ADVERTISEMENT

ಸೈಯ್ಯದ್‌ ಮೋದಿ ಬ್ಯಾಡ್ಮಿಂಟನ್ ಟೂರ್ನಿ: ಸೆಮಿಫೈನಲ್‌ಗೆ ಸಿಂಧು, ಸೇನ್‌

ಆಯುಷ್‌ ಶೆಟ್ಟಿಗೆ ನಿರಾಸೆ

ಪಿಟಿಐ
Published 29 ನವೆಂಬರ್ 2024, 13:17 IST
Last Updated 29 ನವೆಂಬರ್ 2024, 13:17 IST
<div class="paragraphs"><p>ಭಾರತದ ಪಿ.ವಿ. ಸಿಂಧು </p></div>

ಭಾರತದ ಪಿ.ವಿ. ಸಿಂಧು

   

–ಪಿಟಿಐ ಚಿತ್ರ

ಲಖನೌ: ಪ್ರಸಕ್ತ ಋತುವಿನಲ್ಲಿ ಪ್ರಶಸ್ತಿಯ ಬರ ಎದುರಿಸುತ್ತಿರುವ ಭಾರತದ ಅಗ್ರಮಾನ್ಯ ಬ್ಯಾಡ್ಮಿಂಟನ್‌ ತಾರೆಯರಾದ ಪಿ.ವಿ. ಸಿಂಧು ಮತ್ತು ಲಕ್ಷ್ಯ ಸೇನ್‌ ಅವರು ಇಲ್ಲಿ ನಡೆಯುತ್ತಿರುವ ಸೈಯ್ಯದ್‌ ಮೋದಿ ಅಂತರರಾಷ್ಟ್ರೀಯ ಸೂಪರ್ 300 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕ್ರಮವಾಗಿ ಮಹಿಳೆಯರ ಸಿಂಗಲ್ಸ್‌ ಮತ್ತು ಪುರುಷರ ಸಿಂಗಲ್ಸ್‌ನಲ್ಲಿ ನಾಲ್ಕರ ಘಟ್ಟಕ್ಕೆ ಲಗ್ಗೆ ಹಾಕಿದರು.

ADVERTISEMENT

ಅಗ್ರ ಶ್ರೇಯಾಂಕದ 29 ವರ್ಷ ವಯಸ್ಸಿನ ಸಿಂಧು 21-15, 21-17ರಿಂದ ಚೀನಾದ ಚೀನಾದ ದಾಯಿ ವಾಂಗ್ ಅವರನ್ನು ನೇರ ಗೇಮ್‌ಗಳಲ್ಲಿ ಹಿಮ್ಮೆಟ್ಟಿಸಿದರು. ಎರಡು ಬಾರಿಯ ಚಾಂಪಿಯನ್‌ (2017, 2022) ಸಿಂಧು ಈ ಪಂದ್ಯವನ್ನು ಜಯಿಸಲು 48 ನಿಮಿಷ ತೆಗೆದುಕೊಂಡರು. 18ನೇ ಕ್ರಮಾಂಕ ಹೊಂದಿರುವ ಅವರು ಸೆಮಿಫೈನಲ್‌ನಲ್ಲಿ ಸ್ವದೇಶದ ಉನ್ನತಿ ಹೂಡಾ ಅವರನ್ನು ಎದುರಿಸಲಿದ್ದಾರೆ.

2021ರ ವಿಶ್ವ ಚಾಂಪಿಯನ್‌ಷಿಪ್‌ ಕಂಚು ವಿಜೇತ ಸೇನ್‌ ಕ್ವಾರ್ಟರ್‌ ಫೈನಲ್‌ ಹಣಾಹಣಿಯಲ್ಲಿ  21-8, 21-19ರಿಂದ ಸ್ವದೇಶದ ಮೀರಬಾ ಲುವಾಂಗ್ ಅವರನ್ನು ನಿರಾಯಾಸವಾಗಿ ಮಣಿಸಿ ಮುನ್ನಡೆದರು. ಅಗ್ರ ಶ್ರೇಯಾಂಕದ ಸೇನ್‌ ಪಂದ್ಯದುದ್ದಕ್ಕೂ ಪ್ರಾಬಲ್ಯ ಮೆರೆದು, 41 ನಿಮಿಷದಲ್ಲಿ ಗೆಲುವು ಸಾಧಿಸಿದರು. 23 ವರ್ಷ ವಯಸ್ಸಿನ ಸೇನ್‌ ಮುಂದಿನ ಸುತ್ತಿನಲ್ಲಿ ಜಪಾನ್‌ನ ಶೋಗೊ ಒಗಾವಾ ಅವರ ಸವಾಲನ್ನು ಎದುರಿಸುವರು.

