ADVERTISEMENT

ಟೋಕಿಯೊ ಒಲಿಂಪಿಕ್ಸ್: ಪದಕದ ಭರವಸೆಯಲ್ಲಿ ಬಿಲ್ಗಾರರು

ಆರ್ಚರಿ ಇಂದು ಆರಂಭ: ಕಣದಲ್ಲಿ ಭಾರತದ ನಾಲ್ವರು; ದೀಪಿಕಾ –ಅತನು ದಂಪತಿ ಮೇಲೆ ನಿರೀಕ್ಷೆ

ಪಿಟಿಐ
Published 22 ಜುಲೈ 2021, 16:36 IST
Last Updated 22 ಜುಲೈ 2021, 16:36 IST
ದೀಪಿಕಾ ಕುಮಾರಿ –ಎಎಫ್‌ಪಿ ಚಿತ್ರ
ದೀಪಿಕಾ ಕುಮಾರಿ –ಎಎಫ್‌ಪಿ ಚಿತ್ರ   

ಟೋಕಿಯೊ: ವಿವಿಧ ಕೂಟಗಳಲ್ಲಿ ಅಮೋಘ ಸಾಧನೆ ಮಾಡಿ ಟೋಕಿಯೊಗೆ ತೆರಳಿರುವ ಭಾರತದ ಆರ್ಚರಿ ಪಟುಗಳು ಒಲಿಂಪಿಕ್ಸ್‌ನ ರ‍್ಯಾಂಕಿಂಗ್ ಸುತ್ತಿನಲ್ಲಿ ಶುಕ್ರವಾರ ಕಣಕ್ಕೆ ಇಳಿಯಲಿದ್ದಾರೆ. ಮಹಿಳಾ ತಂಡ ಈ ಬಾರಿ ಅರ್ಹತೆ ಗಳಿಸಲು ವಿಫಲವಾಗಿದೆ. ಆದರೆ ವೈಯಕ್ತಿಕ ವಿಭಾಗದಲ್ಲಿ ದೀಪಿಕಾ ಕುಮಾರಿ ಭರವಸೆ ಮೂಡಿಸಿದ್ದಾರೆ.

ಅತನು ದಾಸ್‌, ತರುಣದೀಪ್ ರಾಯ್ ಮತ್ತು ಪ್ರವೀಣ್ ಜಾಧವ್ ಪುರುಷರ ವೈಯಕ್ತಿಕ ವಿಭಾಗದಲ್ಲಿ ಪದಕ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ. ಈ ಮೂವರು ಪುರುಷರ ಡಬಲ್ಸ್‌ ವಿಭಾಗದಲ್ಲೂ ಪಾಲ್ಗೊಳ್ಳಲಿದ್ದಾರೆ. ದೀಪಿಕಾ ಕುಮಾರಿ ಮತ್ತು ಅತನು ದಾಸ್ ದಂಪತಿಯ ಮಿಶ್ರ ಡಬಲ್ಸ್ ವಿಭಾಗದ ಸ್ಪರ್ಧೆಗಳು ಶನಿವಾರ ನಡೆಯಲಿದ್ದು ಪ್ಯಾರಿಸ್‌ನಲ್ಲಿ ನಡೆದಿದ್ದ ವಿಶ್ವಕಪ್ ಟೂರ್ನಿಯಲ್ಲಿ ತೋರಿದ ಸಾಮರ್ಥ್ಯವನ್ನು ಮತ್ತೆ ತೋರಿಸಲು ಸಜ್ಜಾಗಿದ್ದಾರೆ.

1988ರಿಂದ ಭಾರತದಲ್ಲಿ ಆರ್ಚರಿ ಕ್ರೀಡೆ ವೇಗವಾಗಿ ಬೆಳೆದಿದೆ. ಲಿಂಬಾ ರಾಮ್‌, ಡೋಲಾ ಬ್ಯಾನರ್ಜಿ ಅವರಂಥ ದಿಗ್ಗಜರನ್ನು ಕಂಡಿರುವ ಭಾರತ ಎಲ್ಲ ಕ್ರೀಡಾಕೂಟಗಳಲ್ಲೂ ಪ್ರಶಸ್ತಿ ಗೆದ್ದಿದೆ. ಆದರೆ ಒಲಿಂಪಿಕ್ಸ್‌ ಪಕದ ಮಾತ್ರ ಮರೀಚಿಕೆಯಾಗಿದೆ.

