ADVERTISEMENT

ಡಕಾರ್ ರ್‍ಯಾಲಿ: ರಾಜ್ಯದ ಸಂತೋಷ್‌ಗೆ 13ನೇ ಸ್ಥಾನ

ಡಕಾರ್‌ ರ‍್ಯಾಲಿಯ ಮೊದಲ ಹಂತದ ಸ್ಪರ್ಧೆ ಮುಕ್ತಾಯ

ಪಿಟಿಐ
Published 17 ಜನವರಿ 2019, 17:09 IST
Last Updated 17 ಜನವರಿ 2019, 17:09 IST
ಕೆ.ಪಿ.ಅರವಿಂದ್‌
ಕೆ.ಪಿ.ಅರವಿಂದ್‌   

ಪಿಸ್ಕೊ, ಪೆರು: ಕರ್ನಾಟಕದ ಮೋಟಾರ್ ಬೈಕ್‌ ಸಾಹಸಿ ಸಿ.ಎಸ್‌.ಸಂತೋಷ್‌, ವಿಶ್ವ ಪ್ರಸಿದ್ಧ ಡಕಾರ್‌ ರ‍್ಯಾಲಿಯ ಮೊದಲ ಹಂತದ ಸ್ಪರ್ಧೆಯ ಮುಕ್ತಾಯಕ್ಕೆ 13ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.

ಹೀರೊ ಮೋಟೊ ಸ್ಪೋರ್ಟ್ಸ್‌ ರ‍್ಯಾಲಿ ತಂಡವನ್ನು ಪ್ರತಿನಿಧಿಸಿರುವ ಸಂತೋಷ್‌, ಭಾನುವಾರ ಲಿಮಾದಿಂದ ಪಿಸ್ಕೊವರೆಗಿನ 30 ಕಿ.ಮೀ, ದೂರವನ್ನು 24 ನಿಮಿಷ 11 ಸೆಕೆಂಡುಗಳಲ್ಲಿ ಕ್ರಮಿಸಿದರು. ವಿಶ್ವದ ಅತ್ಯಂತ ಕಠಿಣ ಮತ್ತು ಅಪಾಯಕಾರಿ ರ‍್ಯಾಲಿ ಎನಿಸಿರುವ ಡಕಾರ್‌ನಲ್ಲಿ ಇನ್ನು 13 ಹಂತದ ಸ್ಪರ್ಧೆ ಬಾಕಿ ಇದೆ. ‌ಜನವರಿ 20 ರಂದು ಅರ್ಜೆಂಟೀನಾದ ಬೊಲಿವಿಯಾದಲ್ಲಿ ರ‍್ಯಾಲಿ ಕೊನೆಗೊಳ್ಳಲಿದೆ.

ಡಕಾರ್‌ನಲ್ಲಿ ನಾಲ್ಕನೇ ಬಾರಿ ಸ್ಪರ್ಧಿಸಿರುವ ಸಂತೋಷ್‌, ದುರ್ಗಮ ಹಾದಿಯಲ್ಲಿ ಆರಂಭದಿಂದಲೂ ಶರವೇಗದಲ್ಲಿ ಬೈಕ್‌ ಚಲಾಯಿಸಿದರು.

ADVERTISEMENT

‘ರೇಸ್‌ನ ಮೊದಲ ದಿನ ಸಹಜವಾಗಿ ಒತ್ತಡ ಇದ್ದೆ ಇರುತ್ತದೆ. ಮೊದಲ ಹಂತದಲ್ಲಿ 30 ಕಿ.ಮೀ.ಗಳ ಗುರಿ ಕ್ರಮಿಸಬೇಕಿತ್ತು. ಎರಡನೇ ಹಂತದ ರೇಸ್‌ ಇನ್ನಷ್ಟು ಕಠಿಣವಾಗಿರಲಿದೆ. 200 ಕಿ.ಮೀ.ದೂರ ಸಾಗಬೇಕಿರುವುದರಿಂದ ಸಾಕಷ್ಟು ಸಿದ್ಧತೆಯ ಅಗತ್ಯವಿದೆ’ ಎಂದು ಸಂತೋಷ್‌ ಹೇಳಿದ್ದಾರೆ.

30ನೇ ಸ್ಥಾನದಲ್ಲಿ ಅರವಿಂದ್‌: ಕರ್ನಾಟಕದ ಮತ್ತೊಬ್ಬ ಸ್ಪರ್ಧಿ ಕೆ.ಪಿ.ಅರವಿಂದ್‌ 30ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.

ಟಿವಿಎಸ್‌ ರೇಸಿಂಗ್‌ ತಂಡವನ್ನು ಪ್ರತಿನಿಧಿಸಿರುವ ಉಡುಪಿಯ ಅರವಿಂದ್‌ ಕೂಡ ಶ್ರೇಷ್ಠ ಸಾಮರ್ಥ್ಯ ತೋರಿದರು.

ಗಾಯಗೊಂಡ ರಾಡ್ರಿಗಸ್‌: ಹೀರೊ ತಂಡದ ಮತ್ತೊಬ್ಬ ಚಾಲಕ ಜಾವೊಕಿಮ್‌ ರಾಡ್ರಿಗಸ್‌ ಮೊದಲ ಹಂತದ ಸ್ಪರ್ಧೆಯ ವೇಳೆ ಗಾಯಗೊಂಡಿದ್ದಾರೆ. ಹೋದ ವರ್ಷ ಒಟ್ಟಾರೆ 12ನೇಯವರಾಗಿ ಸ್ಪರ್ಧೆ ಮುಗಿಸಿದ್ದ ಪೋರ್ಚುಗಲ್‌ನ ರಾಡ್ರಿಗಸ್‌ ಅವರು ಚಲಾಯಿಸುತ್ತಿದ್ದ ಬೈಕ್‌ ಅಪಘಾತಕ್ಕೀಡಾಯಿತು. ಈ ವೇಳೆ ಅವರ ಕೈ ಮತ್ತು ಬೆನ್ನಿನ ಭಾಗಕ್ಕೆ ಬಲವಾದ ಪೆಟ್ಟು ಬಿದ್ದಿದೆ.

‘ರಾಡ್ರಿಗಸ್‌ ಅವರನ್ನು ಆಸ್ಪತ್ರೆಗೆ ದಾಖಲಿಸಿ ಎಕ್ಸ್‌ ರೇ ತೆಗೆಸಲಾಗಿದೆ. ಅವರಿಗೆ ಆಗಿರುವ ಗಾಯಗಂಭೀರವಾದುದೇನೆಲ್ಲಾ. ತಜ್ಞ ವೈದ್ಯರು ಚಿಕಿತ್ಸೆ ನೀಡುತ್ತಿದ್ದು, ಬೇಗನೆ ಗುಣಮುಖರಾಗಲಿದ್ದಾರೆ. ರ‍್ಯಾಲಿಯ ಮುಂದಿನ ಹಂತಗಳಲ್ಲಿ ಅವರು ಸ್ಪರ್ಧಿಸುವುದಿಲ್ಲ’ ಎಂದು ಹೀರೊ ತಂಡದ ವಕ್ತಾರ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.