ADVERTISEMENT

ದುಲೀಪ್ ಟ್ರೋಫಿ: ಎರಡನೇ ಪಂದ್ಯದಲ್ಲಿ ನಾಡಾ ಪರೀಕ್ಷೆ

ಪಿಟಿಐ
Published 18 ಆಗಸ್ಟ್ 2019, 14:13 IST
Last Updated 18 ಆಗಸ್ಟ್ 2019, 14:13 IST

ನವದೆಹಲಿ: ದುಲೀಪ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಎರಡನೇ ಪಂದ್ಯದಿಂದಲೇ ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಘಟಕವು (ನಾಡಾ) ಆಟಗಾರರ ಪರೀಕ್ಷೆ ಆರಂಭಿಸಲಿದೆ. ಇದಕ್ಕಾಗಿ ಬಿಸಿಸಿಐ ಬೇಡಿಕೆಯಂತೆ ವೈದ್ಯಕೀಯ ಪರಿಣತರನ್ನು ನೇಮಕ ಮಾಡಲಿದೆ.

ಈಚೆಗೆ ಬಿಸಿಸಿಐ ಕ್ರಿಕೆಟ್‌ ಚಟುವಟಿಕೆಗಳ ಮುಖ್ಯ ವ್ಯವಸ್ಥಾಪಕ ಸಾಬಾ ಕರೀಂ ಮತ್ತು ಬಿಸಿಸಿಐ ಉದ್ದೀಪನ ಮದ್ದು ತಡೆ ಘಟಕದ ಮುಖ್ಯಸ್ಥ ಡಾ. ಅಭಿಜಿತ್ ಸಾಳ್ವಿ ಅವರು ಜೊತೆಗೂಡಿ ನಾಡಾದ ಹಿರಿಯ ಅಧಿಕಾರಿಗಳನ್ನು ಭೇಟಿಯಾಗಿದ್ದರು. ಪ್ರಧಾನ ನಿರ್ದೇಶಕ ನವೀನ್ ಅಗರವಾಲ್ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.

‘ದುಲೀಪ್ ಟ್ರೋಫಿ ಟೂರ್ನಿಯೊಂದಿಗೆ ನಮ್ಮ ಕಾರ್ಯ ಆರಂಭ ಮಾಡಲಿದ್ದೇವೆ. ಬಿಸಿಸಿಐನೊಂದಿಗೆ ಜೊತೆಗೂಡಿ ಕಾರ್ಯನಿರ್ವಹಿಸಿ ಉತ್ತಮ ಕ್ರೀಡಾ ವಾತಾವರಣವನ್ನು ನಿರ್ಮಿಸುತ್ತೇವೆ’ ಎಂದು ಸಭೆಯ ನಂತರ ನವೀನ್ ಹೇಳಿದರು.

ADVERTISEMENT

‘ದುಲೀಪ್ ಟ್ರೋಫಿ ಈಗಾಗಲೇ ಶುರುವಾಗಿದೆ. ಮೊದಲ ಪಂದ್ಯದಲ್ಲಿ ನಾವು ಕಾರ್ಯನಿರ್ವಹಿಸುವುದಿಲ್ಲ. ಆಗಸ್ಟ್ 23ರಿಂದ ನಡೆಯುವ ಪಂದ್ಯದಿಂದ ನಾಡಾ ನೇತೃತ್ವದಲ್ಲಿ ಡೋಪಿಂಗ್ ಟೆಸ್ಟ್ ನಡೆಯಲಿದೆ’ ಎಂದು ಸಾಳ್ವಿ ತಿಳಿಸಿದ್ದಾರೆ.

‘ನಾಡಾ ಉದ್ದೀಪನ ಮದ್ದು ತಡೆ ಅಧಿಕಾರಿಗಳನ್ನು (ಡಿಸಿಒ) ನೇಮಕ ಮಾಡುತ್ತದೆ. ಆದರೆ ಅವರು ವೈದ್ಯಕೀಯ ಪರಿಣತರಲ್ಲ. ಎಂಬಿಬಿಎಸ್ ಆಗಿರುವ ವೈದ್ಯಕೀಯ ಪರಿಣತರನ್ನು ನೇಮಕ ಮಾಡಬೇಕು ಎನ್ನುವುದು ನಮ್ಮ ಬೇಡಿಕೆ. ಅದರಲ್ಲೂ ಉದ್ದೀಪನ ಮದ್ದುಗಳ ಕುರಿತು ಸರಿಯಾದ ತಿಳಿವಳಿಕೆ ಇರುವ ವೈದ್ಯರಿರಬೇಕು’ ಎಂದು ಸಾಳ್ವಿ ಹೇಳಿದ್ದಾರೆ.

ದುಲೀಪ್ ಟ್ರೋಫಿ ಟೂರ್ನಿಯು ಬೆಂಗಳೂರಿನಲ್ಲಿ ಶನಿವಾರದಿಂದ ಆರಂಭವಾಗಿದೆ. ಮುಂದಿನ ಪಂದ್ಯವು ಆಲೂರಿನ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ 24ರಿಂದ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.