ADVERTISEMENT

ನನ್ನ ಹೇಳಿಕೆಗಳನ್ನು ನಿಮ್ಮ ಪ್ರಚಾರಕ್ಕೆ ಬಳಸಬೇಡಿ: ನೀರಜ್ ಚೋಪ್ರಾ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2021, 4:34 IST
Last Updated 27 ಆಗಸ್ಟ್ 2021, 4:34 IST
ನೀರಜ್ ಚೋಪ್ರಾ
ನೀರಜ್ ಚೋಪ್ರಾ   

ನವದೆಹಲಿ: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಸ್ಪರ್ಧೆ ನಡೆದ ಸಂದರ್ಭದಲ್ಲಿ ಪಾಕ್ ಅಥ್ಲೀಟ್‌ಅರ್ಷದ್ ನದೀಮ್ ತಮ್ಮ ಜಾವೆಲಿನ್ ತೆಗೆದುಕೊಂಡಿದ್ದನ್ನು ಮತ್ತು ಅವರಿಂದ ತಾವು ಪಡೆದಿದ್ದನ್ನು ಭಾರತದ ನೀರಜ್ ಚೋಪ್ರಾ ಸಮರ್ಥಿಸಿಕೊಂಡಿದ್ದಾರೆ. ಈ ಕುರಿತು ನಡೆಯುತ್ತಿರುವ ವಾದ–ವಿವಾದಗಳಿಗೆ ಅಸಮಾಧಾನ ವ್ಯಕ್ತಪಡಿಸಿದ್ಧಾರೆ.

ಈ ಕುರಿತು ಗುರುವಾರ ಟ್ವಿಟರ್‌ನಲ್ಲಿ ವಿಡಿಯೊ ಬಿಡುಗಡೆ ಮಾಡಿರುವ ನೀರಜ್‌, ‘ನನ್ನ ಹೇಳಿಕೆಗಳನ್ನು ನಿಮ್ಮ ಹಿತಾಸಕ್ತಿ ಮತ್ತು ಪ್ರಚಾರಕ್ಕಾಗಿ ನನ್ನ ಹೇಳಿಕೆಗಳನ್ನು ಬಳಸಿಕೊಳ್ಳಬೇಡಿ ಎಂದು ವಿನಂತಿಸುತ್ತೇನೆ. ನಾವೆಲ್ಲರೂ ಒಂದು, ಒಗ್ಗಟ್ಟಾಗಿರಲು ಕ್ರೀಡೆ ನಮಗೆ ಕಲಿಸುತ್ತದೆ. ನನ್ನ ಇತ್ತೀಚಿನ ಹೇಳಿಕೆಗಳಿಗೆ ಕೆಲವರಿಂದ ಬಂದ ಪ್ರತಿಕ್ರಿಯೆಗಳನ್ನು ನೋಡಿ ತುಂಬಾ ಬೇಸರವಾಗಿದೆ’ ಎಂದಿದ್ದಾರೆ.

‘ಸ್ಪರ್ಧೆಯಲ್ಲಿ ಎಲ್ಲರ ಜಾವೆಲಿನ್‌ಗಳು (ಭರ್ಜಿ) ಒಂದೇ ಕಡೆ ಇರುತ್ತವೆ. ಅವುಗಳನ್ನು ಯಾರು ಬೇಕಾದರೂ ತೆಗೆದುಕೊಳ್ಳಬಹುದು. ಅರ್ಷದ್‌ ನನ್ನ ಜಾವೆಲಿನ್ ಹಿಡಿದು ಥ್ರೋಗೆ ತಯಾರಿ ಮಾಡುತ್ತಿದ್ದರು. ಇದು ದೊಡ್ಡ ವಿಷಯವೇನಲ್ಲ. ಪಾಕಿಸ್ತಾನದ ಕ್ರೀಡಾಪಟು ನನ್ನ ಜಾವೆಲಿನ್ ತೆಗೆದುಕೊಂಡಿದ್ದರಲ್ಲಿ ತಪ್ಪೇನೂ ಇಲ್ಲ. ಎಲ್ಲವೂ ನಿಯಮಗಳ ಪ್ರಕಾರವೇ ನಡೆದಿದೆ’ ಎಂದು ನೀರಜ್ ಹೇಳಿದ್ದಾರೆ.

ADVERTISEMENT

ಇತ್ತೀಚೆಗೆ ಮಾಧ್ಯಮ ಸಂಸ್ಥೆಯೊಂದಕ್ಕೆ ನೀರಜ್‌ ಚೋಪ್ರಾ ಅವರು ನೀಡಿದ್ದ ಸಂದರ್ಶನದಲ್ಲಿನ ಕೆಲ ಮಾತುಗಳು ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಗೆ ಒಳಗಾಗಿದೆ. ‘ಫೈನಲ್‌ಗೂ ಮುನ್ನ ನಾನು ನನ್ನ ಜಾವೆಲಿನ್ ಹುಡುಕುತ್ತಿದ್ದೆ. ಆಗ ಪಾಕಿಸ್ತಾನದ ಅರ್ಷದ್ ನದೀಮ್ ನನ್ನ ಜಾವೆಲಿನ್ ಹಿಡಿದು ತಿರುಗಾಡುತ್ತಿರುವುದನ್ನು ತಟ್ಟನೇ ಗಮನಿಸಿದೆ. ಅವರ ಬಳಿಗೆ ಹೋಗಿ, ಈ ಜಾವೆಲಿನ್ ನನ್ನದು ಎಂದು ಹೇಳಿದೆ. ಅರ್ಷದ್‌ ಅದನ್ನು ನನಗೆ ಮರಳಿಸಿದರು. ನಂತರ ನಾನು ‌ಥ್ರೋ ಮಾಡಿರುವುದನ್ನು ನೀವು ನೋಡಿದ್ದೀರಿ’ ಎಂದಿದ್ದರು.

ಇದರಿಂದಾಗಿ ಪಾಕ್ ಆಟಗಾರನ ಮೇಲೆ ಜನ ಆಕ್ರೋಶ ವ್ಯಕ್ತಪಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.