
ಬೆಂಗಳೂರು: ಗೆಲುವಿನ ಓಟ ಮಂದುವರಿಸಿದ ಆಕಾಶ್ ಕೆ.ಜೆ. ಹಾಗೂ ಸಹನಾ ಎಚ್.ಮೂರ್ತಿ ಅವರು ಮಲ್ಲೇಶ್ವರದ ಕೆನರಾ ಯೂನಿಯನ್‌ನಲ್ಲಿ ನಡೆಯುತ್ತಿರುವ ಸಿ.ವಿ.ಎಲ್. ಶಾಸ್ತ್ರಿ ಸ್ಮಾರಕ ರಾಜ್ಯ ಟೇಬಲ್ ಟೆನಿಸ್ ಚಾಂಪಿಯನ್‌ಷಿಪ್‌ನಲ್ಲಿ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ಸಿಂಗಲ್ಸ್ ಪ್ರಶಸ್ತಿ ಗೆದ್ದುಕೊಂಡರು.
ಆಕಾಶ್ ಅವರು ಪುರುಷರ ವಿಭಾಗದ ಫೈನಲ್‌ನಲ್ಲಿ 11–5, 11–9, 11–7, 11–6ರಿಂದ ಅಭಿನವ್ ಮೂರ್ತಿ ಅವರನ್ನು ಸುಲಭವಾಗಿ ಮಣಿಸಿ, ಪ್ರಶಸ್ತಿ ಎತ್ತಿಹಿಡಿದರು.
ಸೆಮಿಫೈನಲ್ ಪಂದ್ಯಗಳಲ್ಲಿ ಅಭಿನವ್ 13–11, 11–9, 6–11, 12–10, 11–8ರಿಂದ ಸಂಜಯ್ ಮಾಧವನ್ ವಿರುದ್ಧ ಹಾಗೂ ಆಕಾಶ್ 11–6, 7–11, 11–4, 11–6, 11–7ರಿಂದ ರೋಹಿತ್ ಶಂಕರ್ ವಿರುದ್ಧ ಜಯಿಸಿದರು.
ರೋಚಕವಾಗಿದ್ದ ಮಹಿಳೆಯರ ಸಿಂಗಲ್ಸ್ ಫೈನಲ್ ಹಣಾಹಣಿಯಲ್ಲಿ ಸಹನಾ ಅವರು 5–11, 6–11, 11–9, 11–9, 11–5, 11–7ರಿಂದ ದೇಶ್ನಾ ವನ್ಶಿಕಾ ಅವರನ್ನು ಸೋಲಿಸಿದರು. ಸಹನಾ ಮೊದಲ ಎರಡು ಸೆಟ್ ಕಳೆದುಕೊಂಡರೂ, ನಂತರ ಪುಟಿದೆದ್ದು ಮೇಲುಗೈ ಸಾಧಿಸಿದರು.
ಸಹನಾ ಅವರು ನಾಲ್ಕರ ಘಟ್ಟದ ಹಣಾಹಣಿಯಲ್ಲಿ 11–6, 11–5, 9–11, 5–11, 7–11, 11–7, 11–7ರಿಂದ ತನಿಷ್ಕಾ ಕಪಿಲ್ ಕಾಲಭೈರವ ವಿರುದ್ಧ ಪ್ರಯಾಸದಾಯಕ ಗೆಲುವು ಸಾಧಿಸಿದ್ದರು. ಇನ್ನೊಂದು ಸೆಮಿಫೈನಲ್ ಪಂದ್ಯದಲ್ಲಿ ವನ್ಶಿಕಾ 11–5, 10–12, 8–11, 11–9, 11–8, 11–9ರಿಂದ ಖುಷಿ ವಿ. ಅವರನ್ನು ಸೋಲಿಸಿದ್ದರು.
ಹಿಮಾಂಶಿಗೆ ಕಿರೀಟ: ಉದಯೋನ್ಮುಖ ಆಟಗಾರ್ತಿ ಹಿಮಾನ್ಶಿ ಚೌಧರಿ ಅವರು 17 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದರು. ಅವರು ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ 11–6, 13–15, 11–1, 11–1ರಿಂದ ತನಿಷ್ಕಾ ಅವರನ್ನು ಸುಲಭವಾಗಿ ಮಣಿಸಿದರು.
ಸೆಮಿಫೈನಲ್ ಪಂದ್ಯಗಳಲ್ಲಿ ತನಿಷ್ಕಾ 11–8, 7–11, 11–6, 11–6ರಿಂದ ಸಾಕ್ಷ್ಯಾ ಸಂತೋಷ್ ಅವರನ್ನು ಹಾಗೂ ಹಿಮಾನ್ಶಿ 11–8, 11–8, 11–8ರಿಂದ ಕೈರಾ ಬಾಳಿಗಾ ಅವರನ್ನು ಸೋಲಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.