ADVERTISEMENT

ಕ್ರೀಡಾ ಲೋಕದಲ್ಲೂ ಕೋವಿಡ್‌ –19 ಕಳವಳ: ಹಲವು ಟೂರ್ನಿಗಳು ರದ್ದು

ನಿಗದಿತ ಟೂರ್ನಿಗಳು ಮುಂದಕ್ಕೆ

ಏಜೆನ್ಸೀಸ್
Published 6 ಮಾರ್ಚ್ 2020, 19:45 IST
Last Updated 6 ಮಾರ್ಚ್ 2020, 19:45 IST
ಸೌರವ್‌ ಗಂಗೂಲಿ
ಸೌರವ್‌ ಗಂಗೂಲಿ   

ಟೋಕಿಯೊ: ಕೋವಿಡ್‌–19 ವೈರಸ್‌ ಸೋಂಕು ವಿಶ್ವದಾದ್ಯಂತ ವೇಗವಾಗಿ ಹಬ್ಬುತ್ತಿದ್ದು, ಕ್ರೀಡಾ ಲೋಕದ ಮೇಲೂ ಇದರ ಕರಿನೆರಳು ಆವರಿಸಿದೆ.

ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಲು ವೇದಿಕೆ ಎನಿಸಿದ್ದ ಕೆಲವು ಮಹತ್ವದ ಟೂರ್ನಿಗಳನ್ನು ರದ್ದು ಮಾಡಲಾಗಿದ್ದು ಕೆಲವು ಕೂಟಗಳನ್ನು ಮುಂದೂ ಡಲಾಗಿದೆ. ಹೀಗಾಗಿ ಒಲಿಂಪಿಕ್ಸ್‌ ಅರ್ಹತೆ ಕೈತಪ್ಪುವ ಆತಂಕ ಕ್ರೀಡಾಪಟುಗಳಲ್ಲಿ ಮನೆ ಮಾಡಿದೆ.

ಮಾರ್ಚ್‌ 19ರಂದು ಗ್ರೀಸ್‌ನಲ್ಲಿ ನಿಗದಿಯಾಗಿರುವ ಒಲಿಂಪಿಕ್‌ ಜ್ಯೋತಿ ಹಸ್ತಾಂತರ ಕಾರ್ಯಕ್ರಮಕ್ಕೆ ಜಪಾನ್‌ನಿಂದ 140 ಮಕ್ಕಳನ್ನು ಕಳು ಹಿಸಲು ನಿರ್ಧರಿಸಲಾಗಿತ್ತು. ಕೋವಿಡ್‌ ಭೀತಿಯ ಕಾರಣ ಒಲಿಂಪಿಕ್ಸ್‌ ಸಂಘಟನಾ ಸಮಿತಿಯು ಶುಕ್ರವಾರ ಈ ತೀರ್ಮಾನದಿಂದ ಹಿಂದೆ ಸರಿದಿದೆ. ಸಮಿತಿಯ ಅಧ್ಯಕ್ಷ ಯೋಶಿರೊ ಮೋರಿ ಅವರು ಈ ವಿಷಯ ಖಚಿತಪಡಿಸಿದ್ದಾರೆ.

ADVERTISEMENT

ಪ್ರೇಕ್ಷಕರಿಲ್ಲದೇ ಸ್ಪರ್ಧೆ: ಒಲಿಂಪಿಕ್ಸ್‌ ಆಯೋಜಕರು ಟೋಕಿಯೊದಲ್ಲಿ ಶುಕ್ರವಾರ ಪ್ರಮುಖ ಕ್ರೀಡಾಪಟುಗಳನ್ನು ಹೊರಗಿಟ್ಟು ಪರೀಕ್ಷಾರ್ಥ ಸ್ಪರ್ಧೆಗಳನ್ನು ನಡೆಸಿದ್ದಾರೆ. ಕ್ಲೈಂಬಿಂಗ್‌, ಬೇಸ್‌ಬಾಲ್‌, ಸ್ಪ್ರಿಂಗ್‌ ಸುಮೊ ಸ್ಪರ್ಧೆಗಳು ನಡೆದ ಕ್ರೀಡಾಂಗಣಗಳಿಗೆ ಪ್ರೇಕ್ಷಕರ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು.

