ADVERTISEMENT

ಲಾಕ್‌ಡೌನ್‌ ಪರಿಣಾಮ: ಹಸಿದವರಿಗೆ ಆಹಾರ ನೀಡುತ್ತಿರುವ ’ದೀಪಾ ಮಲಿಕ್‌’

ಪಿಟಿಐ
Published 2 ಏಪ್ರಿಲ್ 2020, 19:45 IST
Last Updated 2 ಏಪ್ರಿಲ್ 2020, 19:45 IST
ದೀಪಾ ಮಲಿಕ್‌
ದೀಪಾ ಮಲಿಕ್‌   

ಚಂಡೀಗಡ: ಪ್ಯಾರಾಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಭಾರತದ ಏಕೈಕ ಆಟಗಾರ್ತಿ ಎಂಬ ಹಿರಿಮೆ ಹೊಂದಿರುವ ದೀಪಾ ಮಲಿಕ್‌, ಹಸಿದವರಿಗೆ ಆಹಾರ ಪೂರೈಸುವ ಕಾರ್ಯಕ್ಕೆ ಮುಂದಾಗಿದ್ದಾರೆ.

ಈ ಕೆಲಸಕ್ಕೆ ಅವರ ಮಗಳು ದೇವಿಕಾ ಕೂಡ ಕೈಜೋಡಿಸಿದ್ದಾರೆ.

ಕಾನ್ಪುರದ ಶಿವ ಶಕ್ತಿ ಕೃಪಾ ಫೌಂಡೇಷನ್‌ ಸಹಯೋಗದಲ್ಲಿ ‘ಹ್ಯಾಪಿ ಜನತಾ ಕಿಚನ್‌’ ಆರಂಭಿಸಿರುವ ದೀಪಾ ಮತ್ತು ದೇವಿಕಾ ಅವರು ಕೇಂದ್ರ ಸರ್ಕಾರ ಹೊರಡಿಸಿರುವಲಾಕ್‌ಡೌನ್‌ನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ದಿನಗೂಲಿ ನೌಕರರ ಹಸಿವು ನೀಗಿಸುತ್ತಿದ್ದಾರೆ.

ADVERTISEMENT

‘ಉತ್ತರ ಪ್ರದೇಶದ ಕಾನ್ಪುರದಲ್ಲಿ ಅತಿ ಹೆಚ್ಚು ಮಂದಿ ದಿನಗೂಲಿ ನೌಕರರಿದ್ದಾರೆ. ಹೀಗಾಗಿ ಮೊದಲು ಈ ನಗರವನ್ನು ಆಯ್ಕೆ ಮಾಡಿಕೊಂಡಿದ್ದೇವೆ. ಇಲ್ಲಿ ನಿತ್ಯವೂ 100 ಮಂದಿಗೆ ಆಹಾರದ ಪೊಟ್ಟಣಗಳನ್ನು ವಿತರಿಸುತ್ತಿದ್ದೇವೆ’ ಎಂದು 49 ವರ್ಷ ವಯಸ್ಸಿನ ದೀಪಾ ಹೇಳಿದ್ದಾರೆ.

‘ಸ್ಥಳೀಯವಾಗಿ ಸ್ವಯಂ ಸೇವಕರನ್ನು ಗುರುತಿಸಿ ಅವರ ಮೂಲಕ ಆಹಾರ ವಿತರಿಸುತ್ತಿದ್ದೇವೆ. ನಮ್ಮ ಕೆಲಸಕ್ಕೆ ಸ್ಥಳೀಯ ಅಧಿಕಾರಿಗಳೂ ಕೈಜೋಡಿಸಿದ್ದಾರೆ. ದೇಶದ ಇತರ ನಗರಗಳಿಗೂ ಈ ಕಾರ್ಯವನ್ನು ವಿಸ್ತರಿಸಬೇಕೆಂಬುದು ನಮ್ಮ ಉದ್ದೇಶ. ಇದಕ್ಕಾಗಿ ಸ್ಥಳೀಯ ಸ್ವಯಂ ಸೇವಕರ ಹುಡುಕಾಟದಲ್ಲಿದ್ದೇವೆ’ ಎಂದಿದ್ದಾರೆ.

‘ಕೊರೊನಾ ಪೀಡಿತರಿಗೆ ನೆರವಾಗಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ. ಹೀಗಾಗಿ ನಾನು ಈ ಹಿಂದೆಯೇ ಪ್ರಧಾನ ಮಂತ್ರಿಗಳ ಪರಿಹಾರ ನಿಧಿಗೆ ₹5.70 ಲಕ್ಷ ದೇಣಿಗೆ ಕೊಟ್ಟಿದ್ದೆ’ ಎಂದೂ ತಿಳಿಸಿದ್ದಾರೆ.

2016ರಲ್ಲಿ ಬ್ರೆಜಿಲ್‌ನ ರಿಯೊ ಡಿ ಜನೈರೊದಲ್ಲಿ ನಡೆದಿದ್ದ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದ ದೀಪಾ, ಶಾಟ್‌ಪಟ್‌ನಲ್ಲಿ ಬೆಳ್ಳಿಯ ಪದಕ ಜಯಿಸಿದ್ದರು. ಅವರು ಪ್ರಸ್ತುತ ಭಾರತ ಪ್ಯಾರಾಲಿಂಪಿಕ್‌ ಸಮಿತಿಯ ಅಧ್ಯಕ್ಷೆಯಾಗಿಯೂ ಕೆಲಸ ಮಾಡುತ್ತಿದ್ದಾರೆ.

ವೀಲಿಂಗ್ ಹ್ಯಾಪಿನೆಸ್‌ ಫೌಂಡೇಷನ್‌ ಎಂಬ ಸ್ವಯಂ ಸೇವಾ ಸಂಸ್ಥೆಯನ್ನೂ ನಡೆಸುತ್ತಿರುವ ದೀಪಾ ಅವರಿಗೆ ರಾಜೀವ್‌ ಗಾಂಧಿ ಖೇಲ್‌ ರತ್ನ ಹಾಗೂ ಪದ್ಮಶ್ರೀ ಗೌರವಗಳೂ ಒಲಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.