ADVERTISEMENT

ಡಕಾರ್‌ ರ‍್ಯಾಲಿ: 61ನೇ ಸ್ಥಾನದಲ್ಲಿ ಅರವಿಂದ್‌

​ಪ್ರಜಾವಾಣಿ ವಾರ್ತೆ
Published 10 ಜನವರಿ 2019, 14:50 IST
Last Updated 10 ಜನವರಿ 2019, 14:50 IST
ಕರ್ನಾಟಕದ ಕೆ.ಪಿ.ಅರವಿಂದ್‌ ಗುರಿಯತ್ತ ಮುನ್ನುಗ್ಗಿದರು
ಕರ್ನಾಟಕದ ಕೆ.ಪಿ.ಅರವಿಂದ್‌ ಗುರಿಯತ್ತ ಮುನ್ನುಗ್ಗಿದರು   

ಬೆಂಗಳೂರು: ಕರ್ನಾಟಕದ ಕೆ.ಪಿ.ಅರವಿಂದ್‌ ಅವರು ಪೆರುವಿನಲ್ಲಿ ನಡೆಯುತ್ತಿರುವ ವಿಶ್ವ ಪ್ರಸಿದ್ಧ ಡಕಾರ್‌ ರ‍್ಯಾಲಿಯಲ್ಲಿ ಒಟ್ಟಾರೆ 61ನೇ ಸ್ಥಾನ ಗಳಿಸಿದ್ದಾರೆ.

ಅರೇಕ್ವಿಪಾದಲ್ಲಿ ಗುರುವಾರ ನಡೆದ ಮೂರನೇ ಹಂತದ (ಒಟ್ಟು 342 ಕಿಲೊ ಮೀಟರ್ಸ್‌ ದೂರ) ಸ್ಪರ್ಧೆಯಲ್ಲಿ ಶೆರ್ಕೊ ಟಿವಿಎಸ್‌ ರ‍್ಯಾಲಿ ಫ್ಯಾಕ್ಟರಿ ತಂಡವನ್ನು ‍ಪ್ರತಿನಿಧಿಸಿರುವ ಉಡುಪಿಯ ಅರವಿಂದ್‌, ಅಮೋಘ ಚಾಲನಾ ಕೌಶಲ ಮೆರೆದರು.

ಈ ತಂಡದ ಇತರ ಚಾಲಕರೂ ಮಿಂಚಿನ ಗತಿಯಲ್ಲಿ ಮೋಟರ್‌ ಬೈಕ್‌ ಚಲಾಯಿಸಿ ಗಮನ ಸೆಳೆದರು. ಮೂರನೇ ಹಂತದ ಸ್ಪರ್ಧೆಯಲ್ಲಿ 15ನೇಯವರಾಗಿ ಗುರಿ ಮುಟ್ಟಿದ ಮೈಕಲ್ ಮೆಟ್ಗೆ ಒಟ್ಟಾರೆ 28ನೇ ಸ್ಥಾನ ಪಡೆದರು.

ADVERTISEMENT

ಲೊರೆಂಜೊ ಸ್ಯಾಂಟೊಲಿನೊ 10ನೇ ಸ್ಥಾನದೊಂದಿಗೆ ಮೂರನೇ ಹಂತದ ಸ್ಪರ್ಧೆ ಮುಗಿಸಿದರು. ಈ ಮೂಲಕ ಒಟ್ಟಾರೆ 13ನೇ ಸ್ಥಾನಕ್ಕೇರಿದರು.

ಆ್ಯಡ್ರಿಯನ್‌ ಮೆಟ್ಗೆ ಕೂಡಾ ಕಡಿದಾದ ತಿರುವುಗಳು ಮತ್ತು ಪ್ರಪಾತಗಳಲ್ಲಿ ದಿಟ್ಟತನದಿಂದ ಮೋಟರ್‌ ಬೈಕ್‌ ಚಲಾಯಿಸಿದರು. ಅವರು ಒಟ್ಟಾರೆ 15ನೇ ಸ್ಥಾನ ತಮ್ಮದಾಗಿಸಿಕೊಂಡರು.

ಶುಕ್ರವಾರ ನಾಲ್ಕನೇ ಹಂತದ (ಒಟ್ಟು 511 ಕಿಲೊ ಮೀಟರ್ಸ್‌) ಸ್ಪರ್ಧೆ ನಡೆಯಲಿದೆ. ಈ ಪೈಕಿ 352 ಕಿ.ಮೀ. ದೂರದ ವಿಶೇಷ ಹಂತ, ಚಾಲಕರ ಪಾಲಿಗೆ ಅತ್ಯಂತ ಸವಾಲಿನದ್ದೆನಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.