ADVERTISEMENT

ಪಿ.ಟಿ. ಉಷಾಗೆ ತರಬೇತಿ ನೀಡಿದ್ದ ಅಥ್ಲೆಟಿಕ್‌ ಕೋಚ್‌ ನಂಬಿಯಾರ್ ಇನ್ನಿಲ್ಲ

ಪಿಟಿಐ
Published 19 ಆಗಸ್ಟ್ 2021, 15:34 IST
Last Updated 19 ಆಗಸ್ಟ್ 2021, 15:34 IST
ಒ.ಎಂ.ನಂಬಿಯಾರ್ –ಟ್ವಿಟರ್ ಚಿತ್ರ
ಒ.ಎಂ.ನಂಬಿಯಾರ್ –ಟ್ವಿಟರ್ ಚಿತ್ರ   

ಕೋಯಿಕ್ಕೋಡ್‌: ಒಲಿಂಪಿಕ್ಸ್‌ನಲ್ಲಿ ಕೂದಲೆಳೆ ಅಂತರದಲ್ಲಿ ಪದಕ ವಂಚಿತರಾದ ಪಿ.ಟಿ.ಉಷಾ ಅವರಿಗೆ ತರಬೇತಿ ನೀಡಿದ್ದ ಖ್ಯಾತ ಅಥ್ಲೆಟಿಕ್ ಕೋಚ್ ಒ.ಎಂ.ನಂಬಿಯಾರ್ (89) ಅನಾರೋಗ್ಯದಿಂದ ಗುರುವಾರ ನಿಧನರಾದರು. ಅವರಿಗೆ ಪತ್ನಿ, ಮೂವರು ಪುತ್ರರು ಮತ್ತು ಪುತ್ರಿ ಇದ್ದಾರೆ.

ಮೊದಲ ದ್ರೋಣಾಚಾರ್ಯ ಪ್ರಶಸ್ತಿಗೆ ಭಾಜನರಾಗಿದ್ದ ಅವರಿಗೆ ಈ ಬಾರಿ ಪದ್ಮಶ್ರೀ ಪ್ರಶಸ್ತಿಯೂ ಸಂದಿತ್ತು. ಕೋಯಿಕ್ಕೋಡ್ ಜಿಲ್ಲೆಯ ವಡಗರದಲ್ಲಿ ವಾಸಿಸುತ್ತಿದ್ದ ಅವರಿಗೆ ಪಾರ್ಕಿನ್ಸನ್ ಕಾಯಿಲೆ ಆಗಿತ್ತು. 10 ದಿನಗಳ ಹಿಂದೆ ಹೃದಯಾಘಾತವಾಗಿತ್ತು. ಹೀಗಾಗಿ ಆಸ್ಪತ್ರೆಗೆ ಸೇರಿಸಲಾಗಿತ್ತು.

ಭಾರತೀಯ ವಾಯುಸೇನೆಯಲ್ಲಿದ್ದ ನಂಬಿಯಾರ್ ನಿವೃತ್ತಿ ನಂತರ ಕೋಚಿಂಗ್ ವೃತ್ತಿಗೆ ಇಳಿದು ಅನೇಕ ಮಂದಿ ಅಂತರರಾಷ್ಟ್ರೀಯ ಕ್ರೀಡಾಪಟುಗಳನ್ನು ಬೆಳೆಸಿದ್ದಾರೆ. ಉಷಾ ಅವರಿಗೆ 1984ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ ಒಂದು ಸೆಕೆಂಡಿನ 100ನೇ ಒಂದು ಅಂಶದಲ್ಲಿ ಕಂಚಿನ ಪದಕ ಕೈತಪ್ಪಿತ್ತು. ಆ ಸಂದರ್ಭದಲ್ಲಿ ನಂಬಿಯಾರ್ ಕೋಚ್ ಆಗಿದ್ದರು. ನಾಲ್ಕು ಬಾರಿಯ ಒಲಿಂಪಿಯನ್‌ ಶೈನಿ ವಿಲ್ಸನ್‌ ಮತ್ತು ವಂದನಾ ರಾವ್‌ ಅವರಿಗೂ ನಂಬಿಯಾರ್ ತರಬೇತಿ ನೀಡಿದ್ದಾರೆ.

