೆಡ್ ಕ್ಲಾಸಿಕಲ್ ಚೆಸ್ ಟೂರ್ನಿಯ ಮೊದಲ ದಿನ ಅಗ್ರ ಸ್ಥಾನಗಳನ್ನು ಹಂಚಿಕೊಂಡಿದ್ದಾರೆ. ದಕ್ಷಿಣ ಕನ್ನಡದ 8 ಆಟಗಾರರೂ ಅಗ್ರಸ್ಥಾನ ಗಳಿಸಿದವರ ಪಟ್ಟಿಯಲ್ಲಿ ಇದ್ದಾರೆ.
ರಾವ್ಸ್ ಚೆಸ್ ಕಾರ್ನರ್, ನಗರದ ಶಾರದಾ ಕಾಲೇಜು ಆವರಣದಲ್ಲಿ ಆಯೋಜಿಸಿರುವ ಟೂರ್ನಿಯ 2 ಸುತ್ತುಗಳ ಮುಕ್ತಾಯಕ್ಕೆ ಕರ್ನಾಟಕದ 35 ಮಂದಿ ಸೇರಿದಂತೆ ಒಟ್ಟು 98 ಮಂದಿ 2 ಪಾಯಿಂಟ್‌ಗಳನ್ನು ಗಳಿಸಿದ್ದಾರೆ. ವಿದೇಶಿ ಆಟಗಾರರ ಪೈಕಿ ಕೆನಡಾದ ಮುತ್ಯಾಳಪತಿ ಮೋದಿತ್ ಆರೋಹ್ 2 ಸುತ್ತುಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಅಮೆರಿಕ, ಶ್ರೀಲಂಕಾ, ಕಿನ್ಯಾ ಮತ್ತು ಸಿಂಗಪುರದ ಚೆಸ್ ಪಟುಗಳೂ ಪಾಲ್ಗೊಂಡಿದ್ದಾರೆ.
ಅಗ್ರ ಶ್ರೇಯಾಂಕಿತ ಆಟಗಾರ ಆಂಧ್ರಪ್ರದೇಶದ ಎಂ.ಡಿ ಇಮ್ರಾನ್ (2476 ರೇಟಿಂಗ್) ಎರಡೂ ಸುತ್ತುಗಳಲ್ಲಿ ತಮಗಿಂತ ಕಡಿಮೆ ರೇಟಿಂಗ್‌ನವರ ವಿರುದ್ಧ ಸುಲಭ ಜಯ ಸಾಧಿಸಿದರು. ಮೊದಲ ಸುತ್ತಿನಲ್ಲಿ ಕರ್ನಾಟಕದ ಮಧ್ವ ವ್ಯಾಸರಾಜ ತಂತ್ರಿ ವಿರುದ್ಧ ಗೆದ್ದ ಅವರು ಎರಡನೇ ಸುತ್ತಿನಲ್ಲಿ ಕರ್ನಾಟಕದ ಶ್ರದ್ಧಾ ಎಸ್ ರೈ ಅವರನ್ನು ಮಣಿಸಿದರು.
ತಮಿಳುನಾಡಿನ ಸರವಣ ಕೃಷ್ಣ (2307) ಕ್ರಮವಾಗಿ ತಮಿಳುನಾಡಿನ ಧೀರಜ್ ಕುಮಾರ್ ಮತ್ತು ಕೇರಳದ ಆ್ಯರನ್ ವಳಕ್ಕೋಟ್ಟಿಲ್ ವಿರುದ್ಧ ಹಾಗೂ ಆಂಧ್ರಪ್ರದೇಶದ ಮುರಳಿ ಕೃಷ್ಣ ಬಿ.ಟಿ (2080) ಕ್ರಮವಾಗಿ ದಕ್ಷಿಣ ಕನ್ನಡದ ಪ್ರಣ್ವಿತ್ ನಾಯಕ್ ಹಾಗೂ ಗೋವರ್ಧನ್ ಸಿ ವಿರುದ್ಧ ಗೆಲುವು ದಾಖಲಿಸಿದರು. ಸರವಣ ಮೂರನೇ ಶ್ರೇಯಾಂಕ ಹೊಂದಿದ್ದು ಮುರಳಿಕೃಷ್ಣಗೆ 7ನೇ ಶ್ರೇಯಾಂಕ ನೀಡಲಾಗಿದೆ.
ಎರಡನೇ ಶ್ರೇಯಾಂಕಿತ ಗೋವಾದ ಲಾಡ್ ಮಂದಾರ್ ಪ್ರದೀಪ್ (2392), ನಾಲ್ಕನೇ ಶ್ರೇಯಾಂಕಿತ ಕೇರಳದ ನಿತಿನ್ ಬಾಬು, ಐದನೇ ಶ್ರೇಯಾಂಕಿತ ಹರಿಯಾಣದ ನಿಮಯ್ ಅಗರವಾಲ್, 6ನೇ ಶ್ರೇಯಾಂಕದ ಮಣಿಪುರದ ವಿಕ್ರಂಜೀತ್ ಸಿಂಗ್, 8ನೇ ಶ್ರೇಯಾಂಕಿತ ಮಹಾರಾಷ್ಟ್ರದ ಗೌರವ್ ಬಾಕ್ಲಿವಾಲ್, 11ನೇ ಶ್ರೇಯಾಂಕಿತ ತಮಿಳುನಾಡಿನ ಜಗನ್ನಾಥನ್ ದಿನೇಶ್ ಕುಮಾರ್, 12ನೇ ಶ್ರೇಯಾಂಕಿತ ರೈಲ್ವೆಯ ಅರ್ಜುನ್ ತಿವಾರಿ ಮೊದಲ ಹತ್ತರ ಪಟ್ಟಿಯಲ್ಲಿದ್ದಾರೆ.
ಕರ್ನಾಟಕದ ಕ್ರೀಡಾಪಟುಗಳ ಪೈಕಿ ಗರಿಷ್ಠ, 18ನೇ ಶ್ರೇಯಾಂಕ ಹೊಂದಿರುವ ಅನೀಶ್ ಅಡಿಗ ಅಗ್ರ 20ರ ಪಟ್ಟಿಯಲ್ಲಿದ್ದಾರೆ. ದಕ್ಷಿಣ ಕನ್ನಡದ ಅಭಿನವ ಪಿ, ರವೀಶ್ ಕೋಟೆ, ರುದ್ರ ರಾಜೀವ, ಧನುಷ್ ರಾಮ್, ಅನ್ಶುಲ್ ಪಣಿಕ್ಕರ್, ಅದ್ರಿಜ್ ಭಟ್ಟಾಚಾರ್ಯ, ವಿಹಾನ್ ಶೆಟ್ಟಿ ಮತ್ತು ಆರುಷ್ ಭಟ್ ಕೂಡ ಮೊದಲ ಎರಡು ಸವಾಲುಗಳನ್ನು ಸಮರ್ಥವಾಗಿ ಮೀರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.