ADVERTISEMENT

ಅವಿರೋಧ ಆಯ್ಕೆ: ಹಾಕಿ ಇಂಡಿಯಾಗೆ ದಿಲೀಪ್ ಟಿರ್ಕಿ ಅಧ್ಯಕ್ಷ

ಕರ್ನಾಟಕದ ಸುಬ್ರಮಣ್ಯ ಗುಪ್ತಾ ಉಪಾಧ್ಯಕ್ಷ

ಪಿಟಿಐ
Published 23 ಸೆಪ್ಟೆಂಬರ್ 2022, 13:49 IST
Last Updated 23 ಸೆಪ್ಟೆಂಬರ್ 2022, 13:49 IST
ದಿಲೀಪ್ ಟಿರ್ಕೆ
ದಿಲೀಪ್ ಟಿರ್ಕೆ   

ನವದೆಹಲಿ: ಭಾರತ ಹಾಕಿ ತಂಡದ ಮಾಜಿ ನಾಯಕ, ಒಲಿಂಪಿಯನ್‌ ದಿಲೀಪ್‌ ಟಿರ್ಕೆ ಅವರು ಹಾಕಿ ಇಂಡಿಯಾ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.

ಹಾಕಿ ಇಂಡಿಯಾಗೆ ಅಕ್ಟೋಬರ್ 1ರಂದು ಚುನಾವಣೆ ನಿಗದಿಯಾಗಿತ್ತು. ಆದರೆ ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳನ್ನು ಹೊರತುಪಡಿಸಿ ಯಾವುದೇ ಸ್ಪರ್ಧಿಗಳಿರದ ಕಾರಣ ಮುಂಚಿತವಾಗಿಯೇ ಫಲಿತಾಂಶ ಪ್ರಕಟಿಸಲಾಗಿದೆ. ಫೆಡರೇಷನ್‌ನ ನಿಯಮಾವಳಿಗಳ ಪ್ರಕಾರ ಅಭ್ಯರ್ಥಿಗಳು ಅವಿರೋಧ ಆಯ್ಕೆಯಾಗಿದ್ದಾರೆಂದು ಅಂತರರಾಷ್ಟ್ರೀಯ ಹಾಕಿ ಫೆಡರೇಷನ್‌ನ (ಎಫ್‌ಐಎಚ್‌) ಪತ್ರದಲ್ಲಿ ತಿಳಿಸಲಾಗಿದೆ.

ಅಧ್ಯಕ್ಷ ಹುದ್ದೆಗೆ ನಾಮಪತ್ರ ಸಲ್ಲಿಸಿದ್ದ ಉತ್ತರ ಪ್ರದೇಶ ಹಾಕಿ ಫೆಡರೇಷನ್ ಅಧ್ಯಕ್ಷ ರಾಕೇಶ್ ಕತ್ಯಾಲ್ ಮತ್ತು ಹಾಕಿ ಜಾರ್ಖಂಡ್ ಅಧ್ಯಕ್ಷ ಭೋಲಾ ನಾಥ್ ಸಿಂಗ್‌ ಶುಕ್ರವಾರ ನಾಮಪತ್ರ ಹಿಂಪಡೆದಿದ್ದರಿಂದ ಟಿರ್ಕೆ ಹಾದಿ ಸುಗಮವಾಯಿತು. ಭೋಲಾ ನಾಥ್ ಅವರು ಪ್ರಧಾನ ಕಾರ್ಯದರ್ಶಿಯಾಗಿ ಅವಿರೋಧ ಆಯ್ಕೆಯಾದರು.

ADVERTISEMENT

ಟಿರ್ಕೆ ನೇತೃತ್ವದ ತಂಡದ ಆಯ್ಕೆಯನ್ನು ಎಫ್‌ಐಎಚ್‌ ಅನುಮೋದಿಸಿದೆ.

