ADVERTISEMENT

ಪ್ರೊ ಲೀಗ್‌ ವಿಸ್ತರಣೆ ಒಂದು ಅವಕಾಶ: ವರುಣ್‌ ಕುಮಾರ್‌

ಪಿಟಿಐ
Published 27 ಏಪ್ರಿಲ್ 2020, 19:30 IST
Last Updated 27 ಏಪ್ರಿಲ್ 2020, 19:30 IST
ವರುಣ್‌ ಕುಮಾರ್‌ (ಮಧ್ಯೆ).
ವರುಣ್‌ ಕುಮಾರ್‌ (ಮಧ್ಯೆ).   

ಬೆಂಗಳೂರು: ಎಫ್‌ಐಎಚ್‌ ಪ್ರೊ ಲೀಗ್‌ ಹಾಕಿ ಒಂದು ವರ್ಷ ವಿಸ್ತರಣೆಯಾಗಿರುವುದು ಭಾರತ ಹಾಕಿ ತಂಡಕ್ಕೆ ದೊರೆತ ಒಂದು ಉತ್ತಮ ಅವಕಾಶ ಎಂದು ತಂಡದ ಡಿಫೆನ್ಸ್ ಆಟಗಾರ ವರುಣ್‌ ಕುಮಾರ್‌ ಹೇಳಿದ್ದಾರೆ. ಇದರಿಂದ ಟೋಕಿಯೊ ಒಲಿಂಪಿಕ್ಸ್‌ಗೂ ಮುನ್ನ ವಿಶ್ವದ ಪ್ರಮುಖ ತಂಡಗಳೊಂದಿಗೆ ಸೆಣಸಲು ಸಾಧ್ಯವಾಗುತ್ತದೆ ಎಂದು ಸೋಮವಾರ ಅವರು ಅಭಿಪ್ರಾಯಪಟ್ಟಿದ್ದಾರೆ.

ಎರಡನೇ ಆವೃತ್ತಿಯ ಪ್ರೊ ಲೀಗ್‌ ಅನ್ನು ಕೋವಿಡ್‌–19 ಪಿಡುಗಿನ ಹಿನ್ನೆಲೆಯಲ್ಲಿ ಅಂತರರಾಷ್ಟ್ರೀಯ ಹಾಕಿ ಫೆಡರೇಷನ್‌ (ಎಫ್‌ಐಎಚ್‌) 2021ರ ಜೂನ್‌ವರೆಗೆ ವಿಸ್ತರಿಸಿದೆ.

‘ಒಲಿಂಪಿಕ್ಸ್‌ ಮುಂದೂಡಿಕೆಯಾಗುವ ಜೊತೆಗೆ ನಮ್ಮ ತಂಡದ ವಾರ್ಷಿಕ ವೇಳಾಪಟ್ಟಿ ಸೇರಿದಂತೆ ಬದಲಾವಣೆಗಳು ಘಟಿಸಿದೆ. ಅಂಗಣದಲ್ಲಿ ನಾವು ಯಾವಾಗ ತರಬೇತಿ ನಡೆಸುತ್ತೇವೆ ಎಂಬುದು ಇನ್ನೂ ಖಚಿತವಿಲ್ಲ. ಸ್ಪರ್ಧಾತ್ಮಕ ಹಾಕಿಗೆ ಯಾವಾಗ ಮರಳುತ್ತೇವೆ ಎಂಬುದನ್ನು ಹೇಳಲು ಸಾಧ್ಯವಿಲ್ಲ’ ಎಂದು ವರುಣ್‌ ಹೇಳಿದ್ದಾರೆ.

ADVERTISEMENT

‘ಪ್ರೊ ಲೀಗ್‌ ವಿಸ್ತರಣೆ ಮಾಡಿರುವ ಎಫ್‌ಐಎಚ್‌ ನಿರ್ಧಾರದಿಂದ ನಮಗೆ ಒಳ್ಳೆಯ ಅವಕಾಶ ಲಭಿಸಿದೆ. ಜಗತ್ತಿನ ಶ್ರೇಷ್ಠ ತಂಡಗಳ ವಿರುದ್ಧ ಸೆಣಸುವುದರೊಂದಿಗೆ ನಮ್ಮ ಸಾಮರ್ಥ್ಯವನ್ನು ಇನ್ನಷ್ಟು ಸುಧಾರಿಸಿಕೊಳ್ಳಬಹುದು. ಹಾಗೆಯೇ ಒಲಿಂಪಿಕ್ಸ್‌ನಲ್ಲಿ ಉತ್ತಮ ಆಟವನ್ನು ಆಡಬಹುದು’ ಎಂಬುದು ವರುಣ್‌ ಅವರ ಇಂಗಿತ.

ಬಲಗೈ ಗಾಯದಿಂದ ಬಳಲುತ್ತಿದ್ದ ವರುಣ್‌, ಒಲಿಂಪಿಕ್ಸ್‌ ಅರ್ಹತಾ ಸುತ್ತಿನ ಪಂದ್ಯಗಳಲ್ಲಿ ಕಣಕ್ಕಿಳಿದಿರಲಿಲ್ಲ. ಟೋಕಿಯೋ ಕೂಟಕ್ಕೆ ತೆರಳುವ 16 ಮಂದಿಯ ತಂಡದಲ್ಲಿ ಸ್ಥಾನ ಗಿಟ್ಟಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.