ನವದೆಹಲಿ: ಭಾರತ ಕುಸ್ತಿ ಫೆಡರೇಷನ್‌ನ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರ ವಿರುದ್ಧ ದಾಖಲಾಗಿದ್ದ ಪೋಕ್ಸೊ ಪ್ರಕರಣವನ್ನು ಇಲ್ಲಿನ ನ್ಯಾಯಾಲಯವೊಂದು ಸೋಮವಾರ ಮುಕ್ತಾಯಗೊಳಿಸಿದೆ.
ಆದರೆ ಅವರ ವಿರುದ್ಧ ಇತರ ಆರು ಮಂದಿ ಮಹಿಳಾ ಕುಸ್ತಿಪಟುಗಳು ಸಲ್ಲಿಸಿರುವ ಲೈಂಗಿಕ ಕಿರುಕುಳದ ಪ್ರತ್ಯೇಕ ಪ್ರಕರಣದಲ್ಲಿ ಅವರು ಇನ್ನೂ ದೋಷಮುಕ್ತರಾಗಿಲ್ಲ.
ದೆಹಲಿ ಪೊಲೀಸರು ಬಿ ರಿಪೋರ್ಟ್ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರಾದ ಗೋಮತಿ ಮನೋಚಾ ಅವರು ಪ್ರಕರಣವನ್ನು ಮುಕ್ತಾಯಗೊಳಿಸಲು ಒಪ್ಪಿಗೆ ನೀಡಿದ್ದಾರೆ.
ತಾವು ಅಪ್ತಾಪ್ರೆಯಾಗಿದ್ದ ವೇಳೆ ಬ್ರಿಜ್ ಭೂಷಣ್ ಶರಣ್ ಸಿಂಗ್ ಲೈಂಗಿಕ ಕಿರುಕುಳ ನೀಡಿದ್ದರು ಎಂದು ಯುವತಿ ದೂರು ಸಲ್ಲಿಸಿದ್ದರು. ಆದರೆ 2023ರ ಮೇ ತಿಂಗಳಲ್ಲಿ ಯುವತಿ ದೂರನ್ನು ಹಿಂಪಡೆದಿದ್ದರು. ಅಚ್ಚರಿಯೆಂಬಂತೆ ಯುವತಿಯ ತಂದೆಯೂ ತಾವು ಬ್ರಿಜ್ ಭೂಷಣ್ ವಿರುದ್ಧ ಸುಳ್ಳು ದೂರು ನೀಡಿದ್ದಾಗಿ ಹೇಳಿಕೆ ನೀಡಿದ್ದ ಕಾರಣ ಪ್ರಕರಣ ಕೊನೆಗೊಳಿಸುವಂತೆ ಪೊಲೀಸರು ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದರು.
ಯುವತಿ ಮತ್ತು ಇತರ ಮಹಿಳಾ ಪೈಲ್ವಾನರು ದೂರು ಸಲ್ಲಿಸಿದ್ದ ನಂತರ ಬ್ರಿಜ್‌ಭೂಷಣ್ ವಿರುದ್ಧ ದೆಹಲಿಯ ಜಂತರ್‌ಮಂತರ್‌ನಲ್ಲಿ ಬಜರಂಗ್ ಪೂನಿಯಾ, ವಿನೇಶ್ ಫೋಗಟ್ ಮತ್ತು ಸಾಕ್ಷಿ ಮಲಿಕ್ ನೇತೃತ್ವದಲ್ಲಿ ಕುಸ್ತಿಪಟುಗಳು ತಿಂಗಳುಗಳ ಕಾಲ ಪ್ರತಿಭಟನೆ ನಡೆಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.