ಏಷ್ಯನ್‌ ಚಾಂಪಿಯನ್‌ಷಿಪ್‌ ರದ್ದು: ಕೋವಿಡ್‌ ಭಯದ ಕಾರಣ ಏಪ್ರಿಲ್‌ 16ರಿಂದ 25ರವರೆಗೆ ಉಜ್ಬೆಕಿಸ್ತಾನದಲ್ಲಿ ನಡೆಸಲು ಉದ್ದೇಶಿಸಲಾಗಿದ್ದ ಏಷ್ಯನ್‌ ವೇಟ್‌ಲಿಫ್ಟಿಂಗ್‌ ಚಾಂಪಿಯನ್‌ಷಿಪ್‌ ರದ್ದು ಮಾಡಲಾಗಿದೆ. ಅಂತರ ರಾಷ್ಟ್ರೀಯ ವೇಟ್‌ಲಿಫ್ಟಿಂಗ್‌ ಫೆಡರೇ ಷನ್‌ ಇದನ್ನು ಖಚಿತಪಡಿಸಿದೆ.

ಟಿ–20 ಟೂರ್ನಿ ರದ್ದು: ಇದೇ ತಿಂಗಳ 14ರಿಂದ ನೇಪಾಳದಲ್ಲಿ ನಡೆಯ ಬೇಕಿದ್ದ ಎವರೆಸ್ಟ್‌ ಪ್ರೀಮಿಯರ್‌ ಲೀಗ್‌ (ಇಪಿಎಲ್‌) ಟಿ–20 ಕ್ರಿಕೆಟ್‌ ಟೂರ್ನಿಯನ್ನು ತಾತ್ಕಾಲಿಕವಾಗಿ ರದ್ದು ಮಾಡಲಾಗಿದೆ.

ಕೋವಿಡ್‌ ವೈರಸ್‌ ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮ ಗಳನ್ನು ಅನುಸರಿಸಿರುವ ನೇಪಾಳ ಸರ್ಕಾರ, ಜನಸಮೂಹ ಸೇರುವುದನ್ನು ನಿರ್ಬಂಧಿಸಿದೆ. ಹೀಗಾಗಿ ಟೂರ್ನಿಯನ್ನು ರದ್ದು ಮಾಡಲಾಗಿದೆ.

ಈ ಟೂರ್ನಿಯಲ್ಲಿ ವೆಸ್ಟ್‌ ಇಂಡೀಸ್‌ನ ಕ್ರಿಸ್‌ ಗೇಲ್‌, ಅಫ್ಗಾನಿಸ್ತಾನದ ಮೊಹಮ್ಮದ್‌ ಶಹಜಾದ್‌ ಸೇರಿದಂತೆ ಹಲವು ವಿದೇಶಿ ಆಟಗಾರರು ಭಾಗವಹಿಸಬೇಕಿತ್ತು.

ಪೋಲೆಂಡ್‌ನಲ್ಲಿ ಗುರುವಾರ ನಡೆಯಬೇಕಿದ್ದ ವಿಶ್ವ ಅಥ್ಲೆಟಿಕ್ಸ್‌ ಹಾಫ್‌ ಮ್ಯಾರಥಾನ್‌ ಚಾಂಪಿಯನ್‌ ಷಿಪ್‌ ಅಕ್ಟೋಬರ್‌ 17ಕ್ಕೆ ಮುಂದೂ ಡಲಾಗಿದೆ.

ಏಪ್ರಿಲ್‌ 4ರಂದು ರೋಮ್‌ನಲ್ಲಿ ಆಯೋಜನೆಯಾಗಿದ್ದ ಫಾರ್ಮುಲಾ–ಇ ಮೋಟರ್‌ ರೇಸ್‌ ಮುಂದಕ್ಕೆ ಹಾಕಲಾಗಿದೆ.