ಚುನಾವಣಾ ಪ್ರಕ್ರಿಯೆಗಳನ್ನು ಸುಗಮವಾಗಿ ನಡೆಸಿಕೊಟ್ಟ ಆಡಳಿತಗಾರರ ಸಮಿತಿಯ (ಸಿಒಎ) ಸದಸ್ಯರಾದ ನ್ಯಾಯಮೂರ್ತಿ ಅನಿಲ್ ದವೆ, ಎಸ್‌.ವೈ. ಖುರೇಷಿ ಮತ್ತು ಜಾಫರ್ ಇಕ್ಬಾಲ್ ಅವರ ಕಾರ್ಯವನ್ನು ಎಫ್‌ಐಎಚ್‌ ಶ್ಲಾಘಿಸಿದೆ.

‘ಭಾರತದ ಹಾಕಿಯನ್ನು ಉನ್ನತ ಹಂತಕ್ಕೆ ಕೊಂಡೊಯ್ಯುವ ವಿಶ್ವಾಸವಿದೆ. ಸಿಒಎ ಮತ್ತು ಎಫ್‌ಐಎಚ್‌ಗೆ ಧನ್ಯವಾದಗಳು’ ಎಂದು ಟಿರ್ಕೆ ಟ್ವೀಟ್ ಮಾಡಿದ್ದಾರೆ.

‘ದಿಲೀಪ್ ಟಿರ್ಕೆ ಹಾಕಿಯ ದಂತಕತೆ. ಅವರೊಂದಿಗೆ ಚರ್ಚಿಸಿ ನಾಮಪತ್ರ ಹಿಂಪಡೆದಿದ್ದೇನೆ. ಹಾಕಿ ಇಂಡಿಯಾದ ಬೆಳವಣಿಗೆಗೆ ಜೊತೆಗೂಡಿ ಕೆಲಸ ಮಾಡುವೆವು’ ಎಂದು ಭೋಲಾ ನಾಥ್ ಹೇಳಿದ್ದಾರೆ.

44 ವರ್ಷದ ಟಿರ್ಕೆ ಅವರು 1998ರ ಬ್ಯಾಂಕಾಕ್‌ ಮತ್ತು 2012ರ ಬೂಸಾನ್‌ ಏಷ್ಯನ್‌ ಗೇಮ್ಸ್‌ನಲ್ಲಿ ಕ್ರಮವಾಗಿ ಚಿನ್ನ ಹಾಗೂ ಬೆಳ್ಳಿ ಜಯಿಸಿದ್ದ ಭಾರತ ತಂಡದ ಸದಸ್ಯರಾಗಿದ್ದರು.

ಅವಿರೋಧ ಆಯ್ಕೆಯಾದ ಇತರರು: ಅಸೀಮ್ ಅಲಿ (ಜಮ್ಮು ಮತ್ತು ಕಾಶ್ಮೀರ), ಕರ್ನಾಟಕದ ಎಸ್‌ವಿಎಸ್‌ ಸುಬ್ರಮಣ್ಯ ಗುಪ್ತಾ (ಇಬ್ಬರೂ ಉಪಾಧ್ಯಕ್ಷರು), ಶೇಖರ್ ಜೆ. ಮನೋಹರನ್‌ (ತಮಿಳುನಾಡು, ಖಜಾಂಚಿ), ಆರತಿ ಸಿಂಗ್‌, ಸುನಿಲ್ ಮಲಿಕ್‌ (ರಾಜಸ್ಥಾನ ಮತ್ತು ಹರಿಯಾಣ, ಜಂಟಿ ಕಾರ್ಯದರ್ಶಿಗಳು).

ಕಾರ್ಯಕಾರಿ ಮಂಡಳಿ ಸದಸ್ಯರು: ಅರುಣ್ ಕುಮಾರ್ ಸಾರಸ್ವತ್‌ (ರಾಜಸ್ಥಾನ), ಅರ್ಸಿತಾ ಲಾಕ್ರಾ (ಜಾರ್ಖಂಡ್‌), ಗುರುಪ್ರೀತ್ ಕೌರ್ (ದೆಹಲಿ), ವಿ.ಸುನಿಲ್ ಕುಮಾರ್ (ಕೇರಳ) ಮತ್ತು ತಪನ್ ಕುಮಾರ್ ದಾಸ್‌ (ಅಸ್ಸಾಂ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.