ADVERTISEMENT

2006ರಲ್ಲಿ ಜಯಂತ ತಾಲೂಕುದಾರ ವಿಶ್ವ ಕ್ರಮಾಂಕದಲ್ಲಿ ಎರಡನೇ ಸ್ಥಾನಕ್ಕೇರಿದ್ದರು. ಮುಂದಿನ ವರ್ಷ ಡೋಲಾ ವಿಶ್ವ ಚಾಂಪಿಯನ್ ಆಗಿದ್ದರು. ಆದರೆ 2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ನಿರೀಕ್ಷೆ ಹುಸಿಯಾಗಿತ್ತು. ಅನಂತರ ಮುನ್ನೆಲೆಗೆ ಬಂದವರು ದೀಪಿಕಾ ಕುಮಾರಿ. ಯೂತ್ ವಿಶ್ವ ಚಾಂಪಿಯನ್‌ಷಿಪ್‌ ಮತ್ತು ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಚಿನ್ನಕ್ಕೆ ಮುತ್ತಿಟ್ಟ ಅವರು ಲಂಡನ್ ಒಲಿಂಪಿಕ್ಸ್‌ನಲ್ಲಿ ಮೊದಲ ಸುತ್ತಿನಲ್ಲೇ ಹೊರಬಿದ್ದಿದ್ದರು. ಈಗ ಮೂರನೇ ಒಲಿಂಪಿಕ್ಸ್‌ನಲ್ಲಿ ಪದಕದ ಮೇಲೆ ಕಣ್ಣಿಟ್ಟಿದ್ದಾರೆ.

ಬೀಜಿಂಗ್‌ ಒಲಿಂಪಿಕ್ಸ್‌ನಲ್ಲಿ ಭಾರತದಿಂದ ಎಂಟು ಮಂದಿ ಮತ್ತು ಲಂಡನ್‌ ಒಲಿಂಪಿಕ್ಸ್‌ನಲ್ಲಿ 10 ಮಂದಿ ಪಾಲ್ಗೊಂಡಿದ್ದರು. ಕೆಲವೊಮ್ಮೆ ಉತ್ತಮ ಸಾಮರ್ಥ್ಯ ತೋರಿದರೂ ನಾಕೌಟ್‌ ಹಂತಗಳಲ್ಲಿ ಬಲಿಷ್ಠ ದೇಶಗಳ ಸವಾಲು ಎದುರಿಸಲಾಗದೆ ಮರಳಿದ್ದಾರೆ.

ಅತನು ದಾಸ್‌ ಎರಡು ವರ್ಷಗಳ ಅವಧಿಯಲ್ಲಿ ಆರು ಪದಕಗಳನ್ನು ಗೆದ್ದಿದ್ದು, ಒಲಿಂಪಿಕ್ಸ್‌ನಲ್ಲಿ ಉತ್ತಮ ಸಾಮರ್ಥ್ಯ ತೋರಲು ನೆರವಾಗಲಿದೆ. ವಿಶ್ವಕಪ್‌ನ ವೈಯಕ್ತಿಕ ಸ್ಪರ್ಧೆ ಹಾಗೂ ಮಿಶ್ರ ತಂಡ ವಿಭಾಗದಲ್ಲಿ ಚಿನ್ನ ಜಯಿಸಿದ್ದರು. ಹೋದ ವರ್ಷ ವೈಯಕ್ತಿಕ, ರಿಕರ್ವ್ ತಂಡ ಮತ್ತು ಮಿಶ್ರ ತಂಡ ವಿಭಾಗದಲ್ಲಿ ಕಂಚಿನ ಸಾಧನೆ ಮಾಡಿದ್ದರು. ಸೇನೆಯಲ್ಲಿ ಆರ್ಚರಿ ಪಟು ಆಗಿರುವ ತರುಣದೀಪ್‌ ರಾಯ್‌ ಕೂಡ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡ ಅನುಭವ ಹೊಂದಿದ್ದಾರೆ.

ಮಹಿಳೆಯರ ವೈಯಕ್ತಿಕ ರ‍್ಯಾಂಕಿಂಗ್ ಸುತ್ತು

ಆರಂಭ: ಬೆಳಿಗ್ಗೆ 5.30 (ಭಾರತೀಯ ಕಾಲಮಾನ)

ಸ್ಥಳ: ಯುಮೆನೊಶಿಮಾ ರ‍್ಯಾಂಕಿಂಗ್ ಫೀಲ್ಡ್‌

ಪುರುಷರ ವೈಯಕ್ತಿಕ ರ‍್ಯಾಂಕಿಂಗ್ ಸುತ್ತು

ಆರಂಭ: ಬೆಳಿಗ್ಗೆ 9.30 (ಭಾರತೀಯ ಕಾಲಮಾನ)

ಸ್ಥಳ: ಯುಮೆನೊಶಿಮಾ ರ‍್ಯಾಂಕಿಂಗ್ ಫೀಲ್ಡ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.