ADVERTISEMENT

ಕಣ್ಣೂರು ಜಿಲ್ಲೆಯಲ್ಲಿ ಜನಿಸಿದ ನಂಬಿಯಾರ್ ಕೋಯಿಕ್ಕೋಡ್‌ನ ಗುರುವಾಯೂರಪ್ಪನ್ ಕಾಲೇಜಿನಲ್ಲಿ ಓದುತ್ತಿದ್ದಾಗಲೇ ಅಥ್ಲೆಟಿಕ್ಸ್‌ನಲ್ಲಿ ಹೆಸರು ಮಾಡಿದ್ದರು. ಪ್ರಾಂಶುಪಾಲರ ಸಲಹೆ ಮೇರೆಗೆ ವಾಯುಸೇನೆ ಸೇರಿಕೊಂಡು ಅಲ್ಲಿಯೂ ಕ್ರೀಡೆಯಲ್ಲಿ ಹೆಸರು ಮಾಡಿದ್ದರು. 15 ವರ್ಷ ವಾಯುಸೇನೆಯಲ್ಲಿದ್ದ ಅವರು 1970ರಲ್ಲಿ ಸರ್ಜಂಟ್ ಆಗಿ ನಿವೃತ್ತರಾಗಿದ್ದರು. 1968ರಲ್ಲಿ ಪಟಿಯಾಲದ ಎನ್‌ಐಎಸ್‌ನಲ್ಲಿ ಕೋಚಿಂಗ್ ಡಿಪ್ಲೋಮಾ ಮಾಡಿ ಸರ್ವಿಸಸ್‌ನಲ್ಲಿ ಕೋಚಿಂಗ್ ನೀಡುತ್ತಿದ್ದರು. 1971ರಲ್ಲಿ ಕೇರಳ ಸ್ಪೋರ್ಟ್ಸ್ ಕೌನ್ಸಿಲ್‌ನಲ್ಲಿ ಸೇರಿಕೊಂಡರು. 1977ರಲ್ಲಿ ಉಷಾ ಅವರನ್ನು ಗುರುತಿಸಿ ತರಬೇತಿ ನೀಡಲು ಆರಂಭಿಸಿದರು.

ನಂಬಿಯಾರ್ ಅವರ ನಿಧನಿಂದ ವೈಯಕ್ತಿಕವಾಗಿ ನನಗೆ ತುಂಬಲಾರದ ನಷ್ಟ ಆಗಿದೆ. ತಂದೆ ಸಮಾನರಾಗಿದ್ದ ಅವರು ಇಲ್ಲದೇ ಇದ್ದಿದ್ದರೆ ನಾನು ಟ್ರ್ಯಾಕ್‌ನಲ್ಲಿ ಸಾಧನೆ ಮಾಡಲು ಆಗುತ್ತಿರಲಿಲ್ಲ. ಒಲಿಂಪಿಕ್ಸ್‌ನಲ್ಲಿ ನೀರಜ್ ಚೋಪ್ರಾ ಚಿನ್ನ ಗೆದ್ದ ನಂತರ ನಾನು ನಂಬಿಯಾರ್ ಅವರನ್ನು ಭೇಟಿಯಾಗಿದ್ದೆ. ಅವರಿಗೆ ನಾನು ಮಾತನಾಡಿದ್ದು ತಿಳಿಯುತ್ತಿತ್ತು. ಆದರೆ ವಾಪಸ್ ಏನೂ ಹೇಳಲು ಆಗುತ್ತಿರಲಲ್ಲ.

ಪಿ.ಟಿ.ಉಷಾ ನಂಬಿಯಾರ್ ಅವರ ಶಿಷ್ಯೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.