ADVERTISEMENT

ಹೈಜಂಪ್‌ ಸ್ಪರ್ಧೆಗೆ ಹೊಸ ದಿಕ್ಕು ತೋರಿಸಿದ್ದ ದಿಗ್ಗಜ ಅಥ್ಲೀಟ್‌ ಫಾಸ್‌ಬರಿ ನಿಧನ

ಏಜೆನ್ಸೀಸ್
Published 14 ಮಾರ್ಚ್ 2023, 22:40 IST
Last Updated 14 ಮಾರ್ಚ್ 2023, 22:40 IST
ಡಿಕ್‌ ಫಾಸ್‌ಬರಿ ಅವರು 1968ರ ಮೆಕ್ಸಿಕೊ ಒಲಿಂಪಿಕ್ಸ್‌ನ ಹೈಜಂಪ್‌ ಸ್ಪರ್ಧೆಯಲ್ಲಿ ಜಿಗಿದಿದ್ದ ಕ್ಷಣ –ಎಎಫ್‌ಪಿ ಚಿತ್ರ
ಡಿಕ್‌ ಫಾಸ್‌ಬರಿ ಅವರು 1968ರ ಮೆಕ್ಸಿಕೊ ಒಲಿಂಪಿಕ್ಸ್‌ನ ಹೈಜಂಪ್‌ ಸ್ಪರ್ಧೆಯಲ್ಲಿ ಜಿಗಿದಿದ್ದ ಕ್ಷಣ –ಎಎಫ್‌ಪಿ ಚಿತ್ರ   

ವಾಷಿಂಗ್ಟನ್‌: ಹೈಜಂಪ್‌ ಸ್ಪರ್ಧೆಗೆ ಹೊಸ ದಿಕ್ಕು ತೋರಿಸಿದ್ದ ದಿಗ್ಗಜ ಅಥ್ಲೀಟ್‌ ಅಮೆರಿಕದ ಡಿಕ್‌ ಫಾಸ್‌ಬರಿ (76) ಭಾನುವಾರ ನಿಧನರಾದರು. ಅವರು ಕಳೆದ ಕೆಲ ಸಮಯಗಳಿಂದ ಲಿಂಫೋಮಾದಿಂದ ಬಳಲುತ್ತಿದ್ದರು.

‘ಫಾಸ್‌ಬರಿ ಫ್ಲಾಪ್’: ಹೈಜಂಪ್‌ ಸ್ಪರ್ಧಿಗಳು ಜಿಗಿಯಲು ಈಗ ಅನುಸರಿಸುತ್ತಿರುವ ತಂತ್ರವನ್ನು ಮೊದಲು ‍ಪರಿಚಯಿಸಿದ್ದು ಫಾಸ್‌ಬರಿ. ಈ ತಂತ್ರವನ್ನು ‘ಫಾಸ್‌ಬರಿ ಫ್ಲಾಪ್’ ಎಂದೇ ಕರೆಯಲಾಗುತ್ತದೆ.‌

ಸ್ಪರ್ಧಿಗಳು ದೂರದಿಂದ ನೇರವಾಗಿ ಓಡಿಬಂದು ತಮ್ಮ ಎಡ ಅಥವಾ ಬಲಗಾಲನ್ನು ನೆಲಕ್ಕೆ ಊರಿ ನೇರವಾಗಿ ಜಿಗಿಯುವುದು ಸಾಂಪ್ರದಾಯಿಕ ತಂತ್ರ ಆಗಿತ್ತು. ಆದರೆ ಫಾಸ್‌ಬರಿ ಒಂದು ಬದಿಯಿಂದ ಓಡಿ ಬಂದು ಬೆನ್ನು ಹಿಂಭಾಗಕ್ಕೆ ಬಾಗಿಸಿ ಜಿಗಿಯುವ ತಂತ್ರ ಅನುಸರಿಸಿದರು.

ADVERTISEMENT

1968ರ ಮೆಕ್ಸಿಕೊ ಒಲಿಂಪಿಕ್ಸ್‌ನಲ್ಲಿ ಅವರು ನೂತನ ತಂತ್ರದ ಮೂಲಕ 2.24 ಮೀ. ಎತ್ತರ ಜಿಗಿದು ಹೊಸ ದಾಖಲೆಯೊಂದಿಗೆ ಚಿನ್ನ ಗೆದ್ದಿದ್ದರು.

ಬಳಿಕದ ದಿನಗಳಲ್ಲಿ ಇತರ ಸ್ಪರ್ಧಿಗಳು ಸಾಂಪ್ರದಾಯಿಕ ತಂತ್ರವನ್ನು ಬಿಟ್ಟು ‘ಫಾಸ್‌ಬರಿ ಫ್ಲಾಪ್’ಅನ್ನೇ ಅಭ್ಯಾಸ ಮಾಡಿದರು. 1972ರ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡಿದ್ದ 40 ಹೈಜಂಪ್‌ ಸ್ಪರ್ಧಿಗಳಲ್ಲಿ 28 ಮಂದಿ ಕೂಡಾ ಹೊಸ ತಂತ್ರ ಅನುಸರಿಸಿದ್ದರು.

‘ಫಾಸ್‌ಬರಿ ಫ್ಲಾಪ್’ ತಂತ್ರ ಹೊರತುಪಡಿಸಿ ಬೇರೆ ತಂತ್ರದ ಮೂಲಕ ಹೈಜಂಪ್‌ನಲ್ಲಿ ಸ್ಪರ್ಧಿಯೊಬ್ಬರು ಕೊನೆಯದಾಗಿ ಪದಕ ಗೆದ್ದದ್ದು 1976ರಲ್ಲಿ.

ಆ ಬಳಿಕ ಎಲ್ಲರೂ ಫಾಸ್‌ಬರಿ ಪರಿಚಯಿಸಿದ ತಂತ್ರದ ಮೂಲಕವೇ ಪದಕ ಜಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.