ADVERTISEMENT

ಕಾಮನ್‌ವೆಲ್ತ್ ಕ್ರೀಡಾಕೂಟ: 2030ಕ್ಕೆ ಅಹಮದಾಬಾದ್‌ ಆತಿಥ್ಯಕ್ಕೆ ಪ್ರಸ್ತಾವನೆ

ಪಿಟಿಐ
Published 24 ಸೆಪ್ಟೆಂಬರ್ 2025, 5:50 IST
Last Updated 24 ಸೆಪ್ಟೆಂಬರ್ 2025, 5:50 IST
ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತೀಯ ಸ್ಪರ್ಧಿಗಳು
ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತೀಯ ಸ್ಪರ್ಧಿಗಳು   

ಅಹಮದಾಬಾದ್: 2030 ರಲ್ಲಿ ನಡೆಯಲಿರುವ ಕಾಮನ್‌ವೆಲ್ತ್ ಕ್ರೀಡಾಕೂಟವನ್ನು ಅಹಮದಾಬಾದ್‌ನಲ್ಲಿ ಆಯೋಜಿಸುವ ಕುರಿತು ಭಾರತದ ನಿಯೋಗವೊಂದು ಕಾಮನ್‌ವೆಲ್ತ್ ಕ್ರೀಡಾ ಮೌಲ್ಯಮಾಪನ ಸಮಿತಿಗೆ ಔಪಚಾರಿಕವಾಗಿ ಪ್ರಸ್ತಾವನೆ ಸಲ್ಲಿಸಿದೆ ಎಂದು ಗುಜರಾತ್ ಸರ್ಕಾರ ತಿಳಿಸಿದೆ.

ಗುಜರಾತ್‌ ಕ್ರೀಡಾ ಸಚಿವ ಹರ್ಷ್ ಸಾಂಘವಿ ಮತ್ತು ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ​​(ಐಒಎ) ಅಧ್ಯಕ್ಷರಾಗಿರುವ ಪಿ.ಟಿ ಉಷಾ ನೇತೃತ್ವದ ನಿಯೋಗ ಮಂಗಳವಾರದಂದು ಈ ಪ್ರಸ್ತಾವನೆಯನ್ನು ಕಾಮನ್‌ವೆಲ್ತ್ ಕ್ರೀಡಾ ಮೌಲ್ಯಮಾಪನ ಸಮಿತಿಗೆ ಸಲ್ಲಿಸಿದೆ.

2030ಕ್ಕೆ ಕಾಮನ್‌ವೆಲ್ತ್ ಕ್ರೀಡಾಕೂಟ ಚಳುವಳಿ ಆರಂಭವಾಗಿ ಬರೋಬ್ಬರಿ 100 ವರ್ಷಗಳು ಪೂರ್ಣಗೊಳ್ಳುವುದರಿಂದ ಇದೊಂದು ಐತಿಹಾಸಿಕ ಮೈಲುಗಲ್ಲಾಗಲಿದೆ. ಹಾಗಾಗಿ 2030ರ ಕ್ರೀಡಾಕೂಟವನ್ನು ಅಹಮದಾಬಾದ್‌ನಲ್ಲಿ ಆಯೋಜಿಸುವ ಗುರಿ ಹೊಂದಲಾಗಿದೆ.

ADVERTISEMENT

ಅಹಮದಾಬಾದ್‌ನಲ್ಲಿ ವಿಶ್ವ ಪ್ರಸಿದ್ಧಿ ಪಡೆದಿರುವ ಸ್ಥಳಗಳು, ಉತ್ತಮ ಸಾರಿಗೆ ವ್ಯವಸ್ಥೆ, ಉತ್ತಮ ಗುಣಮಟ್ಟದ ವಸತಿ ಸೌಕರ್ಯಗಳನ್ನು ಒದಗಿಸುವ ಸಾಮರ್ಥ್ಯ ಇರುವುದರಿಂದ ಕಾಮನ್‌ವೆಲ್ತ್ ಕ್ರೀಡಾಕೂಟ ಆಯೋಜನೆಗೆ ಅಹಮದಾಬಾದ್ ಉತ್ತಮ ನಗರ ಎಂಬುದು ಗುಜರಾತ್ ಸರ್ಕಾರದ ಅಭಿಪ್ರಾಯವಾಗಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಗುಜರಾತ್ ಕ್ರೀಡಾ ಸಚಿವ ಸಂಘವಿ, ‘ಕಾಮನ್‌ವೆಲ್ತ್ ಶತಮಾನೋತ್ಸವ ಕ್ರೀಡಾಕೂಟವನ್ನು ಅಹಮದಾಬಾದ್‌ನಲ್ಲಿ ಆಯೋಜಿಸುವುದು ಗುಜರಾತ್‌ಗೆ ಮಾತ್ರವಲ್ಲ, ಇಡೀ ಭಾರಕ್ಕೆ ಹೆಮ್ಮೆಯ ಸಂಗತಿಯಾಗಲಿದೆ. ನಮ್ಮ ಯುವಕರಿಗೆ ಸ್ಫೂರ್ತಿ ನೀಡಲು ಮತ್ತು 2047 ರ ವಿಕಸಿತ ಭಾರತದ ಕಡೆಗಿನ ನಮ್ಮ ಹೆಜ್ಜೆಯನ್ನು ವೇಗಗೊಳಿಸಲು ಈ ಕ್ರೀಡಾಕೂಟವನ್ನು ಅಹಮದಾಬಾದ್‌ನಲ್ಲಿ ನಡೆಸುವ ಗುರಿ ಹೊಂದಿದ್ದೇವೆ' ಎಂದು ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.