ADVERTISEMENT

ಕೋಚ್‌ಗಳ ಕೋಪಕ್ಕೆ ಮಣಿದ ಡಿವೈಇಎಸ್‌

ಗುತ್ತಿಗೆ ನವೀಕರಿಸಲು ಒತ್ತಾಯ; ಯವನಿಕಾ ಮುಂದೆ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2020, 19:46 IST
Last Updated 17 ಡಿಸೆಂಬರ್ 2020, 19:46 IST
ಗುತ್ತಿಗೆ ಮುಂದುವರಿಸುವಂತೆ ಆಗ್ರಹಿಸಿ ಡಿವೈಇಎಸ್‌ ಕೋಚ್‌ಗಳು ಯವನಿಕಾ ಮುಂದೆ ಧರಣಿ ನಡೆಸಿದರು
ಗುತ್ತಿಗೆ ಮುಂದುವರಿಸುವಂತೆ ಆಗ್ರಹಿಸಿ ಡಿವೈಇಎಸ್‌ ಕೋಚ್‌ಗಳು ಯವನಿಕಾ ಮುಂದೆ ಧರಣಿ ನಡೆಸಿದರು   

ಬೆಂಗಳೂರು: ರಾಜ್ಯದ ಕ್ರೀಡಾ ಶಾಲೆ ಗಳು ಮತ್ತು ವಸತಿನಿಲಯಗಳಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕೋಚ್‌ಗಳು ಗುರುವಾರ ದಿಢೀರ್ ಪ್ರತಿಭಟನೆ ನಡೆಸಿದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕಚೇರಿ ‘ಯವನಿಕಾ’ದ ಮುಂದೆ ಅವರು ಧರಣಿ ನಡೆಸಿದರು. ಒಬ್ಬರು ಉಪವಾಸ ಸತ್ಯಾಗ್ರಹ ನಡೆಸಿದರು.

ಪ್ರತಿಭಟನಾಕಾರರೊಂದಿಗೆ ಸಂಜೆ ಮಾತುಕತೆ ನಡೆಸಿದ ಅಧಿಕಾರಿಗಳು ಗುತ್ತಿಗೆ ಮುಂದುವರಿಸುವುದಾಗಿ ಭರವಸೆ ನೀಡಿದ್ದರಿಂದ ಧರಣಿ ಕೈಬಿಡಲಾಯಿತು.

ಕರ್ನಾಟಕ ಕ್ರೀಡಾ ಪ್ರಾಧಿಕಾರದ (ಸ್ಯಾಕ್) ಅಡಿ ಕಾರ್ಯನಿರ್ವಹಿಸುವ ಕ್ರೀಡಾಶಾಲೆ ಮತ್ತು ವಸತಿನಿಲಯ ಗಳ ಕೋಚ್‌ಗಳ ಹುದ್ದೆಗಳನ್ನು ಪ್ರತಿವರ್ಷ ನವೀಕರಿಸಲಾಗುತ್ತದೆ. ಅವಧಿ ಮುಗಿದ ನಂತರ ಒಂದು ದಿನ ಅಥವಾ ಒಂದು ವಾರದೊಳಗೆ ಹೊಸ ಆದೇಶ ಪತ್ರ ನೀಡುವುದು ರೂಢಿ. ಕಳೆದ ವರ್ಷ ಅಕ್ಟೋಬರ್‌ನಲ್ಲಿ 28 ಜೂನಿಯರ್ ಕೋಚ್‌ಗಳು, 12 ಫಿಟ್‌ನೆಸ್ ಟ್ರೇನರ್ಸ್‌, ಇಬ್ಬರು ತಾಂತ್ರಿಕ ಅಧಿಕಾರಿಗಳು ಸೇರಿದಂತೆ ಒಟ್ಟು 78 ಕೋಚ್‌ಗಳ ನೇಮಕವಾಗಿತ್ತು. ಅವರ ಪೈಕಿ ಮೂವರು ಭಾರತ ಕ್ರೀಡಾ ಪ್ರಾಧಿಕಾರದಲ್ಲಿ, ಇಬ್ಬರು ವಿಶ್ವವಿದ್ಯಾಲಯದಲ್ಲಿ ಸೇವೆಗೆ ಸೇರಿದರು. ಒಬ್ಬರು ಈಚೆಗೆ ತೀರಿಕೊಂಡರು. ಹೀಗಾಗಿ 72 ಬಾಕಿ ಇದ್ದರು. ಅಕ್ಟೋಬರ್ 15ರಂದು ಅವರ ಅವಧಿ ಮುಗಿದಿತ್ತು. ಆದರೆ ಮರುನೇಮಕಾತಿಗೆ ಮೀನ–ಮೇಷ ಎಣಿಸಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ADVERTISEMENT

