ADVERTISEMENT

ಪ್ಯಾರಾಲಿಂಪಿಕ್ಸ್ ಕಮಿಟಿ ಅಧ್ಯಕ್ಷರಾಗಿ ದೇವೇಂದ್ರ ಝಝಾರಿಯಾ ಆಯ್ಕೆ

ಪಿಟಿಐ
Published 9 ಮಾರ್ಚ್ 2024, 15:39 IST
Last Updated 9 ಮಾರ್ಚ್ 2024, 15:39 IST
<div class="paragraphs"><p>ದೇವೇಂದ್ರ ಝಝಾರಿಯಾ</p></div>

ದೇವೇಂದ್ರ ಝಝಾರಿಯಾ

   

ನವದೆಹಲಿ: ಎರಡು ಬಾರಿ ಪ್ಯಾರಾಲಿಂಪಿಕ್ಸ್‌ ಚಿನ್ನದ ಪದಕ ವಿಜೇತ ದೇವೇಂದ್ರ ಝಝಾರಿಯಾ ಅವರು ಪ್ಯಾರಾಲಿಂಪಿಕ್ಸ್ ಕಮಿಟಿ (ಪಿಸಿಐ) ಅಧ್ಯಕ್ಷರಾಗಿ ಶನಿವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

2004ರ ಅಥೆನ್ಸ್ ಮತ್ತು 2016ರ ರಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಎಫ್‌ 46 ಅಂಗವೈಕಲ್ಯ ವಿಭಾಗದಲ್ಲಿ ತಲಾ ಚಿನ್ನದ ಪದಕ ಗೆದ್ದಿದ್ದ 42 ವರ್ಷದ ಜಾವೆಲಿನ್ ಎಸೆತಗಾರ ಮಾತ್ರ ಈ ಹುದ್ದೆಗೆ ಸ್ಪರ್ಧೆಯಲ್ಲಿದ್ದರು. ಪ್ಯಾರಾ ಅಥ್ಲೀಟ್ ದೀಪಾ ಮಲಿಕ್ ಅವರ ಉತ್ತರಾಧಿಕಾರಿಯಾಗಿದ್ದಾರೆ. 

ADVERTISEMENT

ಎಲ್ಲಾ ಹೊಸ ಪದಾಧಿಕಾರಿಗಳು ಅವಿರೋಧವಾಗಿ ಆಯ್ಕೆಯಾದರು.

ಅಧ್ಯಕ್ಷ, ಇಬ್ಬರು ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿ, ಖಜಾಂಚಿ, ಇಬ್ಬರು ಜಂಟಿ ಕಾರ್ಯದರ್ಶಿಗಳು ಮತ್ತು ಐದು ಕಾರ್ಯಕಾರಿ ಸಮಿತಿ ಸದಸ್ಯರ ಹುದ್ದೆಗೆ ಚುನಾವಣೆ ನಡೆದವು. ಆರಂಭದಲ್ಲಿ ಐದು ಕಾರ್ಯಕಾರಿ ಸಮಿತಿ ಸದಸ್ಯರ ಹುದ್ದೆಗೆ ಎಂಟು ಅಭ್ಯರ್ಥಿಗಳು  ನಾಮಪತ್ರಗಳನ್ನು ಸಲ್ಲಿಸಿದರು. ಆದರೆ, ಅವರಲ್ಲಿ ಮೂವರು ನಂತರ ಸ್ಪರ್ಧೆಯಿಂದ ಹಿಂದೆ ಸರಿದರು.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜಸ್ಥಾನದ ಚುರು ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ನಲ್ಲಿ ಸ್ಪರ್ಧಿಸುತ್ತಿರುವ ಝಝಾರಿಯಾ ನೇತೃತ್ವದ ಎಲ್ಲಾ ಹೊಸ ಪದಾಧಿಕಾರಿಗಳಿಗೆ ಚುನಾವಣಾಧಿಕಾರಿ ಉಮೇಶ್ ಸಿನ್ಹಾ ಅವರು ಪ್ರಮಾಣಪತ್ರಗಳನ್ನು ಹಸ್ತಾಂತರಿಸಿದರು.

ಗೋವಾದ ಅಂತಾರಾಷ್ಟ್ರೀಯ ತರಬೇತುದಾರ ಮತ್ತು ರೆಫರಿ ಜಯವಂತ್ ಹಮ್ಮನವರ್ ಅವರು ಪ್ರಧಾನ ಕಾರ್ಯದರ್ಶಿಯಾಗಿ ಅವಿರೋಧವಾಗಿ ಆಯ್ಕೆಯಾದರು. 

ಉಪಾಧ್ಯಕ್ಷರಾಗಿ ಆರ್.ಚಂದ್ರಶೇಖರ್ ಮತ್ತು ಸತ್ಯ ಪ್ರಕಾಶ್ ಸಾಂಗ್ವಾನ್, ಖಜಾಂಚಿ ಹುದ್ದೆಗೆ ಸುನಿಲ್ ಪ್ರಧಾನ್ ಒಬ್ಬರೇ ಅಭ್ಯರ್ಥಿ, ಲಲಿತ್ ಠಾಕೂರ್ ಮತ್ತು ಟಿ.ದಿವಾಕರ ಜಂಟಿ ಕಾರ್ಯದರ್ಶಿಗಳಾಗಿದ್ದಾರೆ.

ನಿಗದಿತ ಅವಧಿಯೊಳಗೆ ಚುನಾವಣೆ ನಡೆಸದ ಕಾರಣಕ್ಕೆ ಕಳೆದ ತಿಂಗಳು ಕ್ರೀಡಾ ಸಚಿವಾಲಯ ಪಿಸಿಐ ಅನ್ನು ಅಮಾನತುಗೊಳಿಸಿತು. ಚುನಾವಣೆ ಪ್ರಕ್ರಿಯೆ ಆರಂಭಿಸಿದ ಬಳಿಕ ಅಮಾನತು ಆದೇಶವನ್ನು ಮಾರ್ಚ್ 5ರಂದು ಸಚಿವಾಲಯ ವಾಪಸ್‌ ಪಡೆದಿತ್ತು. 

ರಾಜಸ್ಥಾನ ಮೂಲದ ಝಝಾರಿಯಾ ಅವರು 2021ರ ಟೋಕಿಯೊ ಪ್ಯಾರಾಂಲಿಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. 2013ರ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಹಾಗೂ 2015ರಲ್ಲಿ ಬೆಳ್ಳಿ (ಎರಡೂ ಎಫ್‌ 46 ವಿಭಾಗ) ಮತ್ತು 2014ರ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸಿದ್ದರು. 2022ರಲ್ಲಿ ಪದ್ಮಭೂಷಣ ಪ್ರಶಸ್ತಿ ನೀಡಲಾಗಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.