ಅರ್ಜುನ್ ಇರಿಗೇಶಿ
-ಪಿಟಿಐ ಚಿತ್ರ
ಸ್ಟಾವೆಂಜರ್ (ನಾರ್ವೆ): ವಿಶ್ವ ಚಾಂಪಿಯನ್ ಡಿ.ಗುಕೇಶ್ ಮತ್ತೊಂದು ಸೋಲನ್ನು ಕಂಡರು. ನಾರ್ವೆ ಚೆಸ್ ಟೂರ್ನಿಯ ಎರಡನೇ ಸುತ್ತಿನ ಪಂದ್ಯದಲ್ಲಿ ಸ್ವದೇಶದ ಅರ್ಜುನ್ ಇರಿಗೇಶಿ ಅವರು ಗುಕೇಶ್ ಅವರ ರಕ್ಷಣಾ ಕೋಟೆಯನ್ನು ಮುರಿದು ಅಮೆರಿಕದ ಹಿಕಾರು ನಕಾಮುರ ಜೊತೆ ಜಂಟಿಯಾಗಿ ಅಗ್ರಸ್ಥಾನ ಹಂಚಿಕೊಂಡಿದ್ದಾರೆ.
ಇರಿಗೇಶಿ ಮತ್ತು ನಕಾಮುರ ತಲಾ 4.5 ಪಾಯಿಂಟ್ಸ್ ಗಳಿಸಿದ್ದಾರೆ. ನಕಾಮುರ ಮತ್ತೊಂದು ಪಂದ್ಯದಲ್ಲಿ ವಿಶ್ವದ ಅಗ್ರಮಾನ್ಯ ಆಟಗಾರ ಮ್ಯಾಗ್ನಸ್ ಕಾರ್ಲ್‌ಸನ್ (4) ಅವರಿಗೆ ಸೋಲುಣಿಸಿದರು. ಮೂರನೇ ಕ್ರಮಾಂಕದ ಫ್ಯಾಬಿಯಾನೊ ಕರುವಾನ (3) ಮತ್ತೊಂದು ಪಂದ್ಯದಲ್ಲಿ ಚೀನಾದ ವೀ ಯಿ (1) ಅವರನ್ನು ಮಣಿಸಿದರು.
ಈ ಟೂರ್ನಿಯು ಆರು ಸುತ್ತುಗಳನ್ನು (ಡಬಲ್ ರೌಂಡ್ ರಾಬಿನ್ ಲೀಗ್) ಹೊಂದಿದ್ದು ಎರಡನೇ ಸುತ್ತಿನ ನಂತರ ಗುಕೇಶ್ ತಳದಲ್ಲಿದ್ದಾರೆ.
ವಿಶ್ವ ಕ್ರಮಾಂಕದಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಇರಿಗೇಶಿ, ಈ ವರ್ಷದ ಆರಂಭದಲ್ಲಿ ನಡೆದ ಟಾಟಾ ಸ್ಟೀಲ್ ಚೆಸ್ ಟೂರ್ನಿಯಲ್ಲೂ, ಪ್ರಶಸ್ತಿ ಗೆಲ್ಲುವಂತೆ ಕಂಡಿದ್ದ ಗುಕೇಶ್ ಅವರಿಂದ ಗೆಲುವನ್ನು ‘ಕಸಿದುಕೊಂಡಿದ್ದರು’. ಈ ಬಾರಿ ನಾಲ್ಕು ಗಂಟೆಗಳ ದೀರ್ಘ ಪಂದ್ಯವನ್ನು 62 ನಡೆಗಳಲ್ಲಿ ಗೆದ್ದರು.
ಗುಕೇಶ್ ಆರಂಭದ ನಡೆಗಳನ್ನು ನಿಧಾನವಾಗಿ ಇರಿಸಿದ್ದರಿಂದ 17 ನಡೆಗಳಾಗುವಷ್ಟರಲ್ಲಿ ಸಮಯದ ಒತ್ತಡಕ್ಕೆ ಸಿಲುಕಿದ್ದರು. ಇರಿಗೇಶಿ ಅವರು ‘ಕ್ಲಾಕ್’ನಲ್ಲಿ ಒಂದು ಗಂಟೆಯಷ್ಟು ಹೆಚ್ಚು ಅವಧಿ ಹೊಂದಿದ್ದರು.
ಮೂರನೇ ಸುತ್ತಿನಲ್ಲಿ ಇರಿಗೇಶಿ, ಅಮೆರಿಕದ ಫ್ಯಾಬಿಯಾನೊ ಕರುವಾನ ಅವರನ್ನು ಎದುರಿಸಲಿದ್ದಾರೆ. ಗುರುವಾರ 19ನೇ ವರ್ಷಕ್ಕೆ ಕಾಲಿಡಲಿರುವ ಗುಕೇಶ್ ಅವರ ಎದುರಾಳಿ ನಕಾಮುರ.
ಹಾಲಿ ಚಾಂಪಿಯನ್ ಕಾರ್ಲ್‌ಸನ್ ಮತ್ತು ನಕಾಮುರ ನಡುವೆ ಕ್ಲಾಸಿಕಲ್ ಪಂದ್ಯ ಡ್ರಾ ಆಯಿತು. ‘ಆರ್ಮ್‌ಗೆಡನ್’ನಲ್ಲಿ ನಕಾಮುರ ಜಯಗಳಿಸಿದರು.
ಹಂಪಿ, ವೈಶಾಲಿಗೆ ಸೋಲು: ಮಹಿಳೆಯರ ವಿಭಾಗದಲ್ಲಿ ಉಕ್ರೇನಿನ ಅನ್ನಾ ಮುಝಿಚುಕ್ (4.5), ಎರಡು ಬಾರಿಯ ವಿಶ್ವ ರ‍್ಯಾಪಿಡ್ ಚಾಂಪಿಯನ್ ಕೋನೇರು ಹಂಪಿ (3) ಅವರನ್ನು ಮಣಿಸಿದರು. ಆರಂಭದಲ್ಲಿ ಉತ್ತಮ ವ್ಯೂಹ ರಚಿಸಿದ ಉಕ್ರೇನ್ ಆಟಗಾರ್ತಿ ಎದುರಾಳಿಯ ಮೇಲೆ ಒತ್ತಡ ಹೆಚ್ಚಿಸಿದರು.
ಇತರ ಎರಡು ಪಂದ್ಯಗಳು ಡ್ರಾ ಆದವು. ಆರ್ಮ್‌ಗೆಡನ್‌ನಲ್ಲಿ ಚೀನಾದ ಟೀ ಲಿಂಗ್ಜೀ (3) ಅವರು ಆರ್.ವೈಶಾಲಿ ಅವರನ್ನು ಸೋಲಿಸಿದರೆ, ಸ್ಪೇನ್‌ನ ಸಾರಸದತ್ ಖಾಡೆಮಲ್ಶಾರಿಯಾ (2), ಚೀನಾದ ಜು ವೆನ್ಜುನ್ (2.5) ಅವರನ್ನು ಮಣಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.