‘‍ಕೋವಿಡ್‌–19ರ ಕಾಲದಲ್ಲಿ ಕೆಲಸ ಇಲ್ಲದೆ ತೊಂದರೆಯಾಗಿದೆ. ಈ ಸಂಕಷ್ಟ ಮುಗಿಯುವ ವರೆಗಾದರೂ ಗುತ್ತಿಗೆ ಮುಂದುವರಿಸುವಂತೆ ಆಗ್ರಹಿಸಲಾಗಿತ್ತು. ಹೊಸ ನೇಮಕಾತಿ ಆದೇಶವನ್ನೇ ಕೊಡಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದ್ದರು. ಆದರೆ ಎರಡೂವರೆ ತಿಂಗಳು ಕಳೆ ದರೂ ಆದೇಶ ಪ್ರತಿ ಕೈಸೇರಲಿಲ್ಲ. ಇತ್ತೀಚೆಗೆ ವಿಚಾರಿಸಿದಾಗ ಹಣಕಾಸು ಇಲಾಖೆಯಿಂದ ಮಂಜೂರಾತಿ ಸಿಗಲಿಲ್ಲ ಎಂದು ಹೇಳಿದರು.

ಅದು ಸುಳ್ಳು ಎಂದು ನಂತರ ಗೊತ್ತಾಯಿತು. ಇಲಾಖೆಯ ಉಸಾಬರಿ ಬೇಡ, ಹೊರಗೆ ಕೆಲಸ ಮಾಡೋಣ ಎಂದರೆ ಕ್ಲಬ್‌ಗಳಾಗಲಿ ಖಾಸಗಿ ಶಾಲೆಗಳಾಗಲಿ ಕಾರ್ಯನಿರ್ವಹಿಸುತ್ತಿಲ್ಲ. ಹೀಗಾಗಿ ಜೀವನ ನಿರ್ವಹಣೆ ಕಷ್ಟವಾಗಿದೆ. ಬೇರೆ ದಾರಿ ಇಲ್ಲದೆ ಪ್ರತಿಭಟನೆಗೆ ಇಳಿಯಬೇಕಾಗಿ ಬಂತು’ ಎಂದು ಧರಣಿನಿರತರು ‘ಪ್ರಜಾವಾಣಿ‘ಗೆ ವಿವರಿಸಿದರು.

‘ಕೆಲವು ದಿನಗಳಿಂದ ಮನೆಯಲ್ಲಿ ಉಪವಾಸ. ಅದನ್ನೇ ಇಲ್ಲಿ ಮುಂದುವರಿಸುತ್ತಿದ್ದೇನೆ. ಪದೇ ಪದೇ ಮನವಿ ಸಲ್ಲಿಸಿದರೂ ಪ್ರಯೋಜನ ಆಗಲಿಲ್ಲ’ ಎಂದು ಉಪವಾಸ ಸತ್ಯಾಗ್ರಹ ಮಾಡಿದ್ದ ಲಕ್ಷ್ಮೇಶ್ ತಿಳಿಸಿದರು.

50 ಮಂದಿ ಮರುನೇಮಕಕ್ಕೆ ನಿರ್ಧಾರ
ಪ್ರತಿಭಟನಾಕಾರರ ಜೊತೆ ಇಲಾಖೆಯ ಆಯುಕ್ತ ಕೆ.ಶ್ರೀನಿವಾಸ ಅವರು ಸಂಜೆ ಮಾತುಕತೆ ನಡೆಸಿದರು. 50 ಮಂದಿಗೆ ಕೂಡಲೇ ನೇಮಕಾತಿ ಆದೇಶ ನೀಡುವುದಾಗಿಯೂ ಉಳಿದವರನ್ನು ಹಂತಹಂತವಾಗಿ ಮುಂದುವರಿಸುವುದಾಗಿಯೂ ಭರವಸೆ ನೀಡಿದರು. ಇದಕ್ಕೆ ಪ್ರತಿಭಟನಾಕಾರರು ಒಪ್ಪಿಕೊಂಡರೂ ಆದೇಶ ಪ್ರತಿ ಕೈಸೇರುವ ವರೆಗೆ ಧರಣಿ ಮುಂದುವರಿಸಲು ನಿರ್ಧರಿಸಿದರು. ಉಪವಾಸ ಕೈಬಿಡಲಾಯಿತು. ಮತ್ತೊಂದು ಸುತ್ತಿನ ಮಾತುಕತೆಯ ನಂತರ ಆದೇಶ ಪ್ರತಿ ನೀಡಲಾಯಿತು. ಹೀಗಾಗಿ ಪ್ರತಿಭಟನೆ ಕೈಬಿಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.