
ಈಸ್ಟ್ ಬೆಂಗಾಲ್ (ಬಲ) ಮತ್ತು ಸೌತ್ ಯುನೈಟೆಡ್ ಎಫ್‌ಸಿ ತಂಡದ ಆಟಗಾರನ ನಡುವೆ ಚೆಂಡಿಗಾಗಿ ಪೈಪೋಟಿ
–ಪಿಟಿಐ ಚಿತ್ರ
ಜಮ್ಶೆಡ್‌ಪುರ : ಆತಿಥೇಯ ಜೆಮ್ಯೆಡ್‌ಪುರ ಎಫ್‌ಸಿ ತಂಡವು ಗುರುವಾರ ಡುರಾಂಡ್ ಕಪ್‌ನ 134ನೇ ಆವೃತ್ತಿಯ ಪಂದ್ಯದಲ್ಲಿ 3–2 ಗೋಲುಗಳಿಂದ ತ್ರಿಭುವನ್ ಆರ್ಮಿ ಎಫ್‌ಸಿ ತಂಡವನ್ನು ಮಣಿಸಿ ಶುಭಾರಂಭ ಮಾಡಿತು.
ಇಲ್ಲಿನ ಜೆಆರ್‌ಡಿ ಟಾಟಾ ಕ್ರೀಡಾ ಸಂಕೀರ್ಣದಲ್ಲಿ ನಡೆದ ಸಿ ಗುಂಪಿನ ಮೊದಲ ಪಂದ್ಯದಲ್ಲಿ ಜೆಮ್ಯೆಡ್‌ಪುರ ತಂಡದ ಪರ ಸಾರ್ಥಕ್ (4ನೇ ನಿಮಿಷ), ಮನ್ವಿರ್ (31ನೇ ನಿ) ಮತ್ತು ಬಾರ್ಲಾ (71ನೇ ನಿ) ತಲಾ ಒಂದು ಗೋಲು ಗಳಿಸಿದರು. ನೇಪಾಳದ ತ್ರಿಭುವನ್ ಪರ ನಾಯಕ ಜಾರ್ಜ್ ಕರ್ಕಿ (26ನೇ) ಮತ್ತು ಅನಂತ ತಮಾಂಗ್ (64ನೇ) ಗೋಲು ದಾಖಲಿಸಿದರು.
ಈಸ್ಟ್ ಬೆಂಗಾಲ್‌ಗೆ ಮಣಿದ ಸೌತ್ ಯುನೈಟೆಡ್: ಹಲವು ಬಾರಿಯ ಚಾಂಪಿಯನ್ ಇಮಾಮಿ ಈಸ್ಟ್ ಬೆಂಗಾಲ್ ತಂಡ ಬುಧವಾರ ಆರಂಭವಾದ ಟೂರ್ನಿಯ ‘ಎ’ ಗುಂಪಿನ ಪಂದ್ಯದಲ್ಲಿ ಬೆಂಗಳೂರಿನ ಸೌತ್ ಯುನೈಟೆಡ್ ಎಫ್‌ಸಿ ತಂಡವನ್ನು 5–0 ಗೋಲುಗಳಿಂದ ಸೋಲಿಸಿತು.
ಕರ್ನಾಟಕದ ಸೌತ್ ಯುನೈಟೆಡ್ ತಂಡ ಮೊದಲ ಬಾರಿ ಈ ಟೂರ್ನಿಯಲ್ಲಿ ಆಡಿದ್ದು, ಕೋಲ್ಕತ್ತದ ದೈತ್ಯ ತಂಡಕ್ಕೆ ಹೆಚ್ಚಿನ ಪ್ರತಿರೋಧ ತೋರಲಾಗಲಿಲ್ಲ. ವಿರಾಮದ ವೇಳೆ ಈಸ್ಟ್ ವಿಜೇತ ತಂಡ 3–0 ಮುನ್ನಡೆ ಪಡೆದಿತ್ತು.
ವಿವೇಕಾನಂದ ಯುವಭಾರತಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಈಸ್ಟ್ ಬೆಂಗಾಲ್ ತಂಡದ ಪರ ಲಾಲ್ಚುಂಗ್‌ನುಂಗಾ, ಸಾಲ್ ಕ್ರೆಸ್ಪೊ, ಬಿಪಿನ್ ಸಿಂಗ್, ದಿಮಿಟ್ರಿಯೊಸ್ ದಿಯಾಮಂಟಕೊಸ್ ಮತ್ತು ನಾಯಕ ಮಹೇಶ್ ಸಿಂಗ್ ಗೋಲುಗಳನ್ನು ಗಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.