ADVERTISEMENT

ಮತ್ತೆ ಕೊರೊನಾ ಹಾವಳಿ: ನ್ಯೂಜಿಲೆಂಡ್ ಕ್ರೀಡಾ ವಲಯದಲ್ಲಿ ಆತಂಕ

ಏಜೆನ್ಸೀಸ್
Published 12 ಆಗಸ್ಟ್ 2020, 7:50 IST
Last Updated 12 ಆಗಸ್ಟ್ 2020, 7:50 IST
ವಾಯ್ಕಟೊ ಚೀಫ್ಸ್ ಮತ್ತು ಆಕ್ಲೆಂಡ್ ಬ್ಲೂಸ್ ತಂಡಗಳ ನಡುವಿನ ಪಂದ್ಯವೊಂದರ ನೋಟ– ಎಎಫ್‌ಪಿ ಚಿತ್ರ
ವಾಯ್ಕಟೊ ಚೀಫ್ಸ್ ಮತ್ತು ಆಕ್ಲೆಂಡ್ ಬ್ಲೂಸ್ ತಂಡಗಳ ನಡುವಿನ ಪಂದ್ಯವೊಂದರ ನೋಟ– ಎಎಫ್‌ಪಿ ಚಿತ್ರ   

ವೆಲಿಂಗ್ಟನ್: ಮೂರು ತಿಂಗಳಿಗೂ ಹೆಚ್ಚು ಕಾಲ ನಿರಾಳವಾಗಿದ್ದ ನ್ಯೂಜಿಲೆಂಡ್‌ನ ಕ್ರೀಡಾ ವಲಯ ಈಗ ಆತಂಕಕ್ಕೆ ಒಳಗಾಗಿದೆ. 102 ದಿನಗಳ ನಂತರ ಮಂಗಳವಾರ ನಾಲ್ಕು ಕೋವಿಡ್ –19 ಪ್ರಕರಣಗಳು ದೃಢವಾದ ಕಾರಣ ಇಲ್ಲಿನ ಕ್ರೀಡಾಂಗಣಗಳಿಗೆ ಪ್ರೇಕ್ಷಕರ ಪ್ರವೇಶವನ್ನು ನಿಷೇಧಿಸುವ ಸಾಧ್ಯತೆ ಇದ್ದು ಕ್ರೀಡಾ ಪ್ರೇಮಿಗಳಲ್ಲಿ ನಿರಾಸೆ ಮೂಡಿದೆ.

ಸೋಂಕು ಪತ್ತೆಯಾದ ಕೂಡಲೇ ಬುಧವಾರ ಮಧ್ಯಾಹ್ನದಿಂದ ಆಕ್ಲೆಂಡ್‌ನಲ್ಲಿ ಮೂರನೇ ಹಂತದ, 72 ತಾಸುಗಳ ಲಾಕ್‌ಡೌನ್ ವಿಧಿಸುವುದಾಗಿ ಪ್ರಧಾನಿ ಜೆಸಿಂದಾ ಆರ್ಡೆನ್ ಘೋಷಿಸಿದ್ದರು. ನ್ಯೂಜಿಲೆಂಡ್‌ನ ಉಳಿದ ಭಾಗಗಳು ಎರಡನೇ ಹಂತದ, ಮೂರು ದಿನಗಳ ಲಾಕ್‌ಡೌನ್‌ಗೆ ಒಳಗಾಗಲಿವೆ ಎಂದು ಅವರು ತಿಳಿಸಿದ್ದರು. ಮೂರನೇ ಹಂತದ ಲಾಕ್‌ಡೌನ್ ಇರುವಲ್ಲಿ ಪ್ರಮುಖ ಕ್ರೀಡಾ ಚಟುವಟಿಕೆ ನಡೆಸಲು ಅವಕಾಶವಿಲ್ಲ. ಎರಡನೇ ಹಂತದ ಲಾಕ್‌ಡೌನ್‌ ಜಾರಿ ಮಾಡಿದಲ್ಲಿ ನೂರಕ್ಕಿಂತ ಹೆಚ್ಚು ಮಂದಿ ಸೇರುವುದನ್ನು ನಿಷೇಧಿಸಲಾಗಿದೆ.