ಭಾರತ ಕ್ರೀಡಾ ಪ್ರಾಧಿಕಾರ (ಸಾಯ್‌) ಅಧೀನದ ಎಲ್ಲಾ ಕೇಂದ್ರಗಳಲ್ಲೂ ಸಿಬ್ಬಂದಿಗಳ ಬಯೋ ಮೆಟ್ರಿಕ್ ಹಾಜರಾತಿಯನ್ನು ತಾತ್ಕಾಲಿಕವಾಗಿ ರದ್ದು ಮಾಡಿದೆ.

‘ಐಪಿಎಲ್‌ ಮೇಲೆ ಆತಂಕವಿಲ್ಲ’
ಕೋಲ್ಕತ್ತ
: ‘ಕೋವಿಡ್‌–19 ವೈರಸ್‌ ಸೋಂಕಿನಿಂದಾಗಿ ಇಂಡಿಯನ್‌ ಪ್ರೀಮಿಯರ್‌ ಲೀಗ್‌ಗೆ (ಐಪಿಎಲ್‌) ಯಾವುದೇ ತೊಂದರೆ ಆಗುವುದಿಲ್ಲ. ನಿಗದಿಯಂತೆಯೇ ಮಾರ್ಚ್‌ 29ರಂದು ಈ ಬಾರಿಯ ಐಪಿಎಲ್‌ಗೆ ಚಾಲನೆ ಸಿಗಲಿದೆ’ ಎಂದು ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯ (ಬಿಸಿಸಿಐ) ಅಧ್ಯಕ್ಷ ಸೌರವ್‌ ಗಂಗೂಲಿ ಹೇಳಿದ್ದಾರೆ.

‘ಇಂಗ್ಲೆಂಡ್‌ ತಂಡ ಈಗಾಗಲೇ ಶ್ರೀಲಂಕಾ ಪ್ರವಾಸ ಕೈಗೊಂಡಿದೆ. ದಕ್ಷಿಣ ಆಫ್ರಿಕಾದ ಆಟಗಾರರು ಸರಣಿಯನ್ನು ಆಡಲು ಭಾರತಕ್ಕೆ ಬರಲಿದ್ದಾರೆ. ಕೌಂಟಿ ಚಾಂಪಿಯನ್‌ಷಿಪ್‌ನ ತಂಡಗಳೂ ಅಬುಧಾಬಿ ಮತ್ತು ಯುನೈಟೆಡ್‌ ಅರಬ್‌ ಎಮಿರೇಟ್ಸ್‌ನಲ್ಲಿ (ಯುಎಇ) ಪಂದ್ಯಗಳನ್ನು ಆಡುತ್ತಿವೆ. ಹೀಗಾಗಿ ಆತಂಕ ಪಡಬೇಕಾದ ಅಗತ್ಯವಿಲ್ಲ. ವಿದೇಶಿ ಆಟಗಾರರು ಐಪಿಎಲ್‌ನಲ್ಲಿ ಭಾಗವಹಿಸುತ್ತಾರೆ. ನಮ್ಮ ವೈದ್ಯಕೀಯ ತಂಡದವರು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಿದ್ದು, ಲೀಗ್‌ ಸುಸೂತ್ರವಾಗಿ ನಡೆಯಲಿದೆ’ ಎಂದು ಸೌರವ್‌ ತಿಳಿಸಿದ್ದಾರೆ.

ಹಿಂದೆ ಸರಿದ ಆಟಗಾರರು
ಕೋವಿಡ್‌ ಭೀತಿಯಿಂದಾಗಿ ಭಾರತದ ಏಳು ಮಂದಿ ಆಟಗಾರರು ಮುಂದಿನ ವಾರ ನಡೆಯುವ ಆಲ್‌ ಇಂಗ್ಲೆಂಡ್‌ ಓಪನ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸದಿರಲು ತೀರ್ಮಾನಿಸಿದ್ದಾರೆ. ಈ ವಿಷಯವನ್ನು ಭಾರತ ಬ್ಯಾಡ್ಮಿಂಟನ್‌ ಸಂಸ್ಥೆ (ಬಿಎಐ) ಶುಕ್ರವಾರ ತಿಳಿಸಿದೆ.