2022ರ ಒಡಿಶಾ ಓಪನ್‌ ಚಾಂಪಿಯನ್‌ ಹೂಡಾ ಎಂಟರ ಘಟ್ಟದ ಪಂದ್ಯದಲ್ಲಿ  21-16, 21-9ರಿಂದ ಅಮೆರಿಕದ ಇಶಿಕಾ ಜೈಸ್ವಾಲ್ ಅವರನ್ನು ಮಣಿಸಿದರು. 

ಮಹಿಳೆಯರ ಡಬಲ್ಸ್‌ನಲ್ಲಿ ಎರಡನೇ ಶ್ರೇಯಾಂಕದ ಟ್ರೀಸಾ ಜೋಳಿ ಮತ್ತು ಗಾಯತ್ರಿ ಗೋಪಿಚಂದ್‌ ಅವರು ಇಲ್ಲಿ ಗೆಲುವಿನ ಓಟ ಮುಂದುವರಿಸಿದರು. ಚೀನಾದಲ್ಲಿ ನಡೆಯಲಿರುವ ಋತುವಿನ ಅಂತ್ಯದ ವಿಶ್ವ ಟೂರ್ ಫೈನಲ್‌ಗೆ ಅರ್ಹತೆ ಗಳಿಸಿರುವ ಈ ಜೋಡಿಯು ಎಂಟರ ಘಟ್ಟದ ಪಂದ್ಯದಲ್ಲಿ 21-8, 21-15ರಿಂದ ಆರನೇ ಶ್ರೇಯಾಂಕದ ಗೋ ಪೇ ಕೀ ಮತ್ತು ಟಿಯೋಹ್ ಮೇ ಕ್ಸಿಂಗ್ ಅವರನ್ನು ಸೋಲಿಸಿ ಸೆಮಿಫೈನಲ್‌ ಪ್ರವೇಶಿಸಿತು.

ಮಿಶ್ರ ಡಬಲ್ಸ್‌ನಲ್ಲಿ ಐದನೇ ಶ್ರೇಯಾಂಕದ ಧ್ರುವ ಕಪಿಲಾ ಮತ್ತು ತನಿಶಾ ಕ್ರಾಸ್ಟೊ ಜೋಡಿಯೂ ನಾಲ್ಕರ ಘಟ್ಟಕ್ಕೆ ಮುನ್ನಡೆಯಿತು. ಈ ಜೋಡಿ 21-16, 21-13ರಿಂದ ಮಲೇಷ್ಯಾದ ಲೂ ಬಿಂಗ್ ಕುನ್ ಮತ್ತು ಹೋ ಲೊ ಇ ಜೋಡಿಯನ್ನು ಮಣಿಸಿತು.

ಆಯುಷ್‌ ಶೆಟ್ಟಿಗೆ ನಿರಾಸೆ: 2023ರ ವಿಶ್ವ ಜೂನಿಯರ್‌ ಚಾಂಪಿಯನ್‌ಷಿಪ್‌ನ ಕಂಚು ವಿಜೇತ, ಕನ್ನಡಿಗ ಆಯುಷ್‌ ಶೆಟ್ಟಿ ನಿರಾಸೆ ಅನುಭವಿಸಿದರು. ಎಂಟನೇ ಶ್ರೇಯಾಂಕದ ಆಯುಷ್‌ ಪುರುಷರ ಸಿಂಗಲ್ಸ್‌ನ ಕ್ವಾರ್ಟರ್‌ ಫೈನಲ್‌ನಲ್ಲಿ 7-21, 14-21ರಿಂದ ಜಪಾನ್‌ನ ಒಗಾವಾ ಅವರಿಗೆ ಶರಣಾದರು. ಮಹಿಳೆಯರ ಸಿಂಗಲ್ಸ್‌ನಲ್ಲಿ ತಸ್ನಿಮ್ ಮಿರ್ ಮತ್ತು ಶ್ರೀಯಾನ್ಶಿ ವಲಿಶೆಟ್ಟಿ ಅವರೂ ಕ್ವಾರ್ಟರ್‌ ಫೈನಲ್‌ನಲ್ಲಿ ಅಭಿಯಾನ ಮುಗಿಸಿದರು. 

ಭಾರತದ ಲಕ್ಷ್ಯ ಸೇನ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.