ADVERTISEMENT

ಆರ್‌ಸಿಸಿ ಫಿಡೆ ರೇಟೆಡ್ ಕ್ಲಾಸಿಕಲ್‌ ಚೆಸ್ ಟೂರ್ನಿ: ಕರ್ನಾಟಕದ ಮೂವರ ಗೆಲುವಿನ ಓಟ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2025, 14:01 IST
Last Updated 27 ಸೆಪ್ಟೆಂಬರ್ 2025, 14:01 IST
ಪಂಕಜ್ ಭಟ್‌
ಪಂಕಜ್ ಭಟ್‌   

ಮಂಗಳೂರು: ಸ್ಥಳೀಯ ಆಟಗಾರ, ‘ಅರೆನಾ ಇಂಟರ್‌ನ್ಯಾಷನಲ್ ಮಾಸ್ಟರ್‌’ ಪಂಕಜ್ ಭಟ್ ಸೇರಿದಂತೆ ಕರ್ನಾಟಕದ ಮೂವರು ಇಲ್ಲಿ ನಡೆಯುತ್ತಿರುವ ಗ್ರ್ಯಾಂಡ್ ಆರ್‌ಸಿಸಿ ಫಿಡೆ ರೇಟೆಡ್  ಅಂತರರಾಷ್ಟ್ರೀಯ ಚೆಸ್ ಟೂರ್ನಿಯ‌ಲ್ಲಿ ಗೆಲುವಿನ ಓಟ ಮುಂದುವರಿಸಿದ್ದಾರೆ. 

ರಾವ್ಸ್‌ ಚೆಸ್ ಕಾರ್ನರ್, ನಗರದ ಶಾರದಾ ಕಾಲೇಜು ಆವರಣದಲ್ಲಿ ಆಯೋಜಿಸಿರುವ ಟೂರ್ನಿಯ‌ಲ್ಲಿ ಶನಿವಾರ ಐದು ಸುತ್ತುಗಳ ಮುಕ್ತಾಯಕ್ಕೆ ಪಂಕಜ್‌ ಐದು ಅಂಕಗಳೊಂದಿಗೆ  ಐವರ ಜೊತೆ ಅಗ್ರಸ್ಥಾನ ಹಂಚಿಕೊಂಡಿದ್ದಾರೆ. ಕರ್ನಾಟಕದ ಅದ್ವೈತ್ ರತ್ನಾಕರ್ ವಿಭೂತೆ, ಪ್ರಣವ್ ಎ.ಜೆ, ಕೇರಳದ ನಿತಿನ್ ಬಾಬು, ಮಣಿಪುರದ ವಿಕ್ರಮಜೀತ್ ಸಿಂಗ್‌ ಮತ್ತು ಇಂಟರ್‌ನ್ಯಾಷನಲ್ ಮಾಸ್ಟರ್‌ ಮುರಳಿಕೃಷ್ಣ ಬಿ.ಟಿ (ತಮಿಳುನಾಡು) ಅವರು 5 ಪಾಯಿಂಟ್ ಗಳಿಸಿರುವ ಇತರರು. 

ಆರು ಆಟಗಾರರು ತಲಾ 4.5 ಪಾಯಿಂಟ್‌ಗಳನ್ನು ಗಳಿಸಿದ್ದಾರೆ. ಇಂಟರ್‌ನ್ಯಾಷನಲ್ ಮಾಸ್ಟರ್ ಸರವಣ ಕೃಷ್ಣನ್ ಮತ್ತು ಎರಡನೇ ಶ್ರೇಯಾಂಕದ ಲಾಡ್ ಮಂದಾರ್ ಪ್ರದೀಪ್ (ತಲಾ 4 ಅಂಕ) ಅವರು ಮೂರನೇ ಸ್ಥಾನದಲ್ಲಿದ್ದಾರೆ. ಅಗ್ರ ಶ್ರೇಯಾಂಕಿತ ಆಟಗಾರ ಇಂಟರ್‌ನ್ಯಾಷನಲ್ ಮಾಸ್ಟರ್ ಎಂ.ಡಿ ಇಮ್ರಾನ್ (4  ಅಂಕ) ಶುಕ್ರವಾರ ಟೂರ್ನಿಯಿಂದ ಹೊರನಡೆದಿದ್ದರು.

ADVERTISEMENT

ನಾಲ್ಕನೇ ಸುತ್ತಿನಲ್ಲಿ ಸರವಣ ಕೃಷ್ಣನ್ ಅವರಿಗೆ ಆಘಾತ ನೀಡಿದ್ದ ತಮಿಳುನಾಡಿನ ಆದಿತ್ಯ ಎಸ್‌. ಐದನೇ ಸುತ್ತಿನಲ್ಲಿ ನಿತಿನ್ ಬಾಬುಗೆ ಮಣಿದರು. 

ಕೇರಳದ ಸಂದೀಪ್ ಸಂತೋಷ್ ವಿರುದ್ಧ ವಿಕ್ರಂ ಜೀತ್ ಸಿಂಗ್‌, ತಮಿಳುನಾಡಿನ ಕಿಶೋರ್ ವಿ.  ವಿರುದ್ಧ ಪಂಕಜ್ ಭಟ್‌, ಕರ್ನಾಟಕದ ನಂದಕುಮಾರ್ ವೀರೇಶ್ ಎಸ್ ವಿರುದ್ಧ ಮುರಳಿಕೃಷ್ಣ ಬಿ.ಟಿ, ರೈಲ್ವೆಯ ಅರ್ಜುನ್ ತಿವಾರಿ ವಿರುದ್ಧ ಕರ್ನಾಟಕದ ಪ್ರಣವ್‌, ತಮಿಳುನಾಡಿನ ನಿಖಿಲ್ ಟಿ.ಎಲ್ ವಿರುದ್ಧ ಕರ್ನಾಟಕದ ಅದ್ವೈತ್ ರತ್ನಾಕರ್ ಜಯ ಗಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.