ಈ ವಾರಾಂತ್ಯದಲ್ಲಿ ಸೂಪರ್ ರಗ್ಬಿ ಅಟೋರಾದ ಅಂತಿಮ ಸುತ್ತಿನ ಪಂದ್ಯ ನಡೆಯಲಿದೆ. ಎರಡೂ ಲಾಕ್‌ಡೌನ್‌ಗಳು ವಾರಾಂತ್ಯಕ್ಕೆ ಮುನ್ನ ಮುಕ್ತಾಯಗೊಳ್ಳಲಿವೆಯಾದರೂ ನಿರ್ಬಂಧಗಳನ್ನು ಮುಂದುವರಿಸುವಂತೆ ಆರೋಗ್ಯ ತಜ್ಞರು ಸಲಹೆ ನೀಡಿದ್ದಾರೆ. ಸೋಂಕಿನ ಮೂಲ ಮತ್ತು ಸೋಂಕಿತರೊಂದಿಗೆ ಸಂಪರ್ಕ ಹೊಂದಿರುವವರನ್ನು ಪತ್ತೆ ಮಾಡುವ ಕಾರ್ಯ ‌ನಡೆಯುತ್ತಿರುವುದರಿಂದ ನಿರ್ಬಂಧಗಳನ್ನು ಹೇರುವುದು ಒಳ್ಳೆಯದು ಎಂದು ಅವರು ತಿಳಿಸಿದ್ದಾರೆ.

ADVERTISEMENT

ದಕ್ಷಿಣ ಆಕ್ಲೆಂಡ್‌ನ ಒಂದೇ ಕುಟುಂಬದ ನಾಲ್ವರಲ್ಲಿ ಕೋವಿಡ್‌–19 ದೃಢಪಟ್ಟಿದೆ ಎಂದು ಪ್ರಧಾನಿ ಮಂಗಳವಾರ ರಾತ್ರಿ ತಿಳಿಸಿದ್ದರು. ಈ ಕುಟುಂಬದ ಯಾರು ಕೂಡ ಇತ್ತೀಚೆಗೆ ವಿದೇಶ ಪ್ರವಾಸ ಕೈಗೊಳ್ಳಲಿಲ್ಲ. ಕೊರೊನಾ ಕೋವಿಡ್‌ಗೆ ಸಂಬಂಧಿಸಿ ಕರ್ತವ್ಯದಲ್ಲಿರುವ ಅಧಿಕಾರಿಗಳ ಸಂಪರ್ಕವೂ ಅವರಿಗೆ ಇರಲಿಲ್ಲ. ಆದ್ದರಿಂದ ಸೋಂಕು ತಗುಲಿದ್ದಾದರೂ ಹೇಗೆ ಎಂಬುದು ನಿಗೂಢವಾಗಿದೆ.

102 ದಿನಗಳಲ್ಲಿ ನ್ಯೂಜಿಲೆಂಡ್‌ನಲ್ಲಿ ಸಮುದಾಯ ಮಟ್ಟದಲ್ಲಿ ಕೋವಿಡ್–19 ಕಂಡುಬರಲಿಲ್ಲ. ವಿದೇಶದಿಂದ ಮರಳಿದ ಕೆಲವರು ಮಾತ್ರ ಸೋಂಕಿಗೆ ಒಳಗಾಗಿದ್ದು ಅವರನ್ನು ಪ್ರತ್ಯೇಕತಾವಾಸದಲ್ಲಿ ಇರಿಸಲಾಗಿದೆ. ಹೀಗಾಗಿ ಅಲ್ಲಿ ಜನಜೀವನ ಸಹಜಸ್ಥಿತಿಗೆ ಬಂದಿತ್ತು. ಶಾಲೆ, ಕಚೇರಿಗಳು, ರೆಸ್ಟೋರೆಂಟ್ ಮತ್ತು ಬಾರ್‌ಗಳನ್ನು ತೆರೆಯಲಾಗಿತ್ತು. ಕ್ರೀಡಾಂಗಣಗಳಿಗೆ ಷರತ್ತುಗಳಿಲ್ಲದೆ ಪ್ರೇಕ್ಷಕರನ್ನು ಬಿಡಲಾಗುತ್ತಿತ್ತು. ಜೂನ್ 14ರಂದು ಆಕ್ಲೆಂಡ್‌ನ ಈಡನ್ ಪಾರ್ಕ್‌ ಕ್ರೀಡಾಂಗಣದಲ್ಲಿ ನಡೆದಿದ್ದ ಸೂಪರ್ ರಗ್ಬಿ ಅಟೋರಾ ಟೂರ್ನಿಯ ಮೊದಲ ಸುತ್ತಿನ ಪಂದ್ಯಕ್ಕೆ ದಾಖಲೆಯ 40 ಸಾವಿರ ಪ್ರೇಕ್ಷಕರು ಸೇರಿದ್ದರು. ಬ್ಲೂಸ್ ಮತ್ತು ಹರಿಕೇನ್ಸ್ ತಂಡಗಳು ಈ ಪಂದ್ಯದಲ್ಲಿ ಸೆಣಸಿದ್ದವು.

