ADVERTISEMENT

ಒಲಿಂಪಿಕ್ಸ್‌ನಲ್ಲಿ ಫವಾದ್‌ ಮಿರ್ಜಾಗೆ ಸಿನೊರ್ ಮೆಡಿಕಾಟ್‌ ಅಶ್ವ

ಪಿಟಿಐ
Published 20 ಜುಲೈ 2021, 11:43 IST
Last Updated 20 ಜುಲೈ 2021, 11:43 IST
ಫವಾದ್‌ ಮಿರ್ಜಾ– ಎಎಫ್‌ಪಿ ಚಿತ್ರ
ಫವಾದ್‌ ಮಿರ್ಜಾ– ಎಎಫ್‌ಪಿ ಚಿತ್ರ   

ಬೆಂಗಳೂರು: ಭಾರತದ ಈಕ್ವೆಸ್ಟ್ರಿಯನ್ ಪಟು ಫವಾದ್‌ ಮಿರ್ಜಾ, ಒಲಿಂಪಿಕ್ಸ್‌ನಲ್ಲಿ ಸಿನೊರ್ ಮೆಡಿಕಾಟ್ ಕುದುರೆಯೊಂದಿಗೆ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ. ಈ ಹಿಂದೆ ಅವರು ‘ಡಯಾರಾ ಫೋರ್‌‘ ಅಶ್ವದೊಂದಿಗೆ ಟೋಕಿಯೊಗೆ ತೆರಳುವುದಾಗಿ ಪ್ರಕಟಿಸಿದ್ದರು.

ಸಿನೊರ್‌ ಮೆಡಿಕಾಟ್ ಕುದುರೆಯೊಂದಿಗೆ ಫವಾದ್‌, 2018ರ ಏಷ್ಯನ್ ಕ್ರೀಡಾಕೂಟದಲ್ಲಿ ಎರಡು ಬೆಳ್ಳಿ ಪದಕಗಳನ್ನು ಗೆದ್ದುಕೊಂಡಿದ್ದರು.

‘ಮಿಕಿ ಎಂದು ಪ್ರೀತಿಯಿಂದ ಕರೆಯಲಾಗುವ ಸಿನೊರ್ ಮೆಡಿಕಾಟ್‌ ಅಶ್ವವು ಏಷ್ಯನ್ ಗೇಮ್ಸ್‌ನಲ್ಲಿ ಫವಾದ್ ಅವರಿಗೆ ಎರಡು ಬೆಳ್ಳಿ ಪದಕ ಗೆದ್ದುಕೊಳ್ಳಲು ನೆರವಾಗಿದೆ. ಈ ಕುದುರೆಯೊಂದಿಗೆ ಫವಾದ್‌ಗೆ ಭಾವನಾತ್ಮಕ ಬಂಧವಿದೆ‘ ಎಂದು ಎಂಬೆಸಿ ಗ್ರೂಪ್‌ ನೀಡಿರುವ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಎಂಬೆಸಿ ಗ್ರೂ‍ಪ್ ಫವಾದ್ ಅವರಿಗೆ ನೆರವು ನೀಡುತ್ತಿದೆ.

ADVERTISEMENT

‘ಫವಾದ್ ಈ ಮೊದಲು ಡಯಾರಾ ಫೋರ್ ಕುದುರೆಯನ್ನು ಆಯ್ಕೆ ಮಾಡಿದ್ದರು. ಆದರೆ ಕೆಲವು ವಾರಗಳ ಹಿಂದೆ ಸ್ಪರ್ಧೆ ಮತ್ತು ತರಬೇತಿಯ ಅವಧಿಯಲ್ಲಿ ಈ ಕುದುರೆ ಹೆಚ್ಚು ಒತ್ತಡಕ್ಕೆ ಒಳಗಾಗುತ್ತಿದೆ ಎಂದು ಅವರಿಗೆ ಎನಿಸಿತ್ತು. ಹೀಗಾಗಿ ಸಿನೊರ್ ಮೆಡಿಕಾಟ್‌ನೊಂದಿಗೆ ಟೋಕಿಯೊಗೆ ತೆರಳಲು ನಿರ್ಧರಿಸಿದರು‘ ಎಂದು ಪ್ರಕಟಣೆ ಹೇಳಿದೆ.

ಸಿನೊರ್ ಮೆಡಿಕಾಟ್‌ ಕುದುರೆಯು ಜರ್ಮನಿಯ ಅಚೆನ್‌ನಲ್ಲಿ ಕ್ವಾರಂಟೈನ್ ಅವಧಿ ಪೂರ್ಣಗೊಳಿಸಿದ್ದು, ಈಗಾಗಲೇ ಟೋಕಿಯೊ ತಲುಪಿದೆ. ಕುದುರೆಯೊಂದಿಗೆ ಅದರ ಪಾಲಕ ಜೊಹಾನ್ನಾ ಫೋನನ್‌, ಪಶುವೈದ್ಯ ಗ್ರಿಗರಿಯೊಸ್ ಮಾಲೀಸ್ ಹಾಗೂ ಫಿಸಿಯೊಥೆರಪಿಸ್ಟ್ ವೆರೊನಿಕಾ ಸಿಂಜ್ ಕೂಡ ತೆರಳಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಒಲಿಂಪಿಕ್ಸ್‌ನಲ್ಲಿ ಫವಾದ್ ಅವರ ಅಭಿಯಾನ ಇದೇ 29ರಂದು ಆರಂಭವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.