ಸಿಂಗಲ್ಸ್‌ ವಿಭಾಗದ ಆಟಗಾರರಾದ ಎಚ್‌.ಎಸ್‌.ಪ್ರಣಯ್‌, ಸಮೀರ್‌ ವರ್ಮಾ ಮತ್ತು ಸೌರಭ್‌ ವರ್ಮಾ, ಡಬಲ್ಸ್‌ ವಿಭಾಗದ ಸ್ಪರ್ಧಿಗಳಾದ ಚಿರಾಗ್ ಶೆಟ್ಟಿ, ಸಾತ್ವಿಕ್‌ ಸಾಯಿರಾಜ್‌ ರಣಕಿರೆಡ್ಡಿ, ಮನು ಅತ್ರಿ ಮತ್ತು ಸುಮೀತ್‌ ರೆಡ್ಡಿ ಅವರು ಈ ನಿರ್ಧಾರ ಕೈಗೊಂಡಿದ್ದಾರೆ.

‘ಸದ್ಯದ ಪರಿಸ್ಥಿತಿಯಲ್ಲಿ ವಿದೇಶಗಳಿಗೆ ಪ್ರಯಾಣಿಸಲು ಕ್ರೀಡಾಪಟುಗಳು ಹಿಂದೇಟು ಹಾಕುತ್ತಿದ್ದಾರೆ. ಅವರನ್ನು ಕಳುಹಿಸಲು ಪೋಷಕರೂ ಒಪ್ಪುತ್ತಿಲ್ಲ. ಟೂರ್ನಿಯಲ್ಲಿ ಭಾಗವಹಿಸಬೇಕೊ ಬೇಡವೊ ಎಂಬುದನ್ನು ಆಟಗಾರರೇ ನಿರ್ಧರಿಸುತ್ತಾರೆ. ಇದರಲ್ಲಿ ನಾವು ಹಸ್ತಕ್ಷೇಪ ಮಾಡುವುದಿಲ್ಲ’ ಎಂದು ಬಿಎಐ ಮಹಾ ಕಾರ್ಯದರ್ಶಿ ಅಜಯ್‌ ಸಿಂಘಾನಿಯಾ ಹೇಳಿದ್ದಾರೆ.

**
ಕೋವಿಡ್‌ ಸೋಂಕಿನ ಕಾರಣ ಏಷ್ಯನ್‌ ಒಲಿಂಪಿಕ್‌ ಅರ್ಹತಾ ಟೂರ್ನಿ ರದ್ದಾಗಿದೆ. ಹೀಗಾಗಿ ಕೆಲ ಕುಸ್ತಿಪಟುಗಳು ಆತಂಕ ಕ್ಕೊಳಗಾಗಿದ್ದಾರೆ. ತರಬೇತಿಗಾಗಿ ವಿದೇಶಗಳಿಗೂ ಹೋಗಲು ಆಗುತ್ತಿಲ್ಲ.
-ಬಜರಂಗ್‌ ಪುನಿಯಾ, ಭಾರತದ ಕುಸ್ತಿಪಟು

**
ಕೋವಿಡ್‌ ಸೋಂಕು ವಿಶ್ವದೆ ಲ್ಲೆಡೆ ವ್ಯಾಪಕವಾಗಿ ಹರಡುತ್ತಿದೆ. ಇದರ ನಡುವೆಯೂ ಆಲ್‌ ಇಂಗ್ಲೆಂಡ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ ನಡೆಯುತ್ತಿರುವುದು ಸಮಾಧಾನ ತಂದಿದೆ.
-ಪಿ.ವಿ.ಸಿಂಧು, ಬ್ಯಾಡ್ಮಿಂಟನ್‌ ಮಹಿಳಾ ವಿಶ್ವ ಚಾಂಪಿಯನ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.