ಕಳೆದ ವಾರಾಂತ್ಯದಲ್ಲಿ ಕ್ರೈಸ್ಟ್ ಚರ್ಚ್‌ನಲ್ಲಿ ನಡೆದಿದ್ದ ಕ್ರೂಸೇಡರ್ಸ್ ಮತ್ತು ಹೈಲ್ಯಾಂಡರ್ಸ್‌ ತಂಡಗಳ ನಡುವಿನ ಪಂದ್ಯಕ್ಕೆ ಕ್ರೀಡಾಂಗಣ ಪ್ರೇಕ್ಷಕರಿಂದ ಭರ್ತಿಯಾಗಿತ್ತು. ತವರಿನಲ್ಲಿ ನಡೆದ ಪಂದ್ಯದಲ್ಲಿ ಕ್ರೂಸೇಡರ್ಸ್ ಗೆದ್ದು ಅಂತಿಮ ಸುತ್ತಿಗೂ ಮೊದಲೇ ಪ್ರಶಸ್ತಿ ಗೆದ್ದುಕೊಂಡಿತ್ತು. ಫಲಿತಾಂಶದ ದೃಷ್ಟಿಯಲ್ಲಿ ಈ ಭಾನುವಾರ ಆಕ್ಲೆಂಡ್‌ನಲ್ಲಿ ನಡೆಯಲಿರುವ ಪಂದ್ಯಕ್ಕೆ ಮಹತ್ವವಿಲ್ಲದಿದ್ದರೂ ಬ್ಲೂಸ್ ಮತ್ತು ಕ್ರೂಸೇಡರ್ಸ್ ನಡುವಿನ ಈ ಹಣಾಹಣಿಯ ಟಿಕೆಟ್‌ಗಳೆಲ್ಲವೂ ಈಗಾಗಲೇ ಮಾರಾಟವಾಗಿದ್ದು 43 ಸಾವಿರ ಪ್ರೇಕ್ಷಕರು ಸೇರುವ ನಿರೀಕ್ಷೆ ಇದೆ.

ಒಂದು ವೇಳೆ ಲಾಕ್‌ಡೌನ್ ಮುಂದುವರಿಸುವ ನಿರ್ಧಾರ ಕೈಗೊಂಡರೆ ಈ ಪಂದ್ಯವನ್ನು ರದ್ದುಗೊಳಿಸುವ ಸಾಧ್ಯತೆ ಇದೆ. ಲಾಕ್‌ಡೌನ್‌ ಹೇರಿರುವುದರಿಂದ ರಗ್ಬಿ ಚಾಂಪಿಯನ್‌ಷಿಪ್‌ಗೆ ತೊಂದರೆಯಾಗಿದ್ದು ಸರ್ಕಾರದೊಂದಿಗೆ ಸತತ ಮಾತುಕತೆ ನಡೆಸಲಾಗುತ್ತಿದೆ ಎಂದು ನ್ಯೂಜಿಲೆಂಡ್ ರಗ್ಬಿ ಮಂಗಳವಾರ ರಾತ್ರಿ ಟ್ವೀಟ್ ಮಾಡಿತ್ತು. ಲಾಕ್‌ಡೌನ್‌ನಿಂದಾಗಿನ್ಯೂಜಿಲೆಂಡ್‌ನ ವೃತ್ತಿಪರ ನೆಟ್‌ಬಾಲ್ ಚಾಂಪಿಯನ್‌ಷಿಪ್ ಮೇಲೆಯೂ ದುಷ್ಪರಿಣಾಮ ಉಂಟಾಗುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.