ಆರ್ಯಾ ಬೊರ್ಸ್ ಮತ್ತು ಅರ್ಜುನ್ ಬಬೂತಾ
–ಎಕ್ಸ್ ಚಿತ್ರ
ಮ್ಯೂನಿಕ್: ಭಾರತದ ಆರ್ಯ ಬೊರ್ಸ್ ಮತ್ತು ಅರ್ಜುನ್ ಬಬೂತಾ ಜೋಡಿಯು ಇಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್ ವಿಶ್ವಕಪ್ ಶೂಟಿಂಗ್‌ನ 10 ಮೀಟರ್ಸ್ ಏರ್‌ರೈಫಲ್ ಮಿಶ್ರ ತಂಡ ವಿಭಾಗದಲ್ಲಿ ಚಿನ್ನದ ಪದಕ ಜಯಿಸಿತು.
ಶನಿವಾರ ನಡೆದ ಫೈನಲ್‌ನಲ್ಲಿ ಭಾರತದ ಜೋಡಿಯು ಒಲಿಂಪಿಕ್ ಚಾಂಪಿಯನ್ ಚೀನಾದ ಝೈಫಿ ವಾಂಗ್ ಮತ್ತು ಲಿಯಾವೊ ಶೆಂಗ್ ಅವರನ್ನು 17–7ರಿಂದ ಸೋಲಿಸಿತು.
ಆರ್ಯ ಮತ್ತು ಅರ್ಜುನ್ ಅವರು ಈ ಸ್ಪರ್ಧೆಯಲ್ಲಿ ಅಪಾರ ಆತ್ಮವಿಶ್ವಾಸದಲ್ಲಿದ್ದರು. ಅರ್ಹತಾ ಸುತ್ತಿನಲ್ಲಿ 635.2 ಅಂಕಗಳೊಂದಿಗೆ ಫೈನಲ್ ಪ್ರವೇಶಿಸಿತ್ತು. ಅರ್ಹತಾ ಸುತ್ತಿನಲ್ಲಿ ಚೀನಾದ ಜೋಡಿಯು (635.9) ಭಾರತಕ್ಕಿಂತ 0.7 ಅಂತರದಿಂದ ಮುಂದಿತ್ತು. ಇದು ವಿಶ್ವಕಪ್ ಕ್ವಾಲಿಫಿಕೇಷನ್ ದಾಖಲೆಯೂ ಆಗಿದೆ.
ಈಚೆಗೆ ಪೆರುವಿನಲ್ಲಿ ನಡೆದಿದ್ದ ವಿಶ್ವಕಪ್ ಶೂಟಿಂಗ್‌ನ 10 ಮೀ ಏರ್ ರೈಫಲ್ ಮಿಶ್ರ ತಂಡ ವಿಭಾಗದಲ್ಲಿ ಆರ್ಯ ಅವರು ರುದ್ರಾಂಕ್ಷ್ ಪಾಟೀಲ ಅವರೊಂದಿಗೆ ಬೆಳ್ಳಿ ಪದಕ ಜಯಿಸಿದ್ದರು.
ಇದೇ ಸ್ಪರ್ಧೆಯಲ್ಲಿದ್ದ ಭಾರತದ ಇಳವೆನಿಲ್ ವಾಳರಿವನ್ ಮತ್ತು ಅಂಕುಶ್ ಜಾಧವ್ ಜೋಡಿಯು ಅರ್ಹತಾ ಸುತ್ತಿನಲ್ಲಿ 631.8 ಅಂಕಗಳನ್ನು ಕಲೆಹಾಕಿ ಆರನೇ ಸ್ಥಾನ ಪಡೆಯಿತು.
ನಾರ್ವೆಯ ಜೀನೆಟ್ ಹೆಗ್ ಡ್ಯೂಸ್ಟಾಡ್ ಮತ್ತು ಜಾನ್ ಹರ್ಮನ್ ಹೆಗ್ ಜೋಡಿಯು ಕಂಚಿನ ಪದಕ ಜಯಿಸಿತು. ಈ ಜೋಡಿಯು 16–14ರಿಂದ ಅಮೆರಿಕದ ಸೇಗನ್ ಮ್ಯಾಡಲಿನಾ ಮತ್ತು ಪೀಟರ್ ಮ್ಯಾಥ್ಯೂ ಫಿಯೊರಿ ವಿರುದ್ಧ ಗೆದ್ದಿತು.
ಈ ವಿಶ್ವಕಪ್ ನಲ್ಲಿ ಭಾರತಕ್ಕೆ ಒಲಿದ ಎರಡನೇ ಚಿನ್ನ ಇದಾಗಿದೆ. ಇದರೊಂದಿಗೆ ಒಟ್ಟು ನಾಲ್ಕು ಪದಕಗಳನ್ನು ಗೆದ್ದಿದೆ. ಸಿಫ್ತ್ ಕೌರ್ ಮತ್ತು ಇಳವೆನಿಲ್ ಅವರು ವೈಯಕ್ತಿಕ ವಿಭಾಗದಲ್ಲಿ ಕಂಚಿನ ಪದಕ ಜಯಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.