ADVERTISEMENT

ಏಷ್ಯಾಡ್‌ ಈಕ್ವೆಸ್ಟ್ರಿಯನ್‌: ಫವಾದ್‌ಗೆ 'ಡಬಲ್' ಧಮಾಕಾ; ಭಾರತಕ್ಕೆ ಬೆಳ್ಳಿ ಬೆಳಗು

ಮೂರೂವರೆ ದಶಕಗಳ ನಂತರ ಮೊದಲ ವೈಯಕ್ತಿಕ ಪದಕ ಗೆದ್ದ ಬೆಂಗಳೂರಿನ ಸವಾರ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2018, 16:39 IST
Last Updated 26 ಆಗಸ್ಟ್ 2018, 16:39 IST
ವೈಯಕ್ತಿಕ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದ ಫವಾದ್ ಮಿರ್ಜಾ ಕ್ರಾಸ್ ಕಂಟ್ರಿ ಸ್ಪರ್ಧೆಯಲ್ಲಿ ಮುನ್ನುಗ್ಗಿದ ರೀತಿ  -ಎಎಫ್‌ಪಿ ಚಿತ್ರ
ವೈಯಕ್ತಿಕ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದ ಫವಾದ್ ಮಿರ್ಜಾ ಕ್ರಾಸ್ ಕಂಟ್ರಿ ಸ್ಪರ್ಧೆಯಲ್ಲಿ ಮುನ್ನುಗ್ಗಿದ ರೀತಿ -ಎಎಫ್‌ಪಿ ಚಿತ್ರ   

ಜಕಾರ್ತ: ಏಷ್ಯನ್‌ ಕ್ರೀಡಾಕೂಟದ ಈಕ್ವೆಸ್ಟ್ರಿಯನ್‌ನ ವೈಯಕ್ತಿಕ ವಿಭಾಗದಲ್ಲಿ ಮೂರೂವರೆ ದಶಕಗಳಿಂದ ಪದಕದ ಬರ ಅನುಭವಿಸುತ್ತಿದ್ದ ಭಾರತ ಭಾನುವಾರ ಹೆಮ್ಮೆಯಿಂದ ಬೀಗಿತು. ಬೆಳಿಗ್ಗೆ ನಡೆದ ಈವೆಂಟಿಂಗ್‌ ವಿಭಾಗದಲ್ಲಿ ಬೆಂಗಳೂರಿನ ಕುದುರೆ ಸವಾರ ಫವಾದ್ ಮಿರ್ಜಾ ಬೆಳ್ಳಿ ಗೆದ್ದು ಸಂಭ್ರಮಿಸಿದರು.

ಫೈನಲ್‌ನಲ್ಲಿ ಜಪಾನ್‌ನ ಮತ್ತು ಚೀನಾ ಕ್ರೀಡಾಪಟುಗಳಿಂದ ಪ್ರಬಲ ಸ್ಪರ್ಧೆ ಎದುರಿಸಿದ ಮಿರ್ಜಾ ಅವರು ಸೇಗ್ನೆರ್‌ ಮೆಡಿಕೋಟ್ ಕುದುರೆಯೇರಿ ಮೋಡಿ ಮಾಡಿದರು. ಅವರು 26.40 ಸೆಕೆಂಡುಗಳಲ್ಲಿ ಗುರಿ ಸೇರಿದರು. ಈ ಮೂಲಕ ಮೂರೂವರೆ ದಶಕಗಳ ನಂತರ ಈ ವಿಭಾಗದಲ್ಲಿ ಪದಕ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಗೆ ತಮ್ಮದಾಗಿಸಿಕೊಂಡರು. 1982ರಲ್ಲಿ ಭಾರತದ ರಘುವೀರ್‌ ಸಿಂಗ್‌ ಚಿನ್ನ ಗೆದ್ದಿದ್ದರು.

ಇವೆಂಟಿಂಗ್ ತಂಡ ವಿಭಾಗದಲ್ಲೂ ಬೆಳ್ಳಿ ಗೆದ್ದ ಫವಾದ್‌ ಭಾರತಕ್ಕೆ ‘ಡಬಲ್‌’ ಪದಕಗಳ ಕೊಡುಗೆ ನೀಡಿದರು. ಜಕಾರ್ತ ಅಂತರರಾಷ್ಟ್ರೀಯ ಈಕ್ವೆಸ್ಟ್ರಿಯನ್ ಪಾರ್ಕ್‌ನಲ್ಲಿ ನಡೆದ ಸ್ಪರ್ಧೆಯ ತಂಡ ವಿಭಾಗದಲ್ಲಿ ಫವಾದ್‌ ಅವರೊಂದಿಗೆ ರಾಕೇಶ್ ಕುಮಾರ್, ಆಶಿಶ್ ಮಲಿಕ್‌ ಮತ್ತು ಜಿತೇಂದರ್ ಸಿಂಗ್‌ ಪದಕ ಗೆದ್ದರು.

ADVERTISEMENT

ವೈಯಕ್ತಿಕ ವಿಭಾಗದಲ್ಲಿ ಫವಾದ್‌ ಅವರಿಗೆ ಜಪಾನ್‌ನ ಒಯಿವಾ ಯೊಶಿಯಾಕಿ ಮತ್ತು ಚೀನಾದ ಹುವಾ ತಿಯಾನ್ ಅಲೆಕ್ಸ್‌ ಅವರಿಂದ ತೀವ್ರ ಪೈಪೋಟಿ ಎದುರಿಸಿದ ಫವಾದ್‌ ಚಿನ್ನ ಗೆದ್ದ ಜಪಾನ್‌ನ ಸವಾರನ ಸವಾಲು ಮೆಟ್ಟಿ ನಿಲ್ಲಲು ಆಗದಿದ್ದರೂ ಚೀನಾದ ಸವಾರನ್ನು ಹಿಂದಿಕ್ಕಿದರು. ಭಾರತದ ರಾಕೇಶ್ ಕುಮಾರ್ 10ನೇ ಸ್ಥಾನ ಗಳಿಸಿದರೆ ಆಶಿಶ್ ಮಲಿಕ್ ಮತ್ತು ಜಿತೇಂದರ್‌ ಸಿಂಗ್ ಕ್ರಮವಾಗಿ 16 ಮತ್ತು 20ನೇ ಸ್ಥಾನಕ್ಕೆ ಕುಸಿದು ನಿರಾಸೆಗೊಂಡರು.

ಆರಂಭದಿಂದಲೇ ಭರವಸೆಯ ಓಟ: ಮೂರು ದಿನಗಳ ಸ್ಪರ್ಧೆಯ ಆರಂಭದಿಂದಲೇ ಫವಾದ್ ಪದಕದ ಭರವಸೆ ಮೂಡಿಸಿದ್ದರು. ಡ್ರೆಸೇಜ್ ಮತ್ತು ಕ್ರಾಸ್ ಕಂಟ್ರಿ ವಿಭಾಗದಲ್ಲಿ 22.40 ಸ್ಕೋರು ಕಲೆ ಹಾಕಿದ್ದ ಅವರು ಭಾನುವಾರ ನಡೆದ ಅಂತಿಮ ಸುತ್ತಿನ ಜಂಪಿಂಗ್‌ನಲ್ಲಿ 26.40 ಸ್ಕೋರು ಗಳಿಸಿದರು.

ಫವಾದ್ ಮಿರ್ಜಾ
ವಯಸ್ಸು: 26 ವರ್ಷ
ಸ್ಥಳ: ಬೆಂಗಳೂರು
ಕುದುರೆ ಸವಾರಿ ಆರಂಭ: 5ನೇ ವರ್ಷ
ಕೋಚ್‌: ಬೆಟಿನಾ ಹಾಯ್ (ಜರ್ಮನಿ)
ಎಫ್‌ಇಐ ವಿಶ್ವ ರ‍್ಯಾಂಕಿಂಗ್‌: 219

ವೈಯಕ್ತಿಕ ಈವೆಂಟಿಂಗ್ ವಿಭಾಗ

ಒಯಿವಾ ಯೊಶಿಯಾಕಿ (ಜಪಾನ್‌): ಚಿನ್ನ

ಸ್ಕೋರು: 22.70

ಫವಾದ್ ಮಿರ್ಜಾ: ಬೆಳ್ಳಿ

ಸ್ಕೋರು: 26.40

ಹುವಾ ತಿಯಾನ್ ಅಲೆಕ್ಸ್‌ (ಚೀನಾ): ಕಂಚು

ಸ್ಕೋರು: 27.10

****

ಇವೆಂಟಿಂಗ್ ತಂಡ ವಿಭಾಗ

ಜಪಾನ್‌ (ಯುಮಿರಾ, ಹಿರಾನಾಗ, ಕಿಟಾಜಿಮಾ, ಯೀಶಿಯಾಕಿ): ಚಿನ್ನ

ಸ್ಕೋರು: 82.40

ಭಾರತ (ಫವಾದ್ ಮಿರ್ಜಾ, ರಾಕೇಶ್ ಕುಮಾರ್, ಆಶಿಶ್ ಮಲಿಕ್‌ ಮತ್ತು ಜಿತೇಂದರ್ ಸಿಂಗ್‌): ಬೆಳ್ಳಿ

ಸ್ಕೋರು: 121.30

ಥಾಯ್ಲೆಂಡ್‌ (ಚವಟನಾಂಟ್‌, ಖುಂಜನ್‌, ಸಮ್ರಾನ್‌): ಕಂಚು

ಸ್ಕೋರು: